ಹಾವೇರಿ: ಖಾಸಗಿ ಶಾಲೆಗಳ ನಾಗಾಲೋಟದಲ್ಲಿ ಸರ್ಕಾರಿ ಶಾಲೆಗಳು ಕಲಿಕೆ ಮತ್ತು ಅಭಿವೃದ್ಧಿಯಲ್ಲಿ ಹಿಂದುಳಿದಿಲ್ಲ ಎಂಬುದನ್ನು ಶಾಲೆಯ ಮುಖ್ಯ ಶಿಕ್ಷಕರಾಗಿ ಕೊಟ್ರಪ್ಪ ಮೇಲ್ಮುರಿ ತೋರಿಸಿಕೊಟ್ಟಿದ್ದಾರೆ. ಇಂಗ್ಲಿಷ್ ಭಾಷೆ ಗ್ರಾಮೀಣ ಮಕ್ಕಳಿಗೆ ರುಚಿಸುವಂತೆ ಸರಳ ಓದು, ಶುದ್ಧ ಬರಹ ಪದ ಸಂಗ್ರಹದ ಕಲಿಕೋಪಕರಣಗಳನ್ನು ಶಾಲೆಯಲ್ಲಿ (Teachers’ Day) ಅಳವಡಿಸಿದ್ದಾರೆ. ಇದು ಮಕ್ಕಳ ಕಲಿಕಾ ಸಾಮರ್ಥ್ಯದ ಮೇಲೆ ಉತ್ತಮ ಪರಿಣಾಮ ಬೀರಿದೆ.
ನಲಿಕಲಿಯಲ್ಲಿ ಸ್ವಯಂ ಕಲಿಕೆ, ಗುಂಪು ಕಲಿಕೆ ಜಾರುಪಟ್ಟಿ, ತಟ್ಟೆ ಚಪ್ಪರ ಅಳವಡಿಕೆ, ವಿಜ್ಞಾನಗಳ ಸರಳ ಪ್ರಯೋಗಗಳು, ಗಣಿತದ ಸರಳ ಲೆಕ್ಕಗಳನ್ನು ಮಕ್ಕಳಿಗೆ ನಾವೀನ್ಯತೆಯ ಬೋಧನಾ ಕ್ರಮ ಅಳವಡಿಸಿ ದಿನವೂ ಪರಿಸರದಲ್ಲಿ ಕಲಿಕಾ ವಾತಾವರಣ ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಾಸಕರ ಅನುದಾನದಿಂದ ಹಾಗೂ ಗ್ರಾಮ ಪಂಚಾಯಿತಿಯಿಂದ 10 ಲಕ್ಷ ರೂ. ಮೌಲ್ಯದ ಅಭಿವೃದ್ಧಿ ಕಾರ್ಯಗಳನ್ನು ಶಾಲೆಯಲ್ಲಿ ಮಾಡಿಸಿದ್ದಾರೆ.
ಶಾಲಾವನ ನಿರ್ಮಾಣ ಮಾಡಿ, ರಾಸಾಯನಿಕ ಗೊಬ್ಬರ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಿಸಿದ್ದಾರೆ. ಶಾಲಾವನಕ್ಕೆ ರಕ್ಷಣಾ ಗೋಡೆ, ಸೊಪ್ಪು ಬೆಳೆಯುವಿಕೆ, ಸುಂದರ ಸ್ವಚ್ಛ ಪರಿಸರ ನಿರ್ಮಾಣ ಮಾಡಿದ್ದಾರೆ. ಪ್ರತಿ ಶುಕ್ರವಾರ ಸಾಂಸ್ಕೃತಿಕ ಸಂಜೆ ನಾವೀನ್ಯತಾ ಕಾರ್ಯಕ್ರಮ, ತಾಯಂದಿರ ಸಭೆ, ಪಾಲಕರ ಸಭೆ, ಶಾಲೆಗೆ ಬನ್ನಿ ಶನಿವಾರ, ವಿಶಿಷ್ಟ ಪರಿಹಾರ ಬೋಧನೆ ಇತ್ಯಾದಿ ಅಂಶಗಳನ್ನು ಹಂದಿಗನೂರು ಶಾಲೆಯಲ್ಲಿ ಅಳವಡಿಸಿ ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದನ್ನು ಓದಿ | Teacher’s Day | ಗ್ರಾಮೀಣ ಮಕ್ಕಳನ್ನು ಆಟದಲ್ಲಿ ಗೆಲ್ಲಿಸಿದ ಸಕ್ಕರೆನಾಡಿನ ಸಾಧಕ ಬಾಲಸುಬ್ರಮಣ್ಯ
30 ವರ್ಷಗಳ ಸಾರ್ಥಕ ಸೇವೆ
ಹಾನಗಲ್ಲ ತಾಲೂಕು ಮಲ್ಲಿಗಾರ ಓಣಿ ಶಾಲೆಯಲ್ಲಿ 1992ರಲ್ಲಿ ಕೊಟ್ರಪ್ಪ ಮೇಲ್ಮುರಿ ಶಿಕ್ಷಕ ವೃತ್ತಿ ಆರಂಭಿಸಿ, ಸಮೂಹ ಸಂಪನ್ಮೂಲ ವ್ಯಕ್ತಿ (ಸಿಆರ್‌ಪಿ) ಆಗಿ 7 ವರ್ಷ ಸೇವೆ ಸಲ್ಲಿಸಿದ್ದಾರೆ. ಬಳಿಕ ತಾಲೂಕಿನ ಕೊರಡೂರು ಶಾಲೆ, ಸದ್ಯ ಹಂದಿಗನೂರು ಶಾಲೆ ಮುಖ್ಯಶಿಕ್ಷಕ ಮೇಲ್ಮುರಿ ಅವರು ಕ್ರಿಯಾಶೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಾದರಿ ಶಾಲೆಯಾಗಿ ರೂಪಿಸಲು ಶ್ರಮ
ಮಲ್ಲಿಗಾರ ಶಾಲೆಯಲ್ಲಿ ಹೆಚ್ಚಾಗಿ ಲಮಾಣಿ ಸಮುದಾಯದ ಮಕ್ಕಳೇ ಕಲಿಯುತ್ತಿದ್ದರು. ಶಾಲೆಯ ಶೋಚನೀಯ ಸ್ಥಿತಿಯನ್ನು ಕಂಡು ಶಾಲೆಗೆ ಒಂದು ಹೊಸ ರೂಪು ನೀಡಲು ಸಂಕಲ್ಪ ಮಾಡಿದರು. ಊರ ಹಿರಿಯರ, ಶಿಕ್ಷಣ ಪ್ರೇಮಿಗಳ ಸಭೆ ಮಾಡಿ ದಾಖಲಾತಿ, ಹಾಜರಾತಿ ಆಂದೋಲನ ಕೈಗೊಂಡು ಸಮೀಪದ ಸಾತೇನಹಳ್ಳಿ ಗ್ರಾಮಕ್ಕೆ ಹೋಗಿ ಅಲ್ಲಿಂದ ಮಕ್ಕಳನ್ನು ತಮ್ಮ ಶಾಲೆಗೆ ದಾಖಲು ಮಾಡಿಕೊಂಡು ಮಕ್ಕಳ ಸಂಖ್ಯೆಯನ್ನು 60ಕ್ಕೆ ಹೆಚ್ಚಿಸಿದರು.
ಮಲೆನಾಡಿನ ಮಣ್ಣಿನ ಗುಣ ಅರಿತು, ಅತ್ಯುತ್ತಮವಾದ ಕೈತೋಟ ನಿರ್ಮಾಣ, ತೃಪ್ತಿಕರ ಸೇವೆಯನ್ನು ಗುರುತಿಸಿ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾಗಿ ಇಲಾಖೆ ಆಯ್ಕೆ ಮಾಡಿತು. ಸುಮಾರು 10 ವರ್ಷಗಳ ಕಾಲ ಶಿಕ್ಷಕರಿಗೆ ತರಬೇತಿ ಕೊಡುತ್ತಾ, ತಾವೂ ಕಲಿಯುತ್ತಾ, ಗುಣಾತ್ಮಕ ಶಿಕ್ಷಣ ಚಟುವಟಿಕೆಯಲ್ಲಿ ಯಶಸ್ಸು ಕಂಡರು. ಇದುವರೆಗಿನ 30 ವರ್ಷಗಳ ಸಾರ್ಥಕ ಸೇವೆಯಲ್ಲಿ ಇವರ ಅನೇಕ ಶಿಷ್ಯರು ಉನ್ನತ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅರಳೇಶ್ವರ, ಕೊರಡೂರ ಶಾಲೆಯಲ್ಲಿ ಸೇವೆಗೈದು 2014ರಿಂದ ಬಡ್ತಿ ಪಡೆದ ಇವರು ಮುಖ್ಯೋಪಾಧ್ಯಾಯರಾಗಿ ಹಂದಿಗನೂರ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಶಾಲೆಯಲ್ಲಿ ಉತ್ತಮ ಪರಿಸರ ಸಂರಕ್ಷಣೆ ಮಾಡಿ ಮೂರು ಬಾರಿ ಜಿಲ್ಲಾ ಪರಿಸರ ಮಿತ್ರ ಪ್ರಶಸ್ತಿಯನ್ನು ಪಡೆದಿದ್ದಾರೆ. ವಿದ್ಯಾಗಮ ಕಾರ್ಯಕ್ರಮದಲ್ಲೂ ಶಾಲೆಯ ಪ್ರಗತಿಯನ್ನು ಕಂಡು ಇಲಾಖೆ ಅಧಿಕಾರಿಗಳು ಪ್ರಶಂಸಿಸಿದ್ದರು.
ಶಿಕ್ಷಕರಿಗೆ ಪ್ರಶಸ್ತಿ ಬರುವುದು ಕಡಿಮೆ. ಈ ಬಾರಿಯ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ತುಂಬಾ ಸಂತೋಷವಾಗುತ್ತಿದೆ. ಇದರಿಂದ ಜವಾಬ್ದಾರಿ ಮತ್ತಷ್ಟು ಹೆಚ್ಚಿದೆ. ಮಕ್ಕಳ ಕಲಿಕೆ, ಸಾಧನೆಯಲ್ಲೇ ನಾವು ಸಂತಸ ಕಾಣುತ್ತೇವೆ.
| ಕೊಟ್ರಪ್ಪ ಮೇಲ್ಮುರಿ, ಶಿಕ್ಷಕ