Site icon Vistara News

Teachers Day | ವಿಜಯನಗರದ ಅಪೂರ್ವ ಶಿಕ್ಷಕರಿವರು; ಪಠ್ಯೇತರ ಜ್ಞಾನಕ್ಕೂ ಮಾರ್ಗದರ್ಶಕರಿವರು!

vijayanagara

ಪಾಂಡುರಂಗ ಜಂತ್ಲಿ, ವಿಜಯನಗರ
ಇವರು ಬರೀ ಅಕ್ಷರ ಪಾಠ ಮಾಡುವ ಶಿಕ್ಷಕರಲ್ಲ. ಪಠ್ಯದ ಜತೆ ಜತೆಗೆ ಪಠ್ಯೇತರ ವಿಷಯಗಳಲ್ಲೂ ಮಕ್ಕಳಿಗೆ ಅರಿವು ಮೂಡಿಸಿ ಸಾಮಾನ್ಯ ಜ್ಞಾನದ ಮಟ್ಟವನ್ನೂ ಬೆಳೆಸುವಲ್ಲಿ ಶ್ರಮ ವಹಿಸಿದ್ದಾರೆ. ಅಲ್ಲದೆ, ಇವರ ಈ ಸಾಧನೆಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು (Teachers Day) ಮುಡಿಗೇರಿಸಿಕೊಂಡಿದ್ದಾರೆ.

ಚೇತನ್ ಬಣಕಾರ್ ಹಾಗೂ ನಿರಂಜನ್ ಪಿ.ಜೆ. ಸಾಧಕ ಶಿಕ್ಷಕರಾಗಿದ್ದಾರೆ. ಇವರ ಶಿಕ್ಷಣ ನಾಲ್ಕು ಗೋಡೆಗಳಿಗೆ ಮಾತ್ರವೇ ಸೀಮಿತವಾಗಿರದೆ ಅದರಾಚೆಗೂ ಹಬ್ಬಿದೆ. ಎಂಎ, ಬಿಇಡಿ ಪದವಿ ಮುಗಿಸಿರುವ ಇಬ್ಬರ ಪೈಕಿ ಚೇತನ್ ಬಣಕಾರ್ ಹರಪನಹಳ್ಳಿ ಸರ್ಕಾರಿ ಫ್ರೌಡಶಾಲೆಯಲ್ಲಿ ಹಿಂದಿ ಶಿಕ್ಷಕರಾಗಿದ್ದರೆ, ವೆಂಕಟಾಪುರ ಗ್ರಾಮದ ಸರ್ಕಾರಿ ಫ್ರೌಡಶಾಲೆಯಲ್ಲಿ ನಿರಂಜನ್ ಕನ್ನಡ ಶಿಕ್ಷಕರಾಗಿದ್ದಾರೆ.

ಚೇತನ್‌ ಬಣಕಾರ್‌

ಪಠ್ಯೇತರ ಪಾಠ
ನಿರಂಜನ್ ಹಾಗೂ ಚೇತನ್ ಬಣಕಾರ್ ಇಬ್ಬರೂ ಮಕ್ಕಳಿಗೆ ಪಾಠದ ಜತೆಗೆ ಶಾಲಾ ಅಭಿವೃದ್ಧಿಯಲ್ಲಿ ಹೆಚ್ಚಿನ ಶ್ರಮವಹಿಸಿದ್ದಾರೆ. ಶಾಲೆ ಮುಂಭಾಗ ಗಿಡ ಬೆಳೆಸುವುದು, ಅವುಗಳ ಪಾಲನೆಯ ಜವಾಬ್ದಾರಿ ಸೇರಿದಂತೆ ಪರಿಸರ ಪ್ರೀತಿ ಬೆಳೆಯುವಂತೆ ನೋಡಿಕೊಂಡಿದ್ದಾರೆ. ಗ್ರಾಮಸ್ಥರ ಸಹಕಾರ ಪಡೆದುಕೊಂಡಿದ್ದು, ಮೂಲ ಸೌಕರ್ಯ ಹೆಚ್ಚುವಲ್ಲಿ ಸಹಕಾರಿಯಾಗಿದ್ದಾರೆ. ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ವ್ಯವಸ್ಥೆ ಮಾಡಲಾಗಿದ್ದು, ಪ್ರತಿ ಮಕ್ಕಳಿಗೆ ಟೇಬಲ್ ಸೇರಿ ಇನ್ನಿತರ ಪೂರಕ ಸಾಮಗ್ರಿಗಳಿಗೆ ಒತ್ತು ನೀಡಿದ್ದಾರೆ. ಉತ್ತಮ ಶೌಚಾಲಯ, ಆಟದ ಮೈದಾನ ಜತೆಗೆ ಶಾಲಾ ಅಭಿವೃದ್ಧಿ ವಿಚಾರವಾಗಿ ಹಗಲಿರುಳು ಶ್ರಮಿಸಿದ್ದಾರೆ.

ನಿರಂಜನ್‌ ಪಿ.ಜೆ.

ಕೊರೊನಾ‌ ವೇಳೆ ಬಡ ಮಕ್ಕಳಿಗೆ ಸಹಾಯ
ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹೆಚ್ಚಿದ್ದಾಗ ರಾಜ್ಯ ಸರ್ಕಾರ ಶಾಲೆಗಳಿಗೆ ರಜೆ ಘೋಷಣೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಮಕ್ಕಳು ಕಲಿಕೆಯಿಂದ ವಂಚಿತರಾಗಬಾರದು ಎಂಬ ಕಾರಣಕ್ಕೆ 2020-21ನೇ ಶೈಕ್ಷಣಿಕ ವರ್ಷದಲ್ಲಿ ವಿದ್ಯಾಗಮ ಯೋಜನೆ ಜಾರಿಗೆ ತಂದಿತ್ತು. ಇದೇ ವೇಳೆ ಈ ಶಿಕ್ಷಕರು ತಾವು ಕಲಿಸುವ ಮಕ್ಕಳಿಗೆ ಮಾತ್ರವಲ್ಲದೆ, ಇನ್ನಿತರ ಮಕ್ಕಳನ್ನೂ ಗುರುತಿಸಿ ಅವರಿಗೆ ಕಲಿಕಾ ಸಾಮಗ್ರಿಗಳನ್ನು ಒದಗಿಸಿಕೊಟ್ಟಿದ್ದರು. ಅವರ ಶೈಕ್ಷಣಿಕ ಪ್ರಗತಿಗೆ ಸಹಕಾರಿಯಾಗಿದ್ದರು. ಈ ಮೂಲಕ ಸಾರ್ವಜನಿಕರ ಸಹಿತ ಇಲಾಖೆ ಅಧಿಕಾರಿಗಳ ಮೆಚ್ಚುಗೆಗೆ ಪಾತ್ರರಾಗಿದ್ದರು.

ವೆಂಕಟಾಪುರ ಶಾಲೆಯ ನೋಟ.

ತುಂಬಾ ಖುಷಿಯಾಗಿದೆ. ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ ಎನಿಸುತ್ತದೆ. ಸರ್ಕಾರ ಪ್ರಶಸ್ತಿ ನೀಡಿ ನನ್ನ ಮೇಲಿರುವ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
| ಡಾ.ಚೇತನ ಬಣಕಾರ್, ಶಿಕ್ಷಕ

ನಾವು ಮಾತನಾಡಬಾರದು, ನಮ್ಮ ಕೆಲಸ ಮಾತನಾಡಬೇಕು. ಅದೇ ರೀತಿ ಇಷ್ಟು ಚಿಕ್ಕವಯಸ್ಸಿನಲ್ಲೇ ರಾಜ್ಯಮಟ್ಟದ ಪ್ರಶಸ್ತಿ ನನ್ನನ್ನು ಹುಡುಕಿಕೊಂಡು ಬಂದಿದೆ. ಶಾಲೆಯನ್ನು ನನ್ನ ಮನೆ ಎಂದುಕೊಂಡಿದ್ದೇನೆ. ಶಾಲಾ ಮಕ್ಕಳನ್ನು ನನ್ನ ಮಕ್ಕಳು ಎಂದುಕೊಂಡು ಸಮಗ್ರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದೇನೆ.
| ನಿರಂಜನ್ ಪಿ.ಜೆ, ಶಿಕ್ಷಕ

Exit mobile version