ತುಮಕೂರು: ರಾಜ್ಯದ ಗಡಿನಾಡು ಪಾವಗಡ ತಾಲೂಕು ಕೆ.ರಾಂಪುರ ಸರ್ಕಾರಿ ಶಾಲೆ ಶಿಕ್ಷಕ ಚಂದ್ರಶೇಖರ ರೆಡ್ಡಿ ರಾಜ್ಯಮಟ್ಟದ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಮೂಲತಃ ಮಧುಗಿರಿ ತಾಲೂಕು ಕೊಡಿಗೇನಹಳ್ಳಿ ಹೋಬಳಿಯ ಕಡಗತ್ತೂರು ಗ್ರಾಮದ ಚಂದ್ರಶೇಖರ ರೆಡ್ಡಿ, ರಾಯಚೂರು ಜಿಲ್ಲೆ ಲಿಂಗಸಗೂರು ತಾಲೂಕು ಸೋಂಪುರ ಸರ್ಕಾರಿ ಶಾಲೆಯಲ್ಲಿ 2007ರಲ್ಲಿ ಸೇವೆ ಆರಂಭಿಸಿದರು. ಪ್ರಸ್ತುತ ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಪಾವಗಡ ತಾಲೂಕು ಕೆ.ರಾಂಪುರದಲ್ಲಿ 2016ರಿಂದ ವಿದ್ಯಾರ್ಥಿಸ್ನೇಹಿ ಶಿಕ್ಷಕರಾಗಿ ಗುರುತಿಸಿಕೊಂಡು ಸೇವೆ ಸಲ್ಲಿಸುತ್ತಿದ್ದಾರೆ. ಕೆ.ರಾಂಪುರ ಸರ್ಕಾರಿ ಶಾಲೆಯನ್ನು ಮಾದರಿ ಶಾಲೆಯಾಗಿ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಶ್ರಮಿಸಿರುವ ಚಂದ್ರಶೇಖರ ರೆಡ್ಡಿ ಅವರಿಗೆ ಅರ್ಹವಾಗಿಯೇ ಪ್ರಶಸ್ತಿ ಲಭಿಸಿದೆ.
28-07-2007ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕನಾಗಿ ಸೇವೆಗೆ ಸೇರಿದ್ದ ಚಂದ್ರಶೇಖರ ರೆಡ್ಡಿ, ಈ ಹಿಂದೆ ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಸೊಂಪುರ ತಾಂಡ, ಈಚನಾಳ ತಾಂಡ ಶಾಲೆಯಲ್ಲಿ ಕಾರ್ಯನಿರ್ವಹಿಸಿದ್ದರು. ನಂತರ 10-07-2016ರಲ್ಲಿ ಪಾವಗಡ ತಾಲೂಕಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಕೆ.ರಾಂಪುರ ಶಾಲೆಗೆ ವರ್ಗಾವಣೆಯಾಗಿ ಬಂದು ಕಾರ್ಯನಿರ್ವಹಿಸುತ್ತಿದ್ದಾರೆ. ಕಳೆದ 5 ವರ್ಷಗಳಿಂದ ಈ ಊರಿನ ಶೇ.100% ಮಕ್ಕಳು ಸರ್ಕಾರಿ ಶಾಲೆಯಲ್ಲಿಯೇ ದಾಖಲಾತಿ ಹೊಂದಿದ್ದು, ಇಲ್ಲಿಯೇ ಗುಣಮಟ್ಟದ ಶಿಕ್ಷಣವನ್ನು ಪಡೆಯಲು ಚಂದ್ರಶೇಖರ ರೆಡ್ಡಿ ಶ್ರಮವಹಿಸಿದ್ದಾರೆ.
ಶಿಕ್ಷಣ ಇಲಾಖೆಯ ಅನುಮತಿಯೊಂದಿಗೆ ಪಾವಗಡದ ಶ್ರೀ ರಾಮಕೃಷ್ಣ ಸೇವಾಶ್ರಮ ಅಧ್ಯಕ್ಷರಾದ ಶ್ರೀ ಜಪಾನಂದ ಸ್ವಾಮಿಜಿಯವರ ಮನವೊಲಿಸಿ ಕೆ. ರಾಂಪುರ ಶಾಲೆಯನ್ನು ದತ್ತು ಪಡೆಯಲು ಶ್ರಮಿಸಿದರು. 2019ರಲ್ಲಿ ಮಾನ್ಯ ಶಿಕ್ಷಣ ಸಚಿವರಾದ ಸುರೇಶ್ ಕುಮಾರ್ ಸಮ್ಮುಖದಲ್ಲಿ ರಾಮಕೃಷ್ಣ ಆಶ್ರಮ ಈ ಶಾಲೆಯನ್ನ ದತ್ತು ಪಡೆಯಿತು.
ಇದನ್ನೂ ಓದಿ | Teachers Day | ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಸರ್ಕಾರಿ ಶಾಲೆ ಕಟ್ಟಿದ ಈರಪ್ಪ ರೇವುಡಿ
ಖಾಸಗಿ ಶಾಲೆಗಳಿಗಿಂತ ಮಿಗಿಲಾಗಿ ಈ ಸರ್ಕಾರಿ ಶಾಲೆಯನ್ನು ಬೆಳೆಸಿದ ಕೀರ್ತಿ ಚಂದ್ರಶೇಖರ ರೆಡ್ಡಿಯವರದ್ದು. ಈ ಕಿರಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಿರುವ ಎಲ್ಲಾ ಮಕ್ಕಳಿಗೆ ಲೇಖನ ಸಾಮಗ್ರಿಗಳು, ಕಲಿಕೋಪಕರಣಗಳು, ಶಾಲೆಗೆ ಬೇಕಾದ ಭೌತಿಕ ಸೌಲಭ್ಯಗಳು ಹಾಗೂ ಪೀಠೋಪಕರಣಗಳು, ಬಿಸಿಯೂಟದ ಅಡುಗೆಗೆ ಬೇಕಾದ ಪಾತ್ರೆ ಪರಿಕರಗಳು ಸೇರಿದಂತೆ ಒಟ್ಟಾರೆ ಕಳೆದ 5 ವರ್ಷಗಳಿಂದ ಸುಮಾರು ಎಂಟು ಲಕ್ಷದ ಮೌಲ್ಯದ ವಸ್ತುಗಳನ್ನು ದಾನಿಗಳು, ಸಂಘ ಸಂಸ್ಥೆಗಳು, ಶ್ರೀರಾಮಕೃಷ್ಣ ಸೇವಾಶ್ರಮ ಪಾವಗಡ ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸಮಿತಿ, ಪೋಷಕರು ಮತ್ತು ಹಳೇ ವಿದ್ಯಾರ್ಥಿಗಳಿಂದ ದಾನ ಪಡೆದು ಶಾಲೆಯನ್ನು ಸರ್ವತೋಮುಖವಾಗಿ ಅಭಿವೃದ್ಧಿಗೊಳಿಸಲಾಗಿದೆ. ಶಾಲೆಯನ್ನು ಸುಣ್ಣ ಬಣ್ಣ ಹಾಗೂ ಗೋಡೆಬರಹಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ.
ಮಕ್ಕಳ ಕಲಿಕೆಯ ಗುಣಮಟ್ಟವನ್ನು ಹೆಚ್ಚಿಸಲು ಶಾಲೆಯಲ್ಲಿರುವ ದೂರದರ್ಶನವನ್ನು ಪರಿಣಾಮಕಾರಿಯಾಗಿ ಬಳಿಸಿಕೊಳ್ಳಲಾಗಿದೆ. ಕಳೆದ 5 ವರ್ಷಗಳಿಂದ 5ನೇ ತರಗತಿಯ ಎಲ್ಲಾ ಮಕ್ಕಳು ಮೊರಾರ್ಜಿ ವಸತಿ ಶಾಲೆಯ ಪ್ರವೇಶ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದು ವಸತಿ ಶಾಲೆಗಳಲ್ಲಿ ಓದುತ್ತಿದ್ದಾರೆ. ಈ ಹಿಂದೆ ಕೆ.ರಾಂಪುರ ಗ್ರಾಮ ಅಸಾಕ್ಷರ ಗ್ರಾಮವಾಗಿತ್ತು. ಅದನ್ನು ಹೊಗಲಾಡಿಸಿ ಸಾಕ್ಷರ ಗ್ರಾಮವಾಗಿತ್ತು. ಈಗ ಅದೇ ಗ್ರಾಮದ ಶಾಲೆಯ ಶಿಕ್ಷಕ ರಾಜ್ಯ ಪ್ರಶಸ್ತಿ ಗಳಿಸಿರುವುದು ರಾಜ್ಯಕ್ಕೆ ಮಾದರಿಯಾಗಿದೆ.
ಇದನ್ನೂ ಓದಿ | Teachers Day | ನೀತಿಕತೆ, ಬೆಡಗುಗಳೊಂದಿಗೆ ಕಲಿಕೆಗೆ ಮೆರಗು ನೀಡಿದ ಶಿಕ್ಷಕ!