ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಶಿಕ್ಷಣ ಇಲಾಖೆ ವಿರುದ್ಧ ಶಿಕ್ಷಕರು ಸಮರ ಸಾರಿದ್ದಾರೆ. ಜುಲೈ 12ರಂದು ನಗರದ ಫ್ರೀಡಂ ಪಾರ್ಕ್‌ನಲ್ಲಿ ಕರ್ನಾಟಕ ಪ್ರಾಥಮಿಕ ಶಾಲಾ ಶಿಕ್ಷಕರಿಂದ ಬೃಹತ್ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದು, ರಾಜ್ಯದ ವಿವಿಧೆಡೆಯಿಂದ ಸುಮಾರು 1.30 ಲಕ್ಷ ಶಿಕ್ಷಕರು ಪ್ರತಿಭಟನೆಯಲ್ಲಿ ಭಾಗಿಯಾಗಲಿದ್ದಾರೆ.
ಪ್ರತಿಭಟನೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳ ಸುಮಾರು 48 ಸಾವಿರ ಶಾಲೆಗಳು ನಾಳೆ ಬಂದ್ ಆಗಲಿವೆ. ಶಾಲೆಗಳಿಗೆ ಸಾಮೂಹಿಕ ಗೈರು ಹಾಕಿ ಪ್ರತಿಭಟನೆಯಲ್ಲಿ ಭಾಗಿಯಾಗಲು ಶಿಕ್ಷಕರು ನಿರ್ಧಾರ ಮಾಡಿದ್ದಾರೆ. ಶಿಕ್ಷಕರು ಅನೇಕ ಬಾರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಲಾಖೆ ಮೊರೆ ಹೋಗಿದ್ದರು. ಸಚಿವರ ಭೇಟಿಯಿಂದಲೂ ನಿರಾಸೆ ಉಂಟಾಗಿದ್ದರಿಂದ ಬೀದಿಗಿಳಿಯಲು ನಿರ್ಧರಿಸಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಶಿಕ್ಷಕರು ಭಾಗಿಯಾಗುವ ಸಾಧ್ಯತೆ ಇದೆ. ಇತ್ತ ನಾಳೆ ಶಾಲೆ ಬಂದ್ ಮಾಡದಂತೆ ಇಲಾಖೆಯಿಂದ ಆದೇಶ ಹೊರಡಿಸಿದೆ. ಆದರೆ, ಇಲಾಖೆಯ ಆದೇಶಕ್ಕೂ ಕ್ಯಾರೆ ಎನ್ನದೇ 1.30 ಲಕ್ಷ ಶಿಕ್ಷಕರಿಂದ ಪ್ರತಿಭಟನ ನಡೆಸಲು ಮುಂದಾಗಿದ್ದಾರೆ. ಈ ಬಗ್ಗೆ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಕೆ. ನಾಗೇಶ್ ಮಾಹಿತಿ ನೀಡಿದ್ದಾರೆ.
ಸರ್ಕಾರ 2017ರ ವೃಂದ ಮತ್ತು ನೇಮಕಾತಿ ನಿಯಮಗಳು 2016ಕ್ಕಿಂತ ಮುಂಚೆ ನೇಮಕಾತಿ ಹೊಂದಿದ ಶಿಕ್ಷಕರಿಗೆ ಅನ್ವಯವಾಗುವುದಿಲ್ಲ ಎಂದು ಕಾರ್ಯಾದೇಶ ಹೊರಡಿಸಿ, ಮೂಲತಃ 1 ರಿಂದ 7, 8ಕ್ಕೆ ನೇಮಕ ಹೊಂದಿದ ಶಿಕ್ಷಕರನ್ನು ಪಿಎಸ್‌ಟಿ ಎಂದು ಪದನಾಮ ಮಾಡಿ 1 ರಿಂದ 5 ಕ್ಕೆ ಹಿಂಬಡ್ತಿ ನೀಡಿದೆ. ಇದರಿಂದ ಸುಮಾರು 1.20 ಲಕ್ಷ ಶಿಕ್ಷಕರಿಗೆ ಅನ್ಯಾಯವಾಗಲಿದೆ. ಹಾಗಾಗಿ ಕೂಡಲೇ ಈ ಆದೇಶವನ್ನು ಹಿಂದಕ್ಕೆ ಪಡೆಯಬೇಕು. 2016ಕ್ಕಿಂತ ಮುಂಚೆ ನೇಮಕ ಹೊಂದಿದ ಶಿಕ್ಷಕರನ್ನು ಎನ್‌ಸಿಟಿ ಈ ನಿಯಮಾವಳಿ ಪ್ರಕಾರ ಪದವಿ ವಿದ್ಯಾರ್ಹತೆ ಹೊಂದಿದ ಎಲ್ಲ ಸೇವಾನಿರತ ಶಿಕ್ಷಕರನ್ನು ಜಿಪಿಟಿ ಶಿಕ್ಷಕರೆಂದು ಸೇವಾ ಜೇಷ್ಠತೆಯೊಂದಿಗೆ ಪುನರ್ ಪದನಾಮಕರಣ ಮಾಡಬೇಕು ಎಂಬುದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಯಾಗಿದೆ.
ಇದನ್ನೂ ಓದಿ | Kejriwal Bungalow Case: ಕೇಜ್ರಿವಾಲ್ ಬಂಗಲೆ ನವೀಕರಣ ಅಕ್ರಮ; ಮೂವರು ಇಂಜಿನಿಯರ್‌ಗಳು ಸಸ್ಪೆಂಡ್
ಈ ಮೊದಲಿನ ಪ್ರೌಢಶಾಲಾ ಬಡ್ತಿ ನಿಯಮಾವಳಿಯಂತೆ 2016ರ ಮುಂಚೆ ನೇಮಕಾತಿ ಹೊಂದಿದ ಹಾಗೂ ಬಿ.ಇಡಿ ಪದವಿ ಪಡೆದ ಪ್ರಾಥಮಿಕ ಶಾಲಾ ಶಿಕ್ಷಕರು ಖಾಲಿಯಾಗುವವರೆಗೂ ಪ್ರೌಢಶಾಲೆಗೆ ಬಡ್ತಿ ನೀಡಬೇಕು, ತದನಂತರದಲ್ಲಿ ಹೊಸದಾಗಿ ನೇಮಕಗೊಂಡ ಜಿಪಿಟಿ ಶಿಕ್ಷಕರನ್ನು ಪರಿಗಣಿಸಬೇಕು, ಈ ಮುಂಚಿನ ನಿಯಮಾವಳಿಯಂತೆ ಮುಖ್ಯ ಶಿಕ್ಷಕರ ಹುದ್ದೆಗೆ ವಿದ್ಯಾರ್ಹತೆಯನ್ನು ಪರಿಗಣಿಸದೇ ಅಖಂಡ ಸೇವಾಹಿರಿತನದ ಆಧಾರದ ಮೇಲೆ ಬಡ್ತಿ ನೀಡಬೇಕು ಎಂದು ಶಿಕ್ಷಕರು ಒತ್ತಾಯಿಸಿದ್ದಾರೆ.