Site icon Vistara News

Temple and Nonveg : ರವಿ ಅವರೇ ಮಾಂಸ ತಿಂದಿದ್ರಿ, ದೇವಸ್ಥಾನಕ್ಕೆ ಹೋಗಿದ್ರಿ, ಬಿಟ್ರೆ ಒಳಗೂ ಹೋಗ್ತಿದ್ರಿ ಎಂದ ಪ್ರಿಯಾಂಕ್‌ ಖರ್ಗೆ

CT Ravi siddaramaiah riyank Kharge

#image_title

ವಿಧಾನ ಸೌಧ, ಕೆಂಗಲ್ ಗೇಟ್ (ಬೆಂಗಳೂರು): ಸಿದ್ದರಾಮಯ್ಯ ಅವರು ಮಾಂಸ ತಿಂದು ಧರ್ಮಸ್ಥಳ ದೇವಸ್ಥಾನಕ್ಕೆ ಹೋಗಿದ್ದಾರೆ ಎಂದು ಗುಲ್ಲೆಬ್ಬಿಸಿದ ಸಿ.ಟಿ. ರವಿ ಅವರೇ ನೀವು ಮಾಡಿದ್ದೇನು?- ಹೀಗೆಂದು ಕಾಂಗ್ರೆಸ್‌ ನಾಯಕ ಪ್ರಿಯಾಂಕ್‌ ಖರ್ಗೆ (Temple and Nonveg) ಪ್ರಶ್ನಿಸಿದ್ದಾರೆ.

ಫೆ.19ರ ಭಾನುವಾರದಂದು ಸಿ.ಟಿ. ರವಿ ಅವರು ಉತ್ತರ ಕನ್ನಡ ಜಿಲ್ಲೆಗೆ ಹೋಗಿದ್ದರು. ಕಾರವಾರದಲ್ಲಿ ಏರ್ಪಡಿಸಲಾಗಿದ್ದ ರಾಜ್ಯಮಟ್ಟದ ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಳಿಕ ಅಲ್ಲಿಂದ ಭಟ್ಕಳಕ್ಕೆ ತೆರಳಿದ್ದರು. ಭಟ್ಕಳದ ಶಿರಾಲಿಯಲ್ಲಿರುವ ಶಾಸಕ ಸುನೀಲ್ ನಾಯ್ಕ ಮನೆಯಲ್ಲಿ ಬಾಡೂಟವನ್ನು ಸೇವನೆ ಮಾಡಿದ್ದರು. ಬಾಡೂಟ ಸವಿದ ಸಿ.ಟಿ. ರವಿ ಅವರು ಅಲ್ಲಿಂದ ಭಟ್ಕಳ ನಗರದ ಹಳೇ ಬಸ್‌ ನಿಲ್ದಾಣದ ಸಮೀಪ ಇರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ಭಟ್ಕಳ ಶಾಸಕ ಸುನಿಲ್ ನಾಯ್ಕ ಹಾಗೂ ಕಮಿಟಿ ಸದಸ್ಯರು ಈ ವೇಳೆ ಇವರ ಜತೆಗಿದ್ದರು. ಅಲ್ಲದೆ, ದೇವಸ್ಥಾನದ ಆವರಣದಲ್ಲೇ ಶಾಸಕ ಸುನೀಲ್ ನಾಯ್ಕ ಹಾಗೂ ಕಮಿಟಿ ಸದಸ್ಯರಿಂದ ಸನ್ಮಾನವನ್ನೂ ಸ್ವೀಕರಿಸಿದ್ದರು. ಇದರ ವಿಡಿಯೊ ಈಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದ್ದು ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು. ಇದಕ್ಕೆ ಪ್ರತಿಕ್ರಿಯಿಸಿದ್ದ ಸಿ.ಟಿ. ರವಿ ಅವರು ʻನಾನು ಒಕ್ಕಲಿಗ. ಮಾಂಸ ತಿಂತೇನೆ, ಮಾಂಸ ತಿಂದಿದ್ದೂ ನಿಜ. ದೇವಸ್ಥಾನದ ಬಳಿ ಹೋಗಿದ್ದೂ ನಿಜ. ಆದರೆ, ದೇವಸ್ಥಾನದ ಒಳಗೆ ಹೋಗಿಲ್ಲʼʼ ಎಂದಿದ್ದರು. ಸಿ.ಟಿ. ರವಿ ಅವರು ಅಲ್ಲಿ ಹೋದಾಗ ದೇವಸ್ಥಾನ ಮುಚ್ಚಿತ್ತು.

ಬಾಡೂಟ, ದೇವಳ ಭೇಟಿ ಬಗ್ಗೆ ಪ್ರಿಯಾಂಕ್‌ ಖರ್ಗೆ ಹೇಳಿದ್ದೇನು?

ಈ ಘಟನಾವಳಿ ಬಗ್ಗೆ ಪ್ರಶ್ನೆಯನ್ನು ಎತ್ತಿರುವ ಪ್ರಿಯಾಂಕ್‌ ಖರ್ಗೆ ಬಿಜೆಪಿ ನಾಯಕರಿಗೆ ಎರಡು ನಾಲಿಗೆ ಎಂದು ದೂಷಿಸಿದ್ದಾರೆ. ʻʻಬಿಜೆಪಿಯವರಿಗೆ ಎರಡು ನಾಲಿಗೆ ಇದೆ ಅನ್ನೋದಕ್ಕೆ ಇದು ಸ್ಪಷ್ಟ ಉದಾಹರಣೆ. ಆವತ್ತು ಸಿದ್ದರಾಮಯ್ಯನವರು ದೇವಸ್ಥಾನಕ್ಕೆ ಮಾಂಸ ತಿಂದು ಹೋಗಿದ್ರು ಅಂತಾ ಯಾರೋ ಹೇಳಿದಕ್ಕೆ ಬಿಜೆಪಿಯ ಎಲ್ಲ ನಾಯಕರು ಮುಗಿಬಿದ್ದರು. ಅದಕ್ಕೆ ಸಿದ್ದರಾಮಯ್ಯ ಅವರು ನಾನು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ ಅಂತ ಸ್ಪಷ್ಟನೆ ನೀಡಿದ್ದರು. ಜತೆಗೆ ಇಂಥ ಆಷಾಢಭೂತಿತನವನ್ನು ಪ್ರಶ್ನಿಸುವುದಕ್ಕಾಗಿ ʻʻಒಂದು ವೇಳೆ ತಿಂದಿದ್ರು ಕೂಡಾ ನೀವ್ಯಾರು ಕೇಳೋಕೆʼʼ ಅಂತ ಪ್ರಶ್ನೆ ಮಾಡಿದ್ದರು. ಆಹಾರ ಪದ್ಧತಿಗಳನ್ನು ಯಾರು ಕೂಡಾ ಕೇಳುವಂತಿಲ್ಲ. ಅದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ ಎಂದು ಸ್ಪಷ್ಟಡಿಸಿದ್ದರುʼʼ ಎಂದು ವಿವರಿಸಿದ್ದಾರೆ ಪ್ರಿಯಾಂಕ್‌ ಖರ್ಗೆ.

ʻʻಆದರೆ ಸಿಟಿ ರವಿಯವರು ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿದ್ದಾರೆ ಎನ್ನುವುದು ಬಹಳ ಸ್ಪಷ್ಟವಾಗಿ ಕಾಣಿಸುತ್ತದೆ. ಆದರೆ, ದೇವಸ್ಥಾನದ ಬಾಗಿಲು ಮುಚ್ಚಿತ್ತು. ಹೀಗಾಗಿ ಹೊರಗಡೆಯಿಂದ ನೋಡಿಕೊಂಡು ಬಂದೆ ಅಂತಾ ಹೇಳಿದ್ದರು. ಒಂದು ವೇಳೆ ಬಾಗಿಲು ತೆರೆದಿದ್ದರೆ ಒಳಗಡೆಯೂ ಹೋಗುತ್ತಿದ್ದರಲ್ವಾ? ಈಗಲೂ ಆವರಣಕ್ಕಾದರೂ ಹೋಗಿದ್ದೀರಲ್ವಾ?ʼʼ ಎಂದು ಪ್ರಿಯಾಂಕ್‌ ಪ್ರಶ್ನಿಸಿದ್ದಾರೆ.

ಸಿದ್ದರಾಮಯ್ಯ ಹಿಂದು ಧರ್ಮ ವಿರೋಧಿ ಆದರೆ, ನೀವೇನೀವಾಗ?

ʻʻಅವರಿಗೊಂದು ನ್ಯಾಯ, ನಿಮಗೊಂದು ನ್ಯಾಯಾನಾ? ನೀವೂ ಮಾಡಿದಾಗ ಎಲ್ಲವೂ ಸರಿ, ಆದರೆ ಬೇರೆಯವರು ಮಾಡಿದ್ರೆ ಹಿಂದೂ ಧರ್ಮದ ವಿರೋಧಿ ಅಂತಾ ಹೇಳ್ತೀರಲ್ಲ. ಹಾಗಾದ್ರೆ ನೀವೇನೀಗಾ..!? ಮಾಂಸ ತಿಂದಿದ್ದು, ಅಲ್ಲಿಗೆ ಹೋಗಿದ್ದು ನಿಜ ‍ಅಂತಾ ಒಪ್ಪಿಕೊಂಡಿದ್ದೀರಲ್ಲ..!? ಇದು ಎರಡು ನಾಲಿಗೆ ಅನ್ನೋದಕ್ಕೆ ಸ್ಪಷ್ಟವಾದ ಉದಾಹರಣೆʼʼ ಎಂದು ಹೇಳಿದರು.

ʻʻಚುನಾವಣೆ ಬಂದಾಗ ನಿಮಗೆ ಪ್ರಗತಿಪರ ಯೋಜನೆಗಳ ಬಗ್ಗೆ ಹೇಳಲು ಆಗದ ಕಾರಣ ಹಿಂದುತ್ವ, ಟಿಪ್ಪು ಸುಲ್ತ‍ಾನ್, ಸಾರ್ವಕರ್ ವಿಷಯಗಳನ್ನು ತರುತ್ತೀರಿ. ದಯವಿಟ್ಟು ಇದನ್ನೆಲ್ಲ ನಿಲ್ಲಿಸಿ. ಕನ್ನಡಿಗರಿಗೆ ಏನ್ ಮಾಡ್ತಿದ್ದೀರಾ? ರಾಜ್ಯದ ಜನತೆಗೆ ಏನ್ ಮಾಡ್ತಿದ್ದೀರಾ ಅನ್ನೋದನ್ನ ಮುಂದಿಟ್ಟುಕೊಂಡು ಚುನಾವಣೆ ಮಾಡಿʼʼ ಎಂದು ಪ್ರಿಯಾಂಕ್‌ ಸಲಹೆ ನೀಡಿದರು.

ಇದನ್ನೂ ಓದಿ : CT Ravi: ಮಾಂಸ ತಿಂದು ನಾಗಬನ, ಹನುಮ ದೇಗುಲಕ್ಕೆ ಭೇಟಿ ಕೊಟ್ಟರಾ ಸಿ.ಟಿ ರವಿ?;‌ ಸೋಷಿಯಲ್‌ ಮೀಡಿಯಾದಲ್ಲಿ ವಿಡಿಯೊ ವೈರಲ್

Exit mobile version