ಬೆಂಗಳೂರು: ಟೆಕ್ಕಿಗೆ ಬೆತ್ತಲೆ ವಿಡಿಯೊ ಕಾಲ್ ಮಾಡಿದ ಯುವತಿಯೊಬ್ಬಳು ಬ್ಲ್ಯಾಕ್‌ಮೇಲ್ ಮಾಡಿ 2.19 ಲಕ್ಷ ರೂ. ವಂಚಿಸಿರುವ (Fraud Case) ಘಟನೆ ನಗರದಲ್ಲಿ ನಡೆದಿದೆ. ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾಗಿದ್ದ ಯುವತಿ, ವಿಡಿಯೋ ಕಾಲ್ ಮಾಡಿ ಬೆತ್ತಲೆ ವಿಡಿಯೊ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಇದರಿಂದ ಹಣ ಕಳೆದುಕೊಂಡ ಟೆಕ್ಕಿ ನ್ಯಾಯಕ್ಕಾಗಿ ಪೊಲೀಸರ ಮೊರೆ ಹೋಗಿದ್ದಾನೆ.
ಬೆಳ್ಳಂದೂರಿನ ನಿವಾಸಿ ನಿಶಾಂತ್ (31) ಹಣ ಕಳೆದುಕೊಂಡವರು. ಈತ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಡೇಟಿಂಗ್ ಆ್ಯಪ್‌ನಲ್ಲಿ ಈತನಿಗೆ ಡಿಸೆಂಬರ್ 21ರಂದು ಯುವತಿ ಪರಿಚಯವಾಗಿದ್ದಾಳೆ. ನಂತರ ವಾಟ್ಸ್ ಆ್ಯಪ್ ನಂಬರ್ ಪಡೆದುಕೊಂಡು ಯುವತಿ ವಿಡಿಯೊ ಕಾಲ್ ಮಾಡಿದ್ದಾಳೆ.
ವಿಡಿಯೊ ಕಾಲ್‌ನಲ್ಲಿ ಆಕೆ ಬೆತ್ತಲಾಗಿದ್ದಲ್ಲದೇ ನಿಶಾಂತ್‌ಗೆ ಬೆತ್ತಲಾಗುವಂತೆ ಪ್ರಚೋದಿಸಿದ್ದಾಳೆ. ಆಕೆಯ ಮಾತಿನ ಮೋಡಿಗೆ ಬೆರಗಾದ ನಿಶಾಂತ್ ಕೂಡ ವಿವಸ್ತ್ರನಾಗಿ ಮಾತನಾಡಿದ್ದಾನೆ. ಈ ವೇಳೆ ಆತನ ಗಮನಕ್ಕೆ ಬಾರದೆ ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದ ಯುವತಿ, ಕೆಲ ಸಮಯದ ನಂತರ ಸ್ಟ್ರೀನ್ ಶಾಟ್ ಕಳುಹಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾಳೆ.
ನಂತರ ಅಪರಿಚಿತ ಯುವತಿ ನೀಡಿದ ಬ್ಯಾಂಕ್ ಖಾತೆಗೆ 2.19 ಲಕ್ಷ ರೂ.ಗಳನ್ನು ಟೆಕ್ಕಿ ಜಮಾ ಮಾಡಿದ್ದು, ಮತ್ತೆ ಹಣಕ್ಕೆ ಬೇಡಿಕೆ ಇಟ್ಟಾಗ ಆತ ಕಳುಹಿಸಿರಲಿಲ್ಲ. ಆತನ ಸ್ನೇಹಿತರ ಮೊಬೈಲ್‌ಗೆ ವಿಡಿಯೊ ಕಳುಹಿಸಿದ ಯುವತಿ ಹಣ ನೀಡದಿದ್ದರೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಅಪ್‌ಲೋಡ್ ಮಾಡುವುದಾಗಿ ಬೆದರಿಸಿದ್ದಾಳೆ. ಹೀಗಾಗಿ ಅಪರಿಚಿತ ಯುವತಿ ವಿರುದ್ಧ ಸೈಬರ್ ಕ್ರೈಂ ಪೋಲಿಸ್ ಠಾಣೆಗೆ ನಿಶಾಂತ್ ದೂರು ನೀಡಿದ್ದಾರೆ.