Site icon Vistara News

Teacher suicide: ಶಿಕ್ಷಕ ಆತ್ಮಹತ್ಯೆ ವಿರುದ್ಧ ಬೀದಿಗಳಿದ ಶಿಕ್ಷಕರು, ಸಂಬಂಧಿಕರು; ಬಿಇಒ ಸೇರಿ ನಾಲ್ವರು ಸಸ್ಪೆಂಡ್‌

Teachers relatives take to the streets against teacher suicide Four suspended including BEO

ವಿಜಯಪುರ: ಇಲ್ಲಿನ ತಹಸೀಲ್ದಾರ್‌ ಕಚೇರಿಯ ಆವರಣದಲ್ಲಿರುವ ಮರಕ್ಕೆ ಸಿಂದಗಿ ತಾಲೂಕಿನ ಸಾಸಾಬಳ ಗ್ರಾಮದ ಸರ್ಕಾರಿ ಶಾಲೆಯ ಶಿಕ್ಷಕ ಬಸವರಾಜ್ (55) ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ (Teacher suicide) ಮಾಡಿಕೊಂಡಿರುವ ಪ್ರಕರಣ ಸಂಬಂಧ ವ್ಯಾಪಕ ಪ್ರತಿಭಟನೆ ವ್ಯಕ್ತವಾದ ಬೆನ್ನಲ್ಲೇ ಬಿಇಒ ಸೇರಿ ನಾಲ್ವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.

ಸಿಂದಗಿ ಬಿಇಒ ಎಂ.ಎಚ್. ಹರಿನಾಳ, ಸಿಆರ್‌ಪಿ ಜಿ.ಎನ್. ಪಾಟೀಲ್, ಮುಖ್ಯ ಶಿಕ್ಷಕ ಬಿ.ಎಲ್. ಭಜಂತ್ರಿ, ಸಹ ಶಿಕ್ಷಕ ಬಿಎಂ ತಳವಾರ ಅವರನ್ನು ಅಮಾನತು ಮಾಡಿ ವಿಜಯಪುರ ಡಿಡಿಪಿಐ ಉಮೇಶ್ ಶಿರಹಟ್ಟಿಮಠ ಆದೇಶ ಹೊರಡಿಸಿದ್ದಾರೆ.

ಶಿಕ್ಷಕ ಬಸವರಾಜ್‌ ಅವರು ಸಾಯುವ ಮುನ್ನ ಬರೆದಿಟ್ಟಿರುವ ಡೆತ್‌ ನೋಟ್‌ನಲ್ಲಿ ಶಾಲೆಯ ಹಿಂದಿನ ಮುಖ್ಯ ಶಿಕ್ಷಕ ಎಸ್.ಎಲ್. ಭಜಂತ್ರಿ, ಸಿಂದಗಿ ಬಿಇಒ, ಸಿಆರ್‌ಪಿ ಜಿ.ಎನ್. ಪಾಟೀಲ್ ಅವರ ಕಿರುಕುಳವೇ ಆತ್ಮಹತ್ಯೆಗೆ ಕಾರಣವೆಂದು ಉಲ್ಲೇಖಿಸಿದ್ದರು. ಈ ಹಿನ್ನೆಲೆಯಲ್ಲಿ ಬಸವರಾಜ್‌ ಪತ್ನಿ ಮಹಾದೇವಿಯಿಂದ ಸಿಂದಗಿ ಪೊಲೀಸ್ ಠಾಣೆಯಲ್ಲಿ ದಾಖಲು ಮಾಡಲಾಗಿತ್ತು.

ಇದನ್ನೂ ಓದಿ: Accident Mystery: ದಾವಣಗೆರೆ ಬೈಕ್‌ ಅಪಘಾತಕ್ಕೆ ಟ್ವಿಸ್ಟ್‌; ಹೆದ್ದಾರಿಯಲ್ಲಿ ದರೋಡೆಗೆ ಯತ್ನಿಸಿದ್ದರಾ ಯುವಕರು?

ಆರೋಪಿಗಳ ಅಮಾನತಿಗೆ ಆಗ್ರಹಿಸಿ ಸಂಬಂಧಿಕರು, ಶಿಕ್ಷಕರು ಸಿಂದಗಿ ತಾಲೂಕು ಆಸ್ಪತ್ರೆ ಶವಾಗಾರದಿಂದ ತಹಸೀಲ್ದಾರ್ ಕಚೇರಿಯವರೆಗೆ ಶವ ಯಾತ್ರೆ ನಡೆಸಿದರು. ಈಗ ಒತ್ತಡಕ್ಕೆ ಮಣಿದಿರುವ ಶಿಕ್ಷಣ ಇಲಾಖೆ ಅಮಾನತು ಮಾಡಿ ಕ್ರಮ ಕೈಗೊಂಡಿದೆ.

ಏನಿದು ಪ್ರಕರಣ?

ಎಸ್.ಎಲ್. ಭಜಂತ್ರಿ ಅವರು ಮುಖ್ಯ ಶಿಕ್ಷಕ ಹುದ್ದೆಯ ಚಾರ್ಜ್‌ ಅನ್ನು ಶಿಕ್ಷಕ ಬಸವರಾಜ ಅವರಿಗೆ ಬಿಟ್ಟು ಕೊಟ್ಟಿದ್ದರು. ಚಾರ್ಜ್ ಬಿಟ್ಟು ಕೊಡುವ ವೇಳೆ ಶಿಕ್ಷಕರ ಹಾಗೂ ಮಕ್ಕಳ ಹಾಜರಾತಿ, 1ನೇ ನಂಬರ್ ರಿಜಿಸ್ಟರ್ ಅನ್ನು ಹಸ್ತಾಂತರ ಮಾಡಿದ್ದರು. ಆದರೆ, ವಿದ್ಯಾರ್ಥಿಗಳ ದಾಖಲಾತಿ ವಿವರ, ಜಾತಿ, ಜನ್ಮ ದಿನಾಂಕವುಳ್ಳ 1ನೇ ನಂಬರ್ ರಿಜಿಸ್ಟರ್ ಅಪೂರ್ಣವಾಗಿತ್ತು ಎನ್ನಲಾಗಿದೆ. ʻʻನಾನು ಸಿಆರ್‌ಪಿ ಆಗುತ್ತೇನೆ, ಆಗಾಗ ಬಂದು 1ನೇ ನಂಬರ್ ರಿಜಿಸ್ಟರ್ ಸರಿಪಡಿಸುತ್ತೇನೆ” ಎಂದು ಎಸ್.ಎಲ್. ಭಜಂತ್ರಿ ಹೇಳಿದ್ದಾರೆನ್ನಲಾಗಿದೆ. ಆದರೆ, ಚಾರ್ಜ್ ಬಿಟ್ಟುಕೊಟ್ಟ ಬಳಿಕ ಅವರು ಸತಾಯಿಸಿದ್ದರು ಎನ್ನಲಾಗಿದೆ.

ಈ ನಡುವೆ ಸಿಂದಗಿ ಬಿಇಒ ಎಚ್‌.ಎಂ. ಹರಿನಾಳ್‌ ಈ ವಿಚಾರದಲ್ಲಿ ನೋಟಿಸ್‌ ನೀಡಿ ಹಿಂಸೆ ನೀಡಲು ಶುರು ಮಾಡಿದ್ದರು ಎನ್ನಲಾಗಿದೆ. ಭಜಂತ್ರಿ ಅವರು ದಾಖಲೆಗಳನ್ನು ಅಪೂರ್ಣವಾಗಿ ಬಿಟ್ಟುಹೋಗಿರುವ ವಿಚಾರವನ್ನು ಬಿಇಒ ಗಮನಕ್ಕೆ ತಂದರೂ ಪ್ರಯೋಜನ ಆಗಿಲ್ಲ ಎಂಬ ಆರೋಪ ಕೇಳಿಬಂದಿತ್ತು.

ಈ ನಡುವೆ, ಸಾಸಾಬಳ ಶಾಲೆಯ ಟಿಜಿಟಿ ಶಿಕ್ಷಕ ಬಿ.ಎಂ. ತಳವಾರ ಹಿಂದಿನಿಂದಲೂ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ. ಗ್ರಾಮದ ಸಂಗಮೇಶ್ ಚಿಂಚೋಳಿ ಮೂಲಕ ಆರೋಪಗಳನ್ನು ಮಾಡಿ ಸಿಆರ್‌ಪಿ ಹಾಗೂ ಸಂಗಮೇಶ್ ನನ್ನಿಂದ ಹಣ ಪಡೆದಿದ್ದರು ಎಂದೂ ಡೆತ್‌ ನೋಟ್‌ನಲ್ಲಿ ತಿಳಿಸಲಾಗಿದೆ. ಬಿಸಿಯೂಟ ಯೋಜನೆಯಡಿ ಹೆಚ್ಚುವರಿ ವಿದ್ಯಾರ್ಥಿಗಳ ದಾಖಲಾತಿ ತೋರಿಸಿ ಹಣ ಲಪಟಾಯಿಸುತ್ತಿದ್ದ ಎಂದು ಹೇಳಲಾಗಿದೆ.

ಇದನ್ನೂ ಓದಿ: Panchamasali Reservation : ಪಂಚಮಸಾಲಿ ಹೋರಾಟ ಮತ್ತೆ ತೀವ್ರ; ಅಧಿವೇಶನ ಮುಗಿಯುವ ಮುನ್ನ ಮೀಸಲು ಘೋಷಣೆಗೆ ಆಗ್ರಹ

ಅಲ್ಲದೆ, ಸಂಗಮೇಶ್ ಚಿಂಚೋಳಿ ಶಿಕ್ಷಕ ಬಸವರಾಜ್ ವಿರುದ್ಧ ಬಿಇಒಗೆ ದೂರು ಕೊಟ್ಟಿದ್ದರು. ʻʻನನಗಿಂತಲೂ ನನ್ನ ವಿದ್ಯಾರ್ಥಿಗಳ ಭವಿಷ್ಯ ಮುಖ್ಯ. ನನ್ನ ಹೆಂಡತಿ ಮತ್ತು ಮಗಳಿಗೆ ನ್ಯಾಯ ಒದಗಿಸಿಕೊಡಬೇಕುʼʼ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದ ಬಸವರಾಜ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Exit mobile version