Site icon Vistara News

Praveen Nettaru | ಕಾಶ್ಮೀರದಿಂದಲೇ ಸಾಂತ್ವನ ಹೇಳಿದ ತೇಜಸ್ವಿ, ಜಾಲತಾಣದಲ್ಲಿ ತೀವ್ರ ತರಾಟೆ

tejaswi surya

ಬೆಂಗಳೂರು: ಬಿಜೆಪಿ ಯುವಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ, ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಕೊಲೆಯಾದ ಯುವ ಮೋರ್ಚಾ ಪದಾಧಿಕಾರಿ ಪ್ರವೀಣ್‌ ನೆಟ್ಟಾರು ಅವರ ಕುಟುಂಬಕ್ಕೆ ಕಾಶ್ಮೀರದಿಂದ ಫೋನ್‌ ಮೂಲಕ ಸಾಂತ್ವನ ಹೇಳಿದ್ದಾರೆ. ಶಿವಮೊಗ್ಗದ ಹರ್ಷ ಮತ್ತು ಪ್ರವೀಣ್‌ ನೆಟ್ಟಾರು ಅವರ ಕೊಲೆ ಪ್ರಕರಣವನ್ನು ಯುಎಪಿಎ ಕಾಯಿದೆಯ ವ್ಯಾಪ್ತಿಯಡಿಗೆ ತಂದು ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಯಲ್ಲಿ ಕೋರುವುದಾಗಿ ಅವರು ಸೋಷಿಯಲ್‌ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ತೇಜಸ್ವಿ ಸೂರ್ಯ ಅವರು ತಿರಂಗಾ ಯಾತ್ರೆ ಪ್ರಯುಕ್ತ ಕಳೆದ ಎರಡು ದಿನಗಳಿಂದ ಜಮ್ಮು ಮತ್ತು ಕಾಶ್ಮೀರದಲ್ಲಿ ಇದ್ದಾರೆ. ಶ್ರೀನಗರದ ಲಾಲ್‌ ಚೌಕದಿಂದ ಕಾರ್ಗಿಲ್‌ವರೆಗೆ ನಡೆದ ಬೈಕ್‌ ರ‍್ಯಾಲಿಯಲ್ಲಿ ಅವರು ಪಾಲ್ಗೊಂಡಿದ್ದಾರೆ. ʻʻ1952 ರ ನಂತರ ಶ್ರೀನಗರದ ಲಾಲ್‌ ಚೌಕ್‌ ನಲ್ಲಿ ಯಾವುದೇ ರಾಜಕೀಯ ಪಕ್ಷದ ವತಿಯಿಂದ ಕಾರ್ಯಕ್ರಮಗಳು ನಡೆದಿರುವುದಿಲ್ಲ. ಬಿಜೆಪಿ ಯುವಮೋರ್ಚಾ ವತಿಯಿಂದ ದೇಶದ ವಿವಿಧ ಭಾಗಗಳ ಹುತಾತ್ಮ ಸೈನಿಕರ ಮನೆಯ ಅಂಗಳದ ಮಣ್ಣನ್ನು ಕಲಶದಲ್ಲಿ ಹೊತ್ತು ತಂದು ಕಾರ್ಗಿಲ್‌ ಯುದ್ಧ ಸ್ಮಾರಕದ ಪರಿಸರದಲ್ಲಿ ಗಿಡ ನೆಡುವ ಐತಿಹಾಸಿಕ ಕಾರ್ಯದಲ್ಲಿ ಪಾಲ್ಗೊಂಡಿದ್ದೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ರಾಷ್ಟ್ರವಾದದ ಚಿಂತನೆಗಳು ಇಂದು ಕಣಿವೆ ರಾಜ್ಯದಲ್ಲಿ ಫಲ ನೀಡುತ್ತಿವೆ. ಅದರ ಬಗ್ಗೆ ಖುಷಿಪಡುತ್ತಾ ಬೈಕ್‌ ರ‍್ಯಾಲಿಯಲ್ಲಿ ಇರುವಾಗಲೇ ನನ್ನ ತವರು ರಾಜ್ಯದಲ್ಲಿ ಇಂತಹ ಭೀಕರ ಘಟನೆ ನಡೆದಿರುವುದು ನನ್ನ ಮನಸ್ಸಿಗೆ ಅತ್ಯಂತ ನೋವನ್ನುಂಟು ಮಾಡಿದೆʼʼ ಎಂದು ತೇಜಸ್ವಿ ಬರೆದುಕೊಂಡಿದ್ದಾರೆ.

ಸಂಚನ್ನು ಬಯಲಿಗೆಳೆಯಿರಿ
ಹರ್ಷ, ಪ್ರವೀಣ್‌ ಹತ್ಯೆಯಂಥ ಪ್ರಕರಣಗಳನ್ನು ಕೇವಲ ಧಾರ್ಮಿಕ ಕಾರಣದ ಹತ್ಯೆ ಎಂಬುದಾಗಿ ಪರಿಗಣಿಸದೆ, ಇದರ ಹಿಂದಿರುವ ವ್ಯವಸ್ಥಿತ ಜಾಲ, ಸಂಚನ್ನು ಬಯಲಿಗೆಳೆಯಬೇಕು, ಪ್ರಮುಖ ಸಂಘಟನೆ ಹಾಗೂ ಧಾರ್ಮಿಕ ಮೂಲಭೂತವಾದವನ್ನು ಬಿತ್ತುವ ಪ್ರಮುಖ ವ್ಯಕ್ತಿಗಳಿಗೆ ಉಗ್ರ ಶಿಕ್ಷೆ ನೀಡುವಂತೆ ಮನವಿ ಸಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿಯವರನ್ನು ವಿನಂತಿಸಿದ್ದಾರೆ.

ಪ್ರವೀಣ ನೆಟ್ಟಾರು ಮತ್ತು ಹರ್ಷ ಅವರನ್ನು ಕೊಲೆಗೈದಿರುವ ರೀತಿ ಹಾಗೂ ಕರ್ನಾಟಕದಲ್ಲಿ ಧಾರ್ಮಿಕ ಕಾರಣಗಳಿಗಾಗಿ ನಡೆದಿರುವ ಹಿಂದೂ ಕಾರ್ಯಕರ್ತರ ಸರಣಿ ಹತ್ಯೆಗಳು, ಕೆಲವು ಮತಾಂಧ ಇಸ್ಲಾಮಿಕ್ ಸಂಘಟನೆಗಳ ಪೂರ್ವನಿಯೋಜಿತ ಸಂಘಟಿತ ಅಪರಾಧ (ಷಡ್ಯಂತ್ರ)ದ ಭಾಗವಾಗಿವೆ. ಇವುಗಳನ್ನು ಕೇವಲ ಸಾಮಾನ್ಯ ಹತ್ಯೆಗಳೆಂದು ಪರಿಗಣಿಸದೇ, ಭಯೋತ್ಪಾದನೆಯ ಪ್ರಕರಣಗಳೆಂದು ಪರಿಗಣಿಸಬೇಕು. ಸಾಮಾನ್ಯ ಹತ್ಯೆ ಎಂಬ ತೀರ್ಮಾನಕ್ಕೆ ಬಂದಲ್ಲಿ, ತನಿಖೆ ಹಾದಿ ತಪ್ಪುವ ಮತ್ತು ನೈಜ ಅಪರಾಧಿಗಳನ್ನು ತಪ್ಪಿತಸ್ಥರೆಂದು ಬಿಂಬಿಸಲು ಅಸಾಧ್ಯವಾಗುವ ಸಂಭವವಿದೆ. ಹರ್ಷ ರವರ ಪ್ರಕರಣವನ್ನು UAPA ಅಡಿ ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಕೋರಿದ್ದಾರೆ.

ಕೇವಲ ಉಗ್ರ ಶಿಕ್ಷೆಯ ಮಾತುಗಳನ್ನಾಡಿ, 3 ದಿನಗಳ ನಂತರ ಯಥಾಸ್ಥಿತಿ ಹಾಗೂ ಮತ್ತೊಂದು ಬಲಿಯಾದಾಗ ಮತ್ತೆ ಇಂತಹ ಹೇಳಿಕೆಗಳನ್ನು ಪುನರುಚ್ಚರಿಸುವ ಬದಲು, ಸಮಸ್ಯೆಯ ಮೂಲಕ್ಕೆ ಪರಿಹಾರ ಕಂಡುಕೊಳ್ಳಲೇಬೇಕಾದ ಅಗತ್ಯತೆಯನ್ನು ನಾನು ಸರ್ಕಾರಕ್ಕೆ ಒತ್ತಾಯಪಡಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಆಕ್ರೋಶ
ತೇಜಸ್ವಿ ಸೂರ್ಯ ಅವರ ಫೇಸ್‌ಬುಕ್‌ ಪೋಸ್ಟನ್ನು ೬.೪ ಲಕ್ಷ ಮಂದಿ ಲೈಕ್‌ ಮಾಡಿದ್ದಾರೆ. ೧,೭೦೦ಕ್ಕೂ ಅಧಿಕ ಮಂದಿ ಕಮೆಂಟ್‌ ಮಾಡಿದ್ದಾರೆ. ೪೦೫ ಮಂದಿ ಹೇಳಿಕೆಯನ್ನು ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಕಮೆಂಟ್‌ ಮಾಡಿದ ೧೭೦೦ಕ್ಕೂ ಅಧಿಕ ಮಂದಿಯಲ್ಲಿ ಹೆಚ್ಚಿನವರು ಸಂಸದರಾದ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಸರಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ನಾವು ಶೂರರು ಎಂದು ಆರಿಸಿದೆವು. ಈಗ ಷಂಡರನ್ನು ಆರಿಸಿದ್ದರ ಅರಿವಾಗುತ್ತಿದೆ ಎಂಬಷ್ಟು ತೀಕ್ಷ್ಣವಾದ ಪ್ರತಿಕ್ರಿಯೆಗಳಿದ್ದರೆ, ಬಾಯ್ಕಾಟ್‌ ಬಿಜೆಪಿ ಎಂದು ಕೆಲವರು ಹ್ಯಾಷ್‌ ಟ್ಯಾಗ್‌ ಹಾಕಿದ್ದಾರೆ.

ʻʻನೀವ್ಗಳು ಹೀಗೆ ಮೌನವಾಗಿರಲು ಕಾರಣವೇನು? ಹಿಂದುತ್ವ ಬರೀ ಮೈಕಿಗೆ ಭಾಷಣಕ್ಕೆ ಸೀಮಿತ ಅಲ್ಲವೇ? ಬಲ ಇಲ್ಲದ ಮುಖ್ಯಮಂತ್ರಿ, ನರ ಇಲ್ಲದ ಗೃಹಮಂತ್ರಿ, ಇವುಗಳ ನಡುವೆ ಕಾರ್ಯಕರ್ತ ಓಂ ಶಾಂತಿ..!ʼʼ ಎಂದು ಒಬ್ಬರು ಹೇಳಿದ್ದಾರೆ.
ಇದನ್ನೂ ಓದಿ| Praveen Nettaru | ಪಕ್ಷ, ಸಿದ್ಧಾಂತಕ್ಕೆ ಹೋರಾಡುವವರಿಗಿಲ್ಲ ರಕ್ಷಣೆ; ಬಿಜೆಪಿ ನೂರಾರು ಕಾರ್ಯಕರ್ತರ ರಾಜೀನಾಮೆ

Exit mobile version