Site icon Vistara News

Teachers Day | ಶಿಕ್ಷಣದ ಜತೆಗೆ ಸಾಹಿತ್ಯ ಪರಿಚಾರಕಿ ಮಲ್ಲಮ್ಮ ಪಾಟೀಲ

mallamma patil

ಬೀದರ್‌: ಮಾಡುವ ಕೆಲಸದಲ್ಲಿ ಶ್ರದ್ಧೆ‌ ಜತೆಗೆ ವಿಭಿನ್ನತೆ ಇದ್ದರೆ, ಏನನ್ನಾದರೂ ಸಾಧಿಸಬಹುದು ಅನ್ನೋದಕ್ಕೆ ಇಲ್ಲೊಬ್ಬರು ಸಾಕ್ಷಿ. ವೃತ್ತಿಯಲ್ಲಿ ಉಪನ್ಯಾಸಕಿ, ರಾಜ್ಯದ ಗಡಿಭಾಗದಲ್ಲಿ ಶೈಕ್ಷಣಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಕಾರಣರಾಗಿರುವ ಮಲ್ಲಮ್ಮ ಪಾಟೀಲ ಅವರನ್ನು ಈಗ ರಾಜ್ಯದ ಅತ್ಯುನ್ನತ ಉಪನ್ಯಾಸಕಿ ಪ್ರಶಸ್ತಿಯೂ ಅರಸಿಕೊಂಡು ಬಂದಿದೆ.

2021-22ನೇ ಸಾಲಿನ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿಗೆ ಆಯ್ಕೆಯಾದ ಮಲ್ಲಮ್ಮ ಪಾಟೀಲ ಅವರು ಬೀದರ್‌ ಜಿಲ್ಲೆಯ ಹುಲಸೂರ ತಾಲೂಕಿನ ಎಸ್‌ಕೆಪಿಎಸ್ ಸ್ವತಂತ್ರ ಪದವಿಪೂರ್ವ ಕಾಲೇಜಿನ ಅರ್ಥಶಾಸ್ತ್ರದ ಉಪನ್ಯಾಸಕಿ. 32 ವರ್ಷಗಳಿಂದ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ಸಾಹಿತ್ಯ ಸಂಸ್ಕೃತಿ ಸಮಾಜ ಸೇವೆಯಲ್ಲೂ ತೊಡಗಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಮಕ್ಕಳ ವಿದ್ಯಾಬ್ಯಾಸಕ್ಕೆ ಶ್ರಮಿಸಿದ, ಗಡಿಭಾಗದ ವಿದ್ಯಾರ್ಥಿಗಳ ಪಲಿತಾಂಶ ಸುಧಾರಣೆ ಮಾಡುವ ನಿಟ್ಟಿನಲ್ಲಿ ಶ್ರಮಿಸಿದ ಶಿಕ್ಷಕಿಗೆ ರಾಜ್ಯಪ್ರಶಸ್ತಿ ಅರಸಿ ಬಂದಿದೆ. ಮಲ್ಲಮ್ಮ ಪಾಟೀಲ್‌ ಅವರು 1989ರಲ್ಲಿ ಅರ್ಥಶಾಸ್ತ್ರದ ಉಪನ್ಯಾಸಕಿಯಾಗಿ ಶಿಕ್ಷಕ ವೃತ್ತಿಗೆ ಪದಾರ್ಪಣೆ ಮಾಡಿದರು. ಅಲ್ಲಿಂದ ಇಲ್ಲಿಯವರೆಗೆ 32 ವರ್ಷಗಳಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವುದು ಮತ್ತು ನಾನಾ ಕ್ರಿಯಾಶೀಲ ಚಟುವಟಿಕೆ ಮಾಡುತ್ತಾ ಬಂದಿದ್ದಾರೆ. ವಿಷಯ ಭೊಧನೆಯಲ್ಲಿ ಪರಿಣಾಮಕಾರಿ ಕ್ರಮಗಳ ಅನುಸರಣೆ ಕಾರಣ ಇವರ ವಿಷಯದಲ್ಲಿ ಶಾಲೆಯ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದಾರೆ.

ಇದನ್ನೂ ಓದಿ | Teachers Day | ಪಾಳುಬಿದ್ದಿದ್ದ ಕಟ್ಟಡವನ್ನು ಮಾದರಿ ಶಾಲೆಯಾಗಿಸಿದ ಚಿಕ್ಕಬಳ್ಳಾಪುರದ ಶಿಕ್ಷಕ ಚಂದ್ರಶೇಖರ್‌

ಕಾಲೇಜಿನಲ್ಲಿ ವಿದ್ಯಾರ್ಥಿಗಳನ್ನು ಸ್ವಂತ ಮಕ್ಕಳೆಂದೇ ಭಾವಿಸಿ ಬೋಧನೆ ಮಾಡುತ್ತಾರೆ. ಯಾರಿಗೂ ಶಿಕ್ಷಣದಲ್ಲಿ ಏನೂ ಕೊರತೆ ಆಗಬಾರದು ಎಂಬ ಆಶಯ ನನ್ನದು. ಹೀಗಾಗಿ ವಿದ್ಯಾರ್ಥಿಗಳಿಗೆ ಅರ್ಥವಾಗುವ ಹಾಗೆ ಪಾಠ ಬೋಧನೆ ಮಾಡಿದರೆ ಆಕರ್ಷಿತರಾಗುತ್ತಾರೆ ಎಂದು ಮಲ್ಲಮ್ಮ ಹೇಳುತ್ತಾರೆ. ಉಪನ್ಯಾಸಕ ವೃತ್ತಿಯ ಜೊತೆಗೆ ಸಾಂಸ್ಕೃತಿಕ, ಸಮಾಜ ಸೇವೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಸಾಹಿತ್ಯ ಕೃಷಿಯಲ್ಲೂ ಗುರುತಿಸಿಕೊಂಡಿದ್ದಾರೆ. ವಿವಿಧ ವಿಷಯಗಳ ಮೇಲೆ ಹಲವಾರು ಲೇಖನಗಳನ್ನು ಬರೆದು ಪ್ರಕಟಿಸಿರುವ ಇವರು ʼಶಿವಯೋಗಿ ಚನ್ನಬಸವʼ ಕಾದಂಬರಿ, ʼಶ್ರದ್ಧಾಂಜಲಿʼ ಕವನ ಸಂಕಲನ ಮತ್ತು ʼಮಲ್ಲಮ್ಮರ ವಚನಗಳುʼ ಪುಸ್ತಕಗಳನ್ನು ಬರೆದಿದ್ದಾರೆ. ಬಸವ ತತ್ವದ ಬಗ್ಗೆ ಆಳವಾದ ಅಧ್ಯಯನವನ್ನು ಕೂಡಾ ಮಾಡಿದ್ದಾರೆ. ರಾಜ್ಯ ಮಟ್ಟದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿ ವಿವಿಧ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದ ಮ್ಕಕಳು ಉತ್ತಮ ಗುಣಮಟ್ಟದ ಶಿಕ್ಷಣ ಪಡೆಯಬೇಕೆಂಬುದು ನನ್ನ ಕನಸು. ಪ್ರಶಸ್ತಿಯಿಂದ ನನ್ನ ಮೇಲೆ ಮತ್ತಷ್ಟು ಜವಾಬ್ದಾರಿ ಹೆಚ್ಚಾಗಿದೆ ಎಂದು ಮಲ್ಲಮ್ಮ ಹೇಳುತ್ತಾರೆ.

ಇದನ್ನೂ ಓದಿ | Award | ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ; ಯಾವ ಜಿಲ್ಲೆಯ ಯಾರಿಗೆ ಗರಿ, ಶಿಕ್ಷಕರ ವೈಶಿಷ್ಟ್ಯವೇನು?

Exit mobile version