ಬೆಂಗಳೂರು: ತೆರೆಮರೆಗೆ ಸರಿದಿದ್ದವರು ಕಾಂಗ್ರೆಸ್ ಸರ್ಕಾರ ಬಂದ ನಂತರದಲ್ಲಿ ಅಣಬೆ ರೀತಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು, ಶಾಸಕರ ತರಬೇತಿ ಶಿಬಿರಕ್ಕೆ (Legislative Assembly) ಧಾರ್ಮಿಕ ಮುಖಂಡರ ಆಗಮನವನ್ನು ವಿರೋಧಿಸಿದ ಸಾಹಿತಿಗಳ ಕುರಿತು ಸಂಸದ ತೇಜಸ್ವಿ ಸೂರ್ಯ ಟೀಕಿಸಿದ್ದಾರೆ.
ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ತೇಜಸ್ವಿ ಸೂರ್ಯ, ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ಬಳಿಕ ತೆರೆಮರೆಗೆ ಸರಿದಿದ್ದವರು ಅಣಬೆಗಳ ರೀತಿ ಹುಟ್ಟಿಕೊಳ್ಳುತಿದ್ದಾರೆ. ಕಾಂಗ್ರೆಸ್‌ನ ಕೃಪಾಪೋಷಿತ, ಆಸ್ಥಾನ ಕವಿಗಳು, ಮರುಳಸಿದ್ದಪ್ಪನವರಂತವರಿಗೆ ರಾಜ್ಯದ ಜನತೆ ಕೇಳೊದು.
ವೀರೇಂದ್ರ ಹೆಗ್ಗಡೆಯವರು ಅನೇಕ ಕಾರ್ಯಗಳಿಂದ ಜನ ಅವರನ್ನ ನಡೆದಾಡುವ ದೇವರು ಅಂತ ಕಾಣ್ತಾರೆ. ಮರಳಸಿದ್ದಪ್ಪನವರು ಯಾರಿಗಾದ್ರೂ ಇಬ್ಬರಿಗಾದ್ರೂ ಜೀವನ ಕಟ್ಟುಕೊಟ್ಟಿದ್ದಾರಾ? ರವಿಶಂಕರ್ ಗುರೂಜಿ ಅಫ್ಘಾನಿಸ್ತಾನ, ಉಜ್ಬೇಕಿಸ್ಥಾನದಲ್ಲಿ ಆ ದೇಶದ ಉನ್ನತ ಮಟ್ಟದ ಗೌರವ ನೀಡಿದ್ದಾರೆ. ಆ ಮುಸಲ್ಮಾನ ದೇಶ ತೋರಿದ ಔದರ್ಯವನ್ನು ತೋರಲು ಮುಲ್ಲಾ ಮರುಳ ಸಿದ್ದಪ್ಪನವರಿಗೆ ವಿಶಾಲಹೃದಯ ಇಲ್ಲ. ಗುರುರಾಜ್ ಕರ್ಜಗಿ ದೇಶ ಕಂಡ ಶೈಕ್ಷಣಿಕ ತಜ್ಞರು. ಅವರನ್ನ ಕರೆಸಿ ವಿದೇಶದಲ್ಲಿ ಟ್ರೈನಿಂಗ್ ಕೊಡುಸ್ತಾರೆ.
ಯು.ಟಿ. ಖಾದರ್ ಅವರು ಮಾಡುತ್ತಿರುವ ಕಾರ್ಯ ಮೆಚ್ಚುವಂಥದ್ದು. ಶಾಸಕರಿಗೆ ತರಬೇತಿ ಕೊಡಬೇಕು ಅಂದುಕೊಂಡಿರುವುದು ಉತ್ತಮ ಕೆಲಸ. ಮರುಳ ಸಿದ್ದಪ್ಪನವರನ್ನ ಕರೆದಿಲ್ಲ ಅನ್ನೋ ಕಾರಣಕ್ಕೆ ಹೀಗೆ ಆಡ್ತಿರಬೇಕು. ಯು.ಟಿ. ಖಾದರ್ ಅವ್ರು ಮರಳಸಿದ್ದಪ್ಪನವರನ್ನು ಕರೆದುಬಿಟ್ಟರೆ ಬಹುಶಃ ಅವರ ವಿರೋಧ ಹೋಗಬಹುದೇನೊ ಎಂದರು.
ಇದನ್ನೂ ಓದಿ: MLA training: ಶಾಸಕರ ತರಬೇತಿಗೆ ಗಣ್ಯರ ಆಹ್ವಾನದ ಬಗ್ಗೆ ಆಕ್ಷೇಪ; ತಿರುಗೇಟು ನೀಡಿದ ಸ್ಪೀಕರ್ ಖಾದರ್
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಎಂ ಡಿ.ಕೆ. ಶಿವಕುಮಾರ್, ಸ್ಪೀಕರ್ ಮೇಲೆ ಸರ್ಕಾರ ಮಾತಾಡಲು ಆಗಲ್ಲ. ಸ್ಪೀಕರ್ ಐದು ಬಾರಿ ಗೆದ್ದವರು. ಅವರ ಜೊತೆಗೆ ಖಾಸಗಿಯಾಗಿ ನಾನು ಮಾತಾಡುತ್ತೇನೆ ಎಂದಿದ್ದಾರೆ.