Site icon Vistara News

Teachers day | ನಕ್ಸಲ್‌ ಪೀಡಿತ ಊರಿನಲ್ಲಿ ಶಿಕ್ಷಣದ ಹೂ ಅರಳಿಸಿದ ಶಿಕ್ಷಕ

teacher sanjiv devadiga

ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬ ಕಾಡಂಚಿನ, ನಕ್ಸಲ್‌ ಪೀಡಿತ ಊರಿನ ಶಿಕ್ಷಕ ಈ ಬಾರಿ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಭಾಜನರಾಗುತ್ತಿದ್ದಾರೆ. ಕೆರ್ವಾಶೆ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗ ಈ ಬಾರಿ ಜಿಲ್ಲೆಯ ಹಿರಿಮೆ ಗರಿಮೆ ಮೇಲೆತ್ತಿ ಹಿಡಿದ ಶಿಕ್ಷಕರು.

ಕಳೆದ ಬಾರಿ ಕೊರೋನಾ ಸಾಂಕ್ರಾಮಿಕದ ಸಂದರ್ಭದಲ್ಲಿ ಇಲ್ಲಿನ ಕಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಪಾಠಕ್ಕೆ ನೆಟ್‌ವರ್ಕ್ ಸಮಸ್ಯೆಯಾಯಿತು. ಇನ್ನೊಂದೆಡೆ ಈ ಊರಿನ ಬಹುತೇಕರು ಬಡವರು, ಅವರ ಮಕ್ಕಳು ಆನ್‌ಲೈನ್ ಪಾಠಕ್ಕೆ ಮೊಬೈಲ್, ಟ್ಯಾಬ್‌ಗಳನ್ನು ಖರೀದಿಸುವುದು ಸಾಧ್ಯವಿರಲಿಲ್ಲ. ಇದರಿಂದ ಈ ಕಿರಿಯ ಪ್ರಾಥಮಿಕ ಶಾಲೆಯ ನೂರಕ್ಕೂ ಅಧಿಕ ಮಕ್ಕಳು ವರ್ಷವಿಡೀ ಪಾಠದಿಂದ ವಂಚಿತರಾಗುವಂತಹ ಪರಿಸ್ಥಿತಿ ನಿರ್ಮಾಣವಾಯಿತು.

ಆಗ ಶಾಲೆಯ ಮುಖ್ಯ ಶಿಕ್ಷಕ ಸಂಜೀವ ದೇವಾಡಿಗರು ಒಂದು ವಿನೂತನ ಪರಿಕಲ್ಪನೆಯನ್ನು ಜಾರಿಗೆ ತಂದರು, ಊರಿನ 10 ಮಂದಿ ಪದವೀಧರ ಹೆಣ್ಣಮಕ್ಕಳಿಂದ ಅವರ ಮನೆಯಲ್ಲಿ ವಾರದ 10- 12 ಮಕ್ಕಳನ್ನು ಸೇರಿಸಿ ನಿತ್ಯ ಪಾಠ ಮಾಡುವ ವ್ಯವಸ್ಥೆ ಮಾಡಿದರು. ಅದಕ್ಕೆ ʻಅಕ್ಕನ ಮನೆ ಪಾಠʼ ಎಂದು ಹೆಸರಿಟ್ಟರು. ಈ ಮೂಲಕ ಶಾಲೆಯ ಮಕ್ಕಳು ಶಿಕ್ಷಣ ವಂಚಿತರಾಗುವುದು ತಪ್ಪಿತು. ಅವರ ಈ ವಿನೂತನ ಪರಿಕಲ್ಪನೆಯನ್ನು ಗುರುತಿಸಿದ ಸರ್ಕಾರ ಈ ಬಾರಿಯ ರಾಜ್ಯ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆ ಮಾಡಿದೆ.

ಸಂಜೀವ ದೇವಾಡಿಗರು ಈ ಶಾಲೆಗೆ 2014ರಲ್ಲಿ ಸೇರುವಾಗ ಶಾಲೆ ಮುಚ್ಚುವ ಹಂತದಲ್ಲಿತ್ತು, 1ರಿಂದ 5ರವರೆಗೆ ಕೇವಲ 30 ಮಕ್ಕಳಿದ್ದರು, ಈಗ ಈ ಶಾಲೆಯ ವಿದ್ಯಾರ್ಥಿಗಳ ಸಂಖ್ಯೆ 117, ಇದು ಕೇವಲ ಸರ್ಕಾರಿ ಶಾಲೆ ಅಲ್ಲ, ಇಂದು ಸಂಜೀವ ದೇವಾಡಿಗರ ಶ್ರಮದಿಂದ ಹೈಟೆಕ್‌ ಸರ್ಕಾರಿ ಶಾಲೆ ಆಗಿದೆ. ಎಲ್‌ಕೆಜಿ, ಯುಕೆಜಿ ಆರಂಭಿಸಲಾಗಿದೆ. ದಾನಿಗಳ ನೆರವಿನಿಂದ 40 ಲಕ್ಷ ರು. ವೆಚ್ಚದಲ್ಲಿ ಶಾಲಾ ಕಟ್ಟಡ ಗಟ್ಟಿಗೊಳಿಸಲಾಗಿದೆ. ಪ್ರಯೋಗಾಲಯ ವ್ಯವಸ್ಥೆ ಮಾಡಲಾಗಿದೆ, 1ನೇ ತರಗತಿಯಿಂದಲೇ ಕಂಪ್ಯೂಟರ್ ಶಿಕ್ಷಣ ನೀಡಲಾಗುತ್ತಿದೆ. 200 ಮೀಟರ್‌ ಟ್ರ್ಯಾಕ್‌ನ ಕ್ರೀಡಾಂಗಣವನ್ನು ನಿರ್ಮಿಸಲಾಗಿದೆ.

ಎಲ್‌ಕೆಜಿಯಿಂದಲೇ ಇಂಗ್ಲಿಷ್ ಭಾಷೆ ಕಲಿಸಲಾಗುತ್ತಿದೆ. ಪ್ರತಿವರ್ಷ ಮಕ್ಕಳ ಹೆತ್ತವರನ್ನು ಶಾಲೆಗೆ ಕರೆಸಿ ಇಂಗ್ಲಿಷ್ ಫೆಸ್ಟ್ ಎಂಬ ಕಾರ್ಯಕ್ರಮದ ಮೂಲಕ ಹೆತ್ತವರಿಗೆ ಶಾಲಾ ಗುಣಮಟ್ಟವನ್ನು ಪರಿಚಯಿಸಲಾಗುತ್ತಿದೆ. ಈ ಊರಿನ ರಸ್ತೆಯಲ್ಲಿ ಈಗ 4 ಆಂಗ್ಲ ಮಾಧ್ಯಮ ಶಾಲೆಗಳ ಶಾಲಾ ಬಸ್ಸುಗಳು ಬರುತ್ತವೆ. ಬಸ್ಸುಗಳ ವ್ಯವಸ್ಥೆ ಇದ್ದರೂ ಯಾವ ವಿದ್ಯಾರ್ಥಿಯೂ ಈ ಶಾಲೆ ಬಿಟ್ಟು ಬೇರೆ ಆಂಗ್ಲ ಮಾಧ್ಯಮ ಶಾಲೆಗಳಿಗೆ ಹೋಗಿಲ್ಲ. ಇಷ್ಟೆಲ್ಲದರ ಹಿಂದೆ ಇರುವ ಶಕ್ತಿ ಸಂಜೀವ ದೇವಾಡಿಗರಿಗೆ ಅರ್ಹವಾಗಿಯೇ ಈ ಬಾರಿ ರಾಜ್ಯ ಪ್ರಶಸ್ತಿ ಬಂದಿದೆ.

ಗ್ರಾಮದ ಕಾರು ನಿವಾಸಿ ಸಂಜೀವ ದೇವಾಡಿಗರು 1994ರಲ್ಲಿ ಕಾರು ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ವೃತ್ತಿಗೆ ಪಾದಾರ್ಪಣೆ ಮಾಡಿದರು. ಅಲ್ಲಿಂದ ಹರ್ಮುಂಡೆ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ಬಂದರು. ತಾಲೂಕು ಕ್ಷೇಮ ಸಂಪನ್ಮೂಲ ಕೇಂದ್ರಕ್ಕೆ ವರ್ಗವಾದರು. ಮುಂದೆ ಶಿರ್ವಾಲು ಬಂಗ್ಲೆಗುಡ್ಡೆ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕಾರ್ಯ ನಿರ್ವಹಿಸಿ, ಪ್ರಸ್ತುತ ಬಡ್ತಿ ಪಡೆದು ಮಿಯ್ಯಾರು ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದಾರೆ. ಅವರು ಈಗಾಗಲೇ ಮೈಸೂರು ಗ್ರಾಮೀಣ ವಿಶಿಷ್ಟ ಸೇವಾ ಪುರಸ್ಕಾರ, ಭಾರತ ಸೇವಾದಳದಲ್ಲಿ ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದ್ದಾರೆ.

Exit mobile version