ಶಿವಮೊಗ್ಗ: ಪಾಠ ಬೋಧನೆಯಲ್ಲಿ ಮೌಲ್ಯ ಶಿಕ್ಷಣಕ್ಕೆ ಒತ್ತು ನೀಡಿ ನೀತಿಕತೆ, ಒಗಟು, ಬೆಡಗು, ಗಾಧೆ, ಜನಪದ ಹಾಡು, ವೈಜ್ಞಾನಿಕ ಮನೋಭಾವನೆಗಳೊಂದಿಗೆ ಪಾಠ ಮಾಡುವುದು ಈ ಶಿಕ್ಷಕರ (Teachers Day) ವಿಶೇಷ. ಇವರು ಮಕ್ಕಳ, ಜನಮೆಚ್ಚಿದ ಶಿಕ್ಷಕರು.
ಶಿವಾನಂದಪ್ಪ ಬಿ. ಎಂಬ ಈ ಮಾದರಿ ಶಿಕ್ಷಕರು ಹಾಲಿ ಶಿಕಾರಿಪುರ ತಾಲೂಕಿನ ಹರಗುವಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದು, ಇದೇ ತಾಲೂಕಿನ ಕುಸ್ಕೂರು ಗ್ರಾಮದವರಾಗಿದ್ದಾರೆ. 1998ರಿಂದ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಇವರು, ಮೊದಲು 1998 ರಿಂದ 2012ರವರೆಗೆ ಸೊರಬ ತಾಲೂಕು ತಲಗಡ್ಡೆ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಣೆ ಮಾಡಿದ್ದಾರೆ.
ಮಕ್ಕಳಿಗೆ ಹೆಚ್ಚಿನ ಜ್ಞಾನಕ್ಕಾಗಿ ಚಿಂತನ ವಿಜ್ಞಾನ ಪರೀಕ್ಷೆ, ವಚನ ಕಮ್ಮಟ ಪರೀಕ್ಷೆ ಕನ್ನಡ ಜ್ಞಾನ ಪರೀಕ್ಷೆ ನಡೆಸಿದ್ದಾರೆ. ಪಾಠಗಳಿಗೆ ಪೂರಕವಾಗಿ ಕ್ಷೇತ್ರ/ಸ್ಥಳಗಳನ್ನು ಚೀಟಿ ಮೂಲಕ ತೋರಿಸಿ ಕಲಿಸುತ್ತಾರೆ. ಕ್ಲಸ್ಟರ್ ಮಾಸ ಪತ್ರಿಕೆ ಶಿಕ್ಷಣ ಜ್ಯೋತಿಯಲ್ಲಿ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ. ರಾಷ್ಟ್ರೀಯ ಕಾರ್ಯಕ್ರಮಗಳು ಹಾಗೂ ಹಲವು ಪಾಠಗಳಿಗೆ ಲ್ಯಾಪ್‌ಟಾಪ್ ಬಳಸಿ ಪಾಠ ಮಾಡುವ ಮೂಲಕ ಮಕ್ಕಳ ಕಲಿಕೆಗೆ ಮತ್ತಷ್ಟು ಪೂರಕ ವಾತಾವರಣವನ್ನು ಇವರು ಕಲ್ಪಿಸಿದ್ದಾರೆ. ಕೊರೊನಾ ಸಂದರ್ಭದಲ್ಲಿ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಮೂಡಿಸುವಲ್ಲಿ ಸಫಲರಾಗಿದ್ದರು.
ಕ್ರಿಯಾಶೀಲ ಶಿಕ್ಷಕ
ಶಿಕ್ಷಕ ಎಂದರೆ ಪಾಠ ಮಾಡುವುದು, ಕೆಲಸ ಮುಗಿಸಿ ತೆರಳುವ ಕಾಯಕವನ್ನಷ್ಟೇ ಇವರು ಮಾಡಿದವರಲ್ಲ. ತಮ್ಮನ್ನು ತಾವು ಇತರ ಚಟುವಟಿಕೆಯಲ್ಲಿ ತೊಡಗಿಸಿಕೊಂಡವರು. ಶಿಕ್ಷಣದ ಜತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದು, ಜಿಲ್ಲಾ ಯುವಜನ ಸೇವಾ ಕ್ರೀಡಾ ಇಲಾಖೆಯಲ್ಲಿ 1996-97ರಲ್ಲಿ ಎರಡು ವರ್ಷ ಕೆವೈಎಸ್‌ಸಿಯಾಗಿದ್ದರು. ನಂತರ ನೆಹರು ಯುವಕೇಂದ್ರದಲ್ಲಿ ಎರಡು ವರ್ಷ ಸ್ವಯಂ ಸೇವಕರಾಗಿದ್ದರು. ಇದಲ್ಲದೆ ಪರಿವರ್ತನ ಗ್ರಾಮಾಭಿವೃದ್ಧಿ ಸಂಸ್ಥೆಯಲ್ಲಿ ಸ್ವಯಂ ಸೇವಕರಾಗಿ ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಭದ್ರಾವತಿ ಆಕಾಶವಾಣಿಯಲ್ಲಿ ಯುವ ಜಾಗೃತಿ, ಕನ್ನಡ ನಾಡು-ನುಡಿ ಬಗ್ಗೆ ಸಂದರ್ಶನ ಹಾಗೂ ಕಾರ್ಯಕ್ರಮ ಕೊಟ್ಟಿದ್ದಾರೆ. ಬಾನುಲಿ ರೇಡಿಯೊ ಸರಣಿ ಪಾಠಗಳನ್ನು ಸಮಾರು 30 ವರ್ಷಗಳಿಂದ ಕೇಳಿಕೊಂಡು ಬಂದಿದ್ದ ಇವರು, ಹಲವಾರು ಬಹುಮಾನಗಳನ್ನೂ ಪಡೆದಿದ್ದಾರೆ.
ಶರಣ ಸಾಹಿತ್ಯ ಪರಿಷತ್‌ನಲ್ಲಿ ತಾಲೂಕು ಕಾರ್ಯದರ್ಶಿಯಾಗಿರುವ ಇವರು ಕನ್ನಡ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ದತ್ತಿ ಉಪನ್ಯಾಸ, ವಚನ ಮಂಟಪ, ಸಮ್ಮೇಳನ ಮುಂತಾದ ಕಾರ್ಯಕ್ರಮಗಳನ್ನು ಆಯೋಜಿಸಿ, ನಿರೂಪಕನಾಗಿ ಸಂಪನ್ಮೂಲ ವ್ಯಕ್ತಿಯಾಗಿ, ನಿರಂತರ ಕ್ರಿಯಾಶೀಲ ಚಟುವಟಿಕೆಯಲ್ಲಿ ಇರುತ್ತಾರೆ. ಶಿಕಾರಿಪುರದ ವಿರಕ್ತ ಮಠದಲ್ಲಿ ಶ್ರಾವಣ ಮಾಸ, ಕಾರ್ತಿಕ ಮಾಸಗಳಲ್ಲಿ ನಡೆಯುವ ಶಿವ ಶರಣರ ಕುರಿತ ಉಪನ್ಯಾಸ ಕಾರ್ಯಕ್ರಮಗಳನ್ನು ಆಯೋಜಿಸಿ ಉಪನ್ಯಾಸ ನೀಡುತ್ತಾರೆ. ಶಿಕಾರಿಪುರದ ಬನವಾಶ್ರಮದಲ್ಲಿ ನಿರ್ದೇಶಕನಾಗಿ ನಿರಂತರವಾಗಿ ನಡೆಯುವ ಶಿವಶರಣರ ಕುರಿತ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ಶಿಕಾರಿಪುರದ ಸದ್ಭಾವನಾ ವೇದಿಕೆಯಲ್ಲಿ ಕೋಮು ಸೌಹಾರ್ದತೆ ಸಾರುವ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಸ್ವತಃ ಕೃಷಿಕರಾಗಿರುವ ಇವರು ಮಕ್ಕಳಲ್ಲಿ ಕೃಷಿಯ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ಹೀಗೆ ಹಲವಾರು ಕಾರ್ಯಕ್ರಮಗಳೊಂದಿಗೆ ಶಾಲಾ ಮಕ್ಕಳ ಸರ್ವತೋಮುಖ ಅಭಿವೃದ್ಧಿ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಗುರುತಿಸಿಕೊಂಡಿದ್ದಾರೆ.
ಸಂದ ಪ್ರಶಸ್ತಿಗಳು
1996ರಲ್ಲಿ ಜಿಲ್ಲಾ ಯುವ ಪ್ರಶಸ್ತಿ, 2009ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, 2012ರಲ್ಲಿ ಗುರುಶ್ರೇಷ್ಠ ಪ್ರಶಸ್ತಿ ಮತ್ತು 2022 ರಲ್ಲಿ ಸಿದ್ದಗಂಗಾ ಸೇವಾರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ನನ್ನ ಜವಾಬ್ದಾರಿ ಹೆಚ್ಚಾಗಿದೆ
ರಾಜ್ಯ ಮಟ್ಟದ ಪ್ರಶಸ್ತಿ ಲಭ್ಯವಾಗಿರುವುದಕ್ಕೆ ಖುಷಿಯಾಗಿದೆ. ಈ ಪ್ರಶಸ್ತಿಯಿಂದ ನನ್ನ ಜವಾಬ್ದಾರಿ ಹೆಚ್ಚಾಗಿದೆ. ಪ್ರಶಸ್ತಿಗೆ ಕಾರಣರಾದವರಿಗೆಲ್ಲ ಕೃತಜ್ಞತೆ ಸಲ್ಲಿಸುತ್ತೇನೆ. ಇದು ನನ್ನ ಶಾಲೆಗೆ, ಶಾಲೆಯ ಮಕ್ಕಳಿಗೆ ಮತ್ತು ಇಲಾಖೆಗೆ ಸಂದ ಗೌರವ.
| ಶಿವಾನಂದಪ್ಪ ಬಿ., ಶಿಕ್ಷಕ