Site icon Vistara News

Teachers Transfer 2024: ಶಿಕ್ಷಕರ ವರ್ಗಾವಣೆಯ ಪರಿಷ್ಕೃತ ವೇಳಾಪಟ್ಟಿ ಇಂದು ಪ್ರಕಟ ಸಾಧ್ಯತೆ

Teachers Transfer 2024

Teachers Transfer 2024: The revised schedule of teacher transfer is likely to be announced today In Karnataka

ಬೆಂಗಳೂರು: ರಾಜ್ಯಾದ್ಯಂತ (Teachers Transfer 2024) ಸಾವಿರಾರು ಸರ್ಕಾರಿ ಶಿಕ್ಷಕರು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ವರ್ಗಾವಣೆ ವೇಳಾಪಟ್ಟಿ ಇಂದು (ಜೂನ್‌ 15) ಪ್ರಕಟಗೊಳ್ಳುವ ಸಾಧ್ಯತೆ ಇದೆ.
ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಪಕರನ್ನೂ ಒಳಗೊಂಡಂತೆ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆಯ ಭಾಗವಾಗಿ ಈ ವೇಳಾಪಟ್ಟಿ ಪ್ರಕಟವಾಗಲಿದೆ. ವೇಳಾಪಟ್ಟಿ ಪ್ರಕಟವಾದ ಬಳಿಕ ವರ್ಗಾವಣೆಗೆ ಸಂಬಂಧಿಸಿ ಕೌನ್ಸೆಲಿಂಗ್‌ ನಡೆಯಲಿದೆ. ವರ್ಗಾವಣೆಗೆ ಅರ್ಜಿ ಇತ್ಯಾದಿ ಪ್ರಕ್ರಿಯೆ ಮಾರ್ಚ್‌ 18ರಿಂದ ಪ್ರಾರಂಭವಾಗಿತ್ತು. ಲೋಕಸಭೆ ಚುನಾವಣೆ (Lok Sabha Election 2024) ಘೋಷಣೆ ಮತ್ತು ನೀತಿ ಸಂಹಿತೆ ಜಾರಿಯು ಈ ಪ್ರಕ್ರಿಯೆಗೆ ತೊಡಕಾಗಿತ್ತು.

ಹೆಚ್ಚುವರಿ ಶಿಕ್ಷಕರ ಸಮರ್ಪಕ ಮರುಹಂಚಿಕೆ ಮತ್ತು ಕಡ್ಡಾಯ ವಲಯ ವರ್ಗಾವಣೆಗಳನ್ನು ಒಂದರ ನಂತರ ಒಂದನ್ನು ಪರ್ಯಾಯ ವರ್ಷಗಳಲ್ಲಿ ಹಮ್ಮಿಕೊಳ್ಳಬೇಕಾಗುತ್ತದೆ. ಅಂತೆಯೇ ಈ ಬಾರಿಯ ವರ್ಗಾವಣೆ ಪ್ರಕ್ರಿಯೆ ಆರಂಭಿಸಲಾಗಿತ್ತು. ವರ್ಗಾವಣೆಗೆ ಪೂರಕವಾದ ಇ.ಇ.ಡಿ.ಎಸ್ ದತ್ತಾಂಶ, ಖಾಲಿ ಹುದ್ದೆಗಳ ಮಾಹಿತಿ, ಶಾಲಾ ವಲಯಗಳ ಮಾಹಿತಿಯನ್ನು ಪರಿಷ್ಕರಿಸಲಾಗಿತ್ತು.

ಆನ್‌ಲೈನ್‌ ಪ್ರಕ್ರಿಯೆ

ಸಾಮಾನ್ಯ ಹಾಗೂ ಪರಸ್ಪರ ವರ್ಗಾವಣೆಗಳು ಆನ್​ಲೈನ್ ಮೂಲಕವೇ ನಡೆಯಲಿದೆ. ಶಿಕ್ಷಕರ (Weighted score) ಅಂಕಗಳ ಪ್ರಕಟ, ಆಕ್ಷೇಪಣೆ ಸಲ್ಲಿಕೆ, ವರ್ಗಾವಣಾ ಅರ್ಜಿ ಸಲ್ಲಿಸುವುದು, ಅರ್ಜಿಗಳ ಪರಿಶೀಲನೆ, ಅರ್ಜಿಗಳ ಅನುಮೋದನೆ/ ತಿರಸ್ಕಾರ, ಕರಡು ಪಟ್ಟಿ ಪ್ರಕಟಣೆ, ಆಕ್ಷೇಪಣೆಗಳ ಸಲ್ಲಿಕೆ, ಅಂತಿಮ ಆದ್ಯತಾ ಪಟ್ಟಿ ಪ್ರಕಟಣೆ, ಆದ್ಯತಾ ಪಟ್ಟಿ ಅನುಸಾರ ವರ್ಗಾವಣಾ ಕೌನ್ಸೆಲಿಂಗ್ ಪ್ರಕ್ರಿಯೆಗಳು ಇಲಾಖೆಯ ನಿಗದಿತ ತಂತ್ರಾಂಶದಲ್ಲಿಯೇ ನಿರ್ವಹಣೆಯಾಗಿದೆ.

ವರ್ಗಾವಣೆಗೆ ಕಾಯುತ್ತಿರುವ ಶಿಕ್ಷಕರು

ಕೌಟುಂಬಿಕ, ಶೈಕ್ಷಣಿಕ ಇತ್ಯಾದಿ ಕಾರಣಗಳಿಂದ ರಾಜ್ಯಾದ್ಯಂತ ಸಾವಿರಾರು ಶಿಕ್ಷಕರು ವರ್ಗಾವಣೆಯನ್ನು ಎದುರು ನೋಡುತ್ತಿದ್ದಾರೆ. ಪ್ರತಿ ಬಾರಿಯೂ ರಾಜ್ಯ ಸರ್ಕಾರ, ಶೈಕ್ಷಣಿಕ ವರ್ಷ ಆರಂಭಕ್ಕೆ ಮೊದಲೇ ವರ್ಗಾವಣೆ ಪ್ರಕ್ರಿಯೆ ಮುಗಿಸಲಾಗುವುದು ಎಂದು ಹೇಳುತ್ತದೆ. ಆದರೆ ನಾನಾ ಕಾರಣಗಳಿಂದ ಇದು ವಿಳಂಬವಾಗುತ್ತಲೇ ಇರುತ್ತದೆ. ಈಗಾಗಲೇ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಆರಂಭವಾಗಿವೆ. ಆದರೆ ಇನ್ನೂ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಮುಗಿದಿಲ್ಲ. ಈ ತಿಂಗಳಲ್ಲಿ ಕೌನ್ಸೆಲಿಂಗ್‌ ಆರಂಭವಾದರೂ ಈ ಪ್ರಕ್ರಿಯೆ ಅಂತಿಮವಾಗಿ ಮುಗಿಯಲು ಕನಿಷ್ಠ ಇನ್ನೆರಡು ತಿಂಗಳು ಬೇಕಾಗಬಹುದು.

ಹಲವರು ಬದಲಾವಣೆ

ಶಿಕ್ಷಕರ ಸಂಘಗಳ ಕೋರಿಕೆ ಮೇರೆಗೆ ಈ ಬಾರಿ ವರ್ಗಾವಣೆ ಪ್ರಕ್ರಿಯೆಯಲ್ಲಿ ಕೆಲವು ಬದಲಾವಣೆ ಮಾಡಲಾಗಿದೆ ಎನ್ನಲಾಗುತ್ತಿದೆ. ವಲಯ ವರ್ಗಾವಣೆಯನ್ನು ಕೈಬಿಡುವ ಸಾಧ್ಯತೆ ಇದೆ. ಅಭಿಮತ ವರ್ಗಾವಣೆ ಸೇರಿದಂತೆ ಪರಸ್ಪರ ಕೋರಿಕೆ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳಿಸುವ ಕುರಿತಂತೆ ಶಿಕ್ಷಣ ಸಚಿವರಿಂದ ಕಡತ ಅನುಮೋದನೆಗೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ: Shira News: ಸರ್ಕಾರಿ ಶಾಲಾ ಕೊಠಡಿ ಚಾವಣಿ ಕುಸಿತ; ಶಿಕ್ಷಕಿ ತಲೆಗೆ ಪೆಟ್ಟು, ವಿದ್ಯಾರ್ಥಿಗಳು ಪಾರು

Exit mobile version