ಪಣಜಿ/ಬೆಂಗಳೂರು: ರಾಜ್ಯ ರಾಜಧಾನಿಯ ಮಹಾಲಕ್ಷ್ಮೀ ಲೇಔಟ್‌ನಿಂದ ನಾಪತ್ತೆಯಾಗಿದ್ದ ಬಾಲಕಿ ಭಾರ್ಗವಿ ಗೋವಾದಲ್ಲಿ ಪತ್ತೆಯಾಗಿದ್ದು, ಆಕೆಯ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದೆ ಎಂಬ ಕಾರಣಕ್ಕಾಗಿ ಬೇಸರಗೊಂಡಿದ್ದ ಭಾರ್ಗವಿ, ಅ.೧೬ರಂದು ನಾಪತ್ತೆಯಾಗಿದ್ದಳು. ಬಾಲಕಿಯ ನಾಪತ್ತೆ ಪ್ರಕರಣವು ರಾಜ್ಯಾದ್ಯಂತ ಗಮನ ಸೆಳೆದಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಫೋಟೊ ಹರಿದಾಡಿದ ಕಾರಣ ಜನರೂ ಕಳವಳ ವ್ಯಕ್ತಪಡಿಸಿದ್ದರು.
ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಬಾಲಕಿಯು ಮಂಗಳೂರಿಗೆ ತೆರಳಿದ್ದಳು. ಮಂಗಳೂರಿನ ಹಲವೆಡೆ ತಿರುಗಾಡಿದ್ದ ಆಕೆ ಬಳಿಕ ಗೋವಾಗೆ ತೆರಳಿದ್ದಳು. ಈಗ ಗೋವಾದಲ್ಲಿ ಆಕೆ ಪತ್ತೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದ್ದು, ಸದ್ಯ ಆಕೆ ಗೋವಾ ಪೊಲೀಸರ ರಕ್ಷಣೆಯಲ್ಲಿದ್ದಾಳೆ. ಶೀಘ್ರವೇ ಆಕೆಯನ್ನು ಬೆಂಗಳೂರಿಗೆ ಕರೆತರಲಾಗುತ್ತದೆ ಎಂದು ತಿಳಿದುಬಂದಿದೆ.
ಮಂಗಳೂರಿನ ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆ ಓಡಾಡಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಆಗಿದ್ದು, ಎಲ್ಲೆಡೆ ವೈರಲ್ ಆಗಿದ್ದವು. ಈ ಬಗ್ಗೆ ಮಂಗಳೂರು ಸೇರಿದಂತೆ ಯಾವುದೇ ಕಡೆ ಬಾಲಕಿ ಕಂಡರೂ ಕೂಡಲೇ ಮಾಹಿತಿ ನೀಡುವಂತೆ ಪೊಲೀಸರು ಪ್ರಕಟಣೆ ಹೊರಡಿಸಿದ್ದರು. ಈಗ ಬಾಲಕಿ ಪತ್ತೆಯಾದ ಕಾರಣ ಪ್ರಕರಣ ಸುಖಾಂತ್ಯವಾದಂತಾಗಿದೆ.
ಇದನ್ನೂ ಓದಿ | ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ಭಾರ್ಗವಿ ನಾಪತ್ತೆ; ಮಂಗಳೂರಿನಲ್ಲಿ ಓಡಾಡಿದ ಸಿಸಿಟಿವಿ ಫೂಟೇಜ್ ಲಭ್ಯ