ಬೆಂಗಳೂರು: ಹರೆಯ ಎಂಬುದು ಬಹಳ ಸೂಕ್ಷ್ಮವಾದ ಹಂತ. ಇದು ಯಾವುದೇ ಒಬ್ಬ ವ್ಯಕ್ತಿಯ ಬದಲಾವಣೆಯ ಕಾಲ. ಈ ಸಂದರ್ಭದಲ್ಲಿ ಮಕ್ಕಳ ಮೇಲೆ ವಿಶೇಷ ಕಾಳಜಿಯನ್ನು ವಹಿಸುವ ಅವಶ್ಯಕತೆ ಇದೆ. ಅವರ ಪ್ರತಿ ನಡೆಯನ್ನೂ ಸೂಕ್ಷ್ಮವಾಗಿ ಗಮನಿಸಬೇಕಿದೆ. ಈ ನಿಟ್ಟಿನಲ್ಲಿ ಪೋಷಕರ ಪಾತ್ರ ಬಹಳ ಮುಖ್ಯವಾಗಿರುತ್ತದೆ. ತಮ್ಮ ಮಕ್ಕಳನ್ನು ಕಣ್ಣಿನ ರೆಪ್ಪೆಯಂತೆ ಕಾಪಿಟ್ಟುಕೊಂಡು ಬಂದ ಸಂದರ್ಭದಲ್ಲಿ ಸಲ್ಲದ ಕಾರಣಕ್ಕೆ ಮಕ್ಕಳು ಕಣ್ಣೆದುರೇ ಆತ್ಮಹತ್ಯೆಗಳಂತಹ (Suicide case) ನಿರ್ಣಯಕ್ಕೆ ಕೈಹಾಕುತ್ತಿರುವ ಪ್ರಕರಣಗಳು ಇತ್ತೀಚೆಗೆ ಹೆಚ್ಚುತ್ತಿರುವುದು ಆತಂಕವನ್ನು ಹುಟ್ಟುಹಾಕಿದೆ.
ಭಾರತದಲ್ಲಿ ಹದಿಹರೆಯದವರ ಆತ್ಮಹತ್ಯೆ ಪ್ರಕರಣಗಳು ಹೆಚಾಗುತ್ತಿವೆ. ಕರ್ನಾಟಕದಲ್ಲೂ ಇಂತಹ ಪ್ರಕರಣಗಳು ಆತಂಕವನ್ನು ಹೆಚ್ಚಿಸಿವೆ. ಮನೆಯಲ್ಲಿ ಮುದ್ದಿನಿಂದ ಬೆಳೆದ ಮಕ್ಕಳು ಒಂದು ಹಂತದಲ್ಲಿ ಇದ್ದಕ್ಕಿದ್ದಂತೆ ಮಾನಸಿಕ ಖಿನ್ನತೆಗೆ ಒಳಗಾಗಿಬಿಡುತ್ತಿದ್ದಾರೆ. ಇದರಿಂದ ಹೊರಬರಲಾರದೇ ಆತ್ಮಹತ್ಯೆಯಂತಹ ತಪ್ಪು ನಿರ್ಧಾರವನ್ನು ಕೈಗೊಳ್ಳುತ್ತಿದ್ದಾರೆ. ಇತ್ತೀಚೆಗಿನ ಕೆಲವು ಘಟನೆಗಳು ಇದಕ್ಕೆ ನಿದರ್ಶನ ಎಂಬಂತೆ ಇದೆ. …
1. ತುಮಕೂರಿನ ಸದಾಶಿವ ನಗರದ ಜಿಷ್ನು ಎಂಬ 16 ವರ್ಷದ ವಿದ್ಯಾರ್ಥಿ ನೇಣು ಬಿಗಿದುಕೊಂಡು ಕೆಲ ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತ ಶಿರಾ ನಗರದ ಪ್ರತಿಷ್ಠಿತ ಖಾಸಗಿ ಪಿ.ಯು. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ. ಹಾಸ್ಟೆಲ್ ವಿದ್ಯಾಭ್ಯಾಸಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
2. ರಾಯಚೂರಿನ ಲಿಂಗಸುಗೂರು ತಾಲೂಕಿನ ಅನ್ವರಿ ಗ್ರಾಮದ ಗಂಗಣ್ಣ ಎಂಬ 14 ವರ್ಷದ ಬಾಲಕ ಶಾಲೆಗೆ ಹೋಗಲು ಇಷ್ಟವಿಲ್ಲದ ಕಾರಣಕ್ಕೆ ಮಸ್ಕಿ ತಾಲ್ಲೂಕಿನ ಮಲ್ಲದಗುಡ್ಡ ಸರ್ಕಾರಿ ಶಾಲಾ ಆವರಣದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನು ಮಾನ್ವಿ ಪಟ್ಟಣದ ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ.
3. ಬೆಳಗಾವಿಯ ಖಾನಾಪುರದಲ್ಲಿ 17 ವರ್ಷದ ಪ್ರಥಮೇಶ್ ಎಂಬ ಬಾಲಕ ತನಗೆ ತಂದೆ, ತಾಯಿ ಹೊಸ ಮೊಬೈಲ್ ಕೊಡಿಸಲಿಲ್ಲ ಎಂಬ ಕಾರಣಕ್ಕೆ ಮನೆಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
4. ಚಿಕ್ಕಬಳ್ಳಾಪುರದ ಸರ್ಕಾರಿ ಕೃಷಿ ಮಹಾವಿದ್ಯಾಲಯದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಪವಿತ್ರಾ ಹಾಸ್ಟೆಲ್‌ನಲ್ಲಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಭಾರತದಲ್ಲಿ 18-30 ಮತ್ತು 30-45 ವರ್ಷ ವಯಸ್ಸಿನವರು ಕ್ರಮವಾಗಿ ಶೇ. 35.1 ಮತ್ತು ಶೇ. 31.8ರಷ್ಟು ಮಂದಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಒಟ್ಟಾರೆಯಾಗಿ, ಈ ವಯಸ್ಸಿನ ಯುವ ವಯಸ್ಕರು ಒಟ್ಟು ಆತ್ಮಹತ್ಯೆ ಪ್ರಕರಣಗಳಲ್ಲಿ ಶೇ. 67ರಷ್ಟಿದ್ದಾರೆ. 1995 ಮತ್ತು 1999 ರಲ್ಲಿ ಹುಟ್ಟಿದವರಲ್ಲಿ ವಿದ್ಯಾರ್ಥಿಗಳ ಒಟ್ಟು ಆತ್ಮಹತ್ಯೆ ಪ್ರಕರಣವು ಶೇಕಡಾ 5.2ರಷ್ಟಿದೆ. ಈ ಶೇಕಡಾವಾರು ಮಾಹಿತಿಯು 2020ರಲ್ಲಿ ಶೇಕಡಾ 8.2ಕ್ಕೆ ಏರಿದೆ ಎಂದು ಪ್ರವೃತ್ತಿಗಳು ತೋರಿಸುತ್ತವೆ. ಭಾರತದ ಹೆಚ್ಚಿನ ಪ್ರಮಾಣದ ಆತ್ಮಹತ್ಯೆಗಳು 15 ರಿಂದ 29 ವರ್ಷಗಳ ನಡುವೆ ಸಂಭವಿಸುತ್ತವೆ ಎಂದು ಅಧ್ಯಯನವು ಬಹಿರಂಗಪಡಿಸುತ್ತದೆ.
ಆತ್ಮಹತ್ಯೆಗೆ ಏನು ಕಾರಣ?
- ಮಾನಸಿಕ ಖಿನ್ನತೆ, ಆತಂಕದಲ್ಲಿ ಅಸ್ವಸ್ಥತೆ ಒಳಗಾಗುವುದು ಒಂದು ಪ್ರಮುಖ ಕಾರಣವಾಗಿದೆ. ಇಷ್ಟವಾಗದ ಕೆಲಸಗಳನ್ನು ಮಾಡಲೇಬೇಕು ಎಂದು ಒತ್ತಡ ಹೇರುವ ಅಥವಾ ನಮಗೆ ಅತಿ ಪ್ರಿಯವಾದವರು ದೂರವಾದರೆ, ಬೇಕಾದಂತಹ ವಸ್ತುಗಳು ಸಿಗದೇ ಹೋದರೆ ಖಿನ್ನತೆ ಪ್ರಾರಂಭವಾಗುತ್ತವೆ. ಇಂತಹ ಪ್ರಕರಣಗಳು ಪದೇಪದೆ ನಡೆಯುತ್ತಿದ್ದರೆ ಮಾನಸಿಕ ಅಸ್ವಸ್ಥತೆ ಒಳಗಾಗುತ್ತಾರೆ.
- ಬೈಪೋಲಾರ್ ಡಿಸಾರ್ಡರ್ ಅಥವಾ ವಿರೋಧಾತ್ಮಕ ಪ್ರತಿಭಟನೆಯ ಮನೋವೈದ್ಯಕೀಯ ಅಸ್ವಸ್ಥತೆಯನ್ನು ಹೊಂದಿರುವುದು ಒಂದು ರೀತಿಯ ಕಾರಣವಾಗಿದೆ.
- ಕುಟುಂಬದಲ್ಲಿ ಈ ಹಿಂದೆ ಯಾರಾದರೂ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದರೆ ಅಥವಾ ಮನೆಯಲ್ಲಿ ಆತ್ಮಹತ್ಯಾ ನಡವಳಿಕೆಯಂತಹ ಗುಣವುಳ್ಳವರಿದ್ದರೂ ಸಹ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಚೋದಿಸುವಂತಾಗುತ್ತದೆ.
- ನಿಕಟ ಸ್ನೇಹಿತರು ಅಥವಾ ಕುಟುಂಬ ಸದಸ್ಯರೊಂದಿಗೆ ನಷ್ಟ ಅಥವಾ ಸಂಘರ್ಷಗಳು ಉಂಟಾದಾಗ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗುತ್ತಾರೆ.
- ಪ್ರೌಢಾವಸ್ಥೆಗೆ ಸಂಬಂಧಿಸಿದ ಬದಲಾವಣೆಗಳು ಅಥವಾ ದೀರ್ಘಕಾಲದ ಅನಾರೋಗ್ಯದಂತಹ ದೈಹಿಕ ಅಥವಾ ವೈದ್ಯಕೀಯ ಸಮಸ್ಯೆಗಳು ಅಂದರೆ ಲೆಸ್ಬಿಯನ್, ಗೇ, ದ್ವಿಲಿಂಗಿ ಅಥವಾ ಯಾವುದೇ ಇತರ ಲೈಂಗಿಕ ಅಲ್ಪಸಂಖ್ಯಾತ ಯುವಕರಾಗಿರುವುದು ಕಾರಣವಾಗಿದೆ.
ವೈಧ್ಯರ ಸಲಹೆಗಳೇನು?
- ವೈದ್ಯಕೀಯ ಸಮಸ್ಯೆಗಳನ್ನು ಯಾರು ಹೊಂದಿರುತ್ತಾರೋ ಅಂತವರಿಗೆ ಸಮಯಕ್ಕೆ ಸರಿಯಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ನೀಡಬೇಕು.
- ಮನೆಯಲ್ಲಿ ಪಾಲಕರು ಮಕ್ಕಳಿಗೆ ಯಾವುದೇ ರೀತಿಯ ಒತ್ತಡವನ್ನು ಹೇರಬಾರದು.
- ಮಕ್ಕಳ ಜತೆ ಪಾಲಕರು ಸ್ನೆಹಿತರಂತೆ ಇರಬೇಕು.
- ಮಕ್ಕಳಿಗೆ ಹೊಸ ಹೊಸ ವಿಷಯದ ಬಗ್ಗೆ ಅರಿವು ಮೂಡಿಸುತ್ತಾ ಇರಬೇಕು.
- ಪಾಲಕರು ಯಾವಾಗಲೂ ಮಕ್ಕಳ ಮುಂದೆ ಜಗಳಗಳನ್ನು ಆಡಬಾರದು.
- ಮಕ್ಕಳನ್ನು ಆದಷ್ಟು ಮೊಬೈಲ್ಗಳಿಂದ ದೂರವಿಟ್ಟು, ಮಕ್ಕಳ ಜತೆ ಪ್ರವಾಸ ಹೋಗುವುದು, ಆಟವಾಡುವುದು, ಮೋಜು ಮಸ್ತಿಗಳಲ್ಲಿ ಆಗಾಗ ತೊಡಗುತ್ತಿರಬೇಕು.
- ಮಕ್ಕಳಿಗೆ ತಿಳಿಯದೆ ಇರುವ ಸಂಗತಿಗಳನ್ನು ಪಾಲಕರು ಮಕ್ಕಳಿಗೆ ತಿಳಿಯುವ ಹಾಗೆ ಅರ್ಥೈಸಿ ಹೇಳಿಕೊಡಬೇಕು.
- ಮಕ್ಕಳ ಮುಂದೆ ಯಾವುದೆ ತರಹದ ಅಶ್ಲಿಲ ಕ್ರಿಯೆಗಳನ್ನು ಮಾಡುವುದಾಗಲಿ ಅಥವಾ ಮಕ್ಕಳೇ ಅಂತಹದನ್ನು ನೋಡುವುದಾಗಲಿ ಇಂತಹ ಯಾವುದೇ ಕಾರ್ಯಗಳು ನಡೆಯದೆ ಇರುವಹಾಗೆ ನೋಡಿಕೊಳ್ಳಬೇಕು.
- ತಮ್ಮ ಮಕ್ಕಳು ಯಾರೊಂದಿಗೆ ಸಂಘ ಮಾಡುತ್ತಿದ್ದಾರೆ? ಅವರಿಗೆ ಆ ಸಂಘ ಸರಿಯೋ ತಪ್ಪೋ ಅನ್ನವುದನ್ನು ಗಮನಿಸಿ ಸರಿಯಾದ ಮಾರ್ಗದರ್ಶನವನ್ನು ಮಾಡಬೇಕು.
ಇಂತಹ ಲಕ್ಷಣಗಳು ಕಂಡುಬಂದರೆ ಆತ್ಮಹತ್ಯೆ ತಡೆ ಸಹಾಯವಾಣಿ ಡೈರೆಕ್ಟರಿಗೆ (ಭಾರತ) ಕರೆ ಮಾಡಬಹುದಾಗಿದೆ. ಇ-ಮೇಲ್ ವಿಳಾಸ | aasrahelpline@yahoo.com
ಸಹಾಯವಾಣಿಗಳು:
ಕರ್ನಾಟಕ
ಪರಿವರ್ತನ್ ಕೌನ್ಸೆಲಿಂಗ್ ಸಹಾಯವಾಣಿ ಸೇವೆಗಳು (Parivarthan Counseling Helpline Services)
+91 7676 602 602
04:00 PM to 10:00 PM | Monday to Friday
ಬೆಂಗಳೂರು
ಸಹಾಯಿ (SAHAI)
+91 080 25497777, 9886444075
Monday to Saturday: 10 AM to 8 PM
ಬೆಂಗಳೂರು
ಸ-ಮುದ್ರಾ ಯುವ ಸಹಾಯವಾಣಿ (Sa-Mudra Yuva Helpline)
+91 9880396331
24×7
ಬೆಂಗಳೂರು
ಆರೋಗ್ಯ ಸಹಾಯವಾಣಿ (Arogya Sahayavani)
104
24×7
ಕರ್ನಾಟಕ
ಇದನ್ನೂ ಓದಿ: ವಿದ್ಯಾಭ್ಯಾಸಕ್ಕೆ ಬೇಸತ್ತು ಇಬ್ಬರು ವಿದ್ಯಾರ್ಥಿಗಳ ಆತ್ಮಹತ್ಯೆ