ಬೆಂಗಳೂರು: ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಸೋಲಿಸಲು ಅವರ ಪಕ್ಷದಲ್ಲಿಯೇ ತಂತ್ರಗಾರಿಕೆ ನಡೆಯುತ್ತಿದೆ. ಮುಂದಿನ ಸಿಎಂ ಅಭ್ಯರ್ಥಿ ಎಂದು ಹೇಳಿಕೊಳ್ಳುತ್ತಿರುವವರನ್ನು ಸೋಲಿಸಲು ಅವರಲ್ಲೇ ಟೀಮ್ ರೆಡಿ ಇದೆ ಎಂದು ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಹೇಳಿದರು.
ಮಾಧ್ಯಮದವರೊಂದಿಗೆ ಬುಧವಾರ (ಮಾ. 22) ಮಾತನಾಡಿದ ಅವರು, ಸಿದ್ದರಾಮಯ್ಯ ಅವರನ್ನು ಸೋಲಿಸಲು ಒಂದಷ್ಟು ನೋವು ಅನುಭವಿಸಿದವರು ಪ್ರಯತ್ನ ಮಾಡಬಹುದು. ರಾಷ್ಟ್ರೀಯ ಪಕ್ಷದಲ್ಲಿ ಮುಂದಿನ ಸಿಎಂ ಅಭ್ಯರ್ಥಿಗೆ ಕ್ಷೇತ್ರ ಸಿಗುತ್ತಿಲ್ಲ ಅಂದರೆ ಏನ್ ಅರ್ಥ? ಈ ಎಲ್ಲ ಗೊಂದಲವನ್ನು ಸೃಷ್ಟಿ ಮಾಡಿದ್ದು ಅವರೇ ಆಗಿದ್ದಾರೆ. ಈ ರೀತಿಯ ಪರಿಸ್ಥಿತಿಯು ರಾಷ್ಟ್ರೀಯ ಪಕ್ಷದ ಸಿಎಂ ಅಭ್ಯರ್ಥಿಗೆ ಬರಬಾರದು. ಪಕ್ಷದಲ್ಲೇ ಅವರನ್ನು ಮುಗಿಸುವ ಪರಿಸ್ಥಿತಿ ಬಂದಿದೆ ಎಂದು ಹೇಳಿದರು.
ಹಬ್ಬದ ಜತೆಗೆ ಚುನಾವಣೆ ಹಬ್ಬವೂ ಜೋರಾಗಿ ನಡೆಯುತ್ತಿದೆ. ಈ ಹಬ್ಬವನ್ನು ಆಚರಿಸಲೂ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಈ ಹಿಂದೆಯೇ ಹೇಳಿದಂತೆ ಮಾ. 26ರಂದು ಪಂಚರತ್ನ ಯಾತ್ರೆಯ ಸಮಾರೋಪ ಸಮಾರಂಭವಿದೆ. ಅದಕ್ಕೆ ಎಲ್ಲವೂ ತಯಾರಿ ಆಗಿದೆ. ಅಂದೇ ಎರಡನೇ ಪಟ್ಟಿ ಮಾಡಬೇಕು ಅಂತ ನಿರ್ಧರಿಸಿದ್ದೇನೆ ಎಂದರು.
ನನಗೆ ಗುರಿ ಇರುವ 123 ಕ್ಷೇತ್ರದಲ್ಲಿ ಅಭ್ಯರ್ಥಿಗಳಿದ್ದಾರೆ. ನಮಗೆ ಯಾವುದೇ ಸಮಸ್ಯೆ ಇಲ್ಲ. 15ರಿಂದ 16 ಕ್ಷೇತ್ರದಲ್ಲಿ ಮಾತ್ರವೇ ಸಮಸ್ಯೆ ಇದೆ. ಕೆಲವರು ರಾಷ್ಟ್ರೀಯ ಪಕ್ಷದಿಂದ ಬರುವವರು ಇದ್ದಾರೆ. ಇಲ್ಲಿಂದ ಹೋಗುವವರ ಸಂಖ್ಯೆ ಮುಗಿಯಿತು. ಹಾಗೆಯೇ ಅಲ್ಲಿಂದ ಬರುವವರ ಸಂಖ್ಯೆ ಕೂಡ ಇದೆ ಎಂದು ಹೇಳಿದರು.
ಇದನ್ನೂ ಓದಿ: Demat Accounts : ನಿಮ್ಮ ಡಿಮ್ಯಾಟ್ ಖಾತೆಗೆ ನಾಮಿನಿ ಮಾಡಿದ್ದೀರಾ, ಮಾರ್ಚ್ 31 ರ ಗಡುವು ತಪ್ಪಿದರೆ ಅಕೌಂಟ್ ಸ್ಥಗಿತ
ಎರಡೂ ರಾಷ್ಟ್ರೀಯ ಪಕ್ಷಗಳಿಗಿಂತ ನಮ್ಮದು ಕಳಪೆ ಇಲ್ಲ. ಹತ್ತು ಹದಿನೈದು ಕ್ಷೇತ್ರದಲ್ಲಿ ಸಮಸ್ಯೆ ಇದೆ. ಆ ಕ್ಷೇತ್ರದಲ್ಲಿ ಬೇರೆ ಪಕ್ಷದಿಂದ ಬರುತ್ತಾರೋ ನೋಡೋಣ. ರಾಷ್ಟ್ರೀಯ ಪಕ್ಷದಲ್ಲಿ ಇದುವರೆಗೂ ಟಿಕೆಟ್ ಘೋಷಣೆ ಆಗಿಲ್ಲ. ಹೀಗಾಗಿ ಹದಿನೈದು ಕ್ಷೇತ್ರದಲ್ಲಿ ಯಾರಾದರೂ ಬರಬಹುದು ಎಂದು ತಿಳಿಸಿದರು.