ಚಿಕ್ಕಬಳ್ಳಾಪುರ: ಸರ್ಕಾರಿ ಶಾಲೆ ಎಂದರೆ ಮೂಗು ಮುರಿಯುತ್ತಿದ್ದ ಗ್ರಾಮಸ್ಥರು ಈಗ ಅದೇ ಸರ್ಕಾರಿ ಶಾಲೆ ಜಿಲ್ಲೆಯಲ್ಲಿಯೇ ಮಾದರಿ ಶಾಲೆ ಎಂದು ಹೆಮ್ಮೆ ಪಡುತ್ತಿದ್ದಾರೆ. ಈ ಶಾಲೆಯನ್ನು ಅಭಿವೃದ್ಧಿಗೊಳಿಸಿದ ಶಿಕ್ಷಕನಿಗೆ ರಾಜ್ಯಪ್ರಶಸ್ತಿ ಲಭಿಸಿರುವುದು ಜಿಲ್ಲೆಯ ಕೀರ್ತಿ ಮತ್ತಷ್ಟು ಹೆಚ್ಚಾದಂತಾಗಿದೆ.
ಪಾಳು ಬಿದ್ದಿದ್ದ ಸರ್ಕಾರಿ ಶಾಲೆಯನ್ನು ಮಾದರಿಯಾನ್ನಾಗಿಸಿ ಈಗ ಇಡೀ ರಾಜ್ಯದ ದೃಷ್ಟಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆಯ ಕಡೆ ತಿರುಗಿದಂತೆ ಮಾಡಿದ ಶಿಕ್ಷಕನ ಹೆಸರು ಚಂದ್ರಶೇಖರ್. ಪ್ರಾಥಮಿಕ ವಿಭಾಗದಿಂದ ರಾಜ್ಯಮಟ್ಟದ ಉತ್ತಮ ಶಿಕ್ಷಕರ ಪ್ರಶಸ್ತಿ ಲಭಿಸಿದೆ.
ಶಾಲಾ ಮಕ್ಕಳಿಗೆ ಇವರ ಬೋಧನೆ ಎಂದರೆ ಬಹಳ ಅಚ್ಚುಮೆಚ್ಚು, ಶಾಲೆಯಲ್ಲಿ ಎಲ್ಲ ಶಿಕ್ಷರಿಗಿಂತ ವಿಭಿನ್ನ. ಯಾವ ಖಾಸಗಿ ಶಾಲೆಗಿಂತಲೂ ಕಡಿಮೆಯಿಲ್ಲದಂತೆ ಮಕ್ಕಳಲ್ಲಿ ಆತ್ಮವಿಶ್ವಾಸ ಮೂಡಿಸಿದ ಶಿಕ್ಷಕ ಚಂದ್ರಶೇಖರ್.
ದಾನಿಗಳು ಹಾಗೂ ಎಸ್‌ಡಿಎಂಸಿ ಸಹಯೋಗ
ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಸರ್ಕಾರಿ ಶಾಲೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದ ನಂತರ ಚಿಕ್ಕಬಳ್ಳಾಪುರ ತಾಲೂಕಿನ ರಾಗಿಮಾಕಲಹಳ್ಳಿ ಸರ್ಕಾರಿ ಶಾಲೆಯಲ್ಲಿ 8 ವರ್ಷ ಸೇವೆ ಸಲ್ಲಿಸಿದ್ದಾರೆ. ಈ ಶಾಲೆ ಮೂಲ ಸೌಲಭ್ಯಗಳಿಂದ ವಂಚಿತವಾಗಿತ್ತು. ಅಂದಿನಿಂದ ಇಂದಿನವರೆಗೂ ದಾನಿಗಳ ಸಹಾಯದಿಂದ, ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿ ನೆರವಿನಿಂದ ಹಂತ ಹಂತವಾಗಿ ಶಾಲೆಯನ್ನು ಮಾದರಿಯನ್ನಾಗಿ ಮಾಡಿದ್ದಾರೆ. ಗುಣಮಟ್ಟದ ಶಿಕ್ಷಣ ಕೊಡುವ ಶಾಲೆಯಾಗಿ ಜಿಲ್ಲೆಯ ಜನತೆಯ ಮನಸ್ಸನ್ನು ಸೆಳೆಷದಿದ್ದಾರೆ. ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿರುವುದಕ್ಕೆ ಗ್ರಾಮಸ್ಥರು, ಸಹ ಶಿಕ್ಷಕರು ಹಾಗೂ ಶಾಲೆಯ ಮಕ್ಕಳು ತಮಗೇ ರಾಜ್ಯ ಪ್ರಶಸ್ತಿ ಬಂದಿರುವಷ್ಟು ಸಂತಸ ವ್ಯಕ್ತಪಡಿಸಿದ್ದಾರೆ.
ಈ ಪ್ರಶಸ್ತಿ ಮೂಲಕ ಮತ್ತಷ್ಟು ಹೆಚ್ಚಿನ ಕೆಲಸ ಮಾಡಲು ಪ್ರೇರಣೆ ಲಭಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಅಭಿವೃದ್ಧಿಯನ್ನು ಮಾಡುವ ಪ್ರಯತ್ನ ಮಾಡುತ್ತೇನೆ.
-ಚಂದ್ರಶೇಖರ್, ಪ್ರಶಸ್ತಿ ವಿಜೇತ ಶಿಕ್ಷಕ