Site icon Vistara News

ಓಲಾ, ಉಬರ್‌, ರ‍್ಯಾಪಿಡೋಗೆ ತಾತ್ಕಾಲಿಕ ಜಯ; ಶೇ.10 ಮೀರದಂತೆ ದರ ವಿಧಿಸಿ, ಜಿಎಸ್‌ಟಿ ಪಡೆಯಬಹುದೆಂದ ಕೋರ್ಟ್‌

auto

ಬೆಂಗಳೂರು: ಅಗ್ರಿಗೇಟರ್‌ ಆ್ಯಪ್‌ಗಳಾದ ಓಲಾ, ಉಬರ್‌, ರ‍್ಯಾಪಿಡೋಗಳ ಆಟೋ ಸೇವೆ ಸದ್ಯಕ್ಕೆ ನಿರಾತಂಕವಾಗಿದ್ದು, ತಾತ್ಕಾಲಿಕ ವ್ಯವಸ್ಥೆ ಮಾಡಿ ಹೈಕೋರ್ಟ್‌ ಸೂಚನೆ ಹೊರಡಿಸಿದೆ. ಸರ್ಕಾರ ನಿಗದಿ ಮಾಡಿರುವ ಬೆಲೆಯ ಮೇಲೆ ಶೇ. ೧೦ ಮೀರದಂತೆ ದರ ವಿಧಿಸಬಹುದು. ಜತೆಗೆ ಜಿಎಸ್‌ಟಿಯನ್ನೂ ಪಡೆದುಕೊಳ್ಳಬಹುದು ಎಂದು ಸೂಚನೆ ನೀಡಿದೆ.

ಅಗ್ರಿಗೇಟರ್‌ ಆ್ಯಪ್‌ಗಳು ತಮ್ಮ ಆಟೋ ಸೇವೆಯಲ್ಲಿ ಸಾರ್ವಜನಿಕರಿಂದ ಹೆಚ್ಚಿನ ಹಣ ವಸೂಲಿ ಮಾಡುತ್ತಿದೆ. ಮೂಲ ದರಕ್ಕಿಂತ ಹೆಚ್ಚಿನ ಹಣ ವಿಧಿಸುತ್ತಿದೆ ಎಂಬ ಆರೋಪ, ಅಭಿಯಾನ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಅವುಗಳಿಗೆ ಕಡಿವಾಣ ಹಾಕಿ ಆದೇಶ ಹೊರಡಿಸಿತ್ತು. ಈ ಸಂಬಂಧ ನಡೆದ ರಾಜಿ ಸಭೆಯಲ್ಲೂ ಯಾವುದೇ ನಿರ್ಣಯಕ್ಕೆ ಈ ಆ್ಯಪ್‌ಗಳು ಬಂದಿರಲಿಲ್ಲ. ತಮ್ಮ ಸೇವೆಯನ್ನು ಅಭಾದಿತವಾಗಿ ಮುಂದುವರಿಸಿದ್ದ ಆರೋಪವೂ ಕೇಳಿಬಂದಿತ್ತು. ಹೀಗಾಗಿ ಈ ಆ್ಯಪ್‌ಗಳು ಆಟೋ ಸೇವೆ ಮುಂದುವರಿಸಿದರೆ ೫ ಸಾವಿರ ರೂಪಾಯಿ ದಂಡ ವಿಧಿಸುವ ಎಚ್ಚರಿಕೆ ಸಹಿತ ಇನ್ನಿತರ ನಿಯಮಗಳನ್ನು ಸರ್ಕಾರ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ಈ ಆ್ಯಪ್‌ಗಳು ಹೈಕೋರ್ಟ್‌ ಮೊರೆಹೋಗಿದ್ದವು.

ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್‌, ಈ ಬಗ್ಗೆ ಸರ್ಕಾರ ತೀರ್ಮಾನ ತೆಗೆದುಕೊಂಡು ಮುಂದಿನ ೧೫ ದಿನಗಳೊಳಗೆ ವರದಿ ನೀಡಬೇಕು ಎಂದು ಆದೇಶಿಸಿ ನವೆಂಬರ್ 7ಕ್ಕೆ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ಎಲ್ಲರನ್ನೂ ಸಭೆಗೆ ಕರೆದು ಚರ್ಚಿಸಿ
ಓಲಾ, ಉಬರ್ ಸೇರಿ ಅಗ್ರಿಗೇಟರ್‌ ಆ್ಯಪ್‌ಗಳು ತಮ್ಮ ಸೇವೆ ನಡೆಸಲು ಯಾವುದೇ ಪರವಾನಗಿ ಪಡೆದುಕೊಂಡಿಲ್ಲ ಎಂದು ಸರ್ಕಾರದ ಪರ ವಕೀಲರು ವಾದಿಸಿದ್ದರು. ಇದೇ ವೇಳೆ, ಗುರುವಾರ ನಡೆದ ತುರ್ತು ಸಭೆಯಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಓಲಾ, ಉಬರ್ ಪ್ರತಿನಿಧಿಗಳ ಮಧ್ಯೆ ಮಾತ್ರ ಸಭೆ ನಡೆದಿದೆ. ಆದರೆ ಆಟೋ ಚಾಲಕರನ್ನು, ಸಾರ್ವಜನಿಕರನ್ನು ಸಭೆಗೆ ಆಹ್ವಾನ ಮಾಡಿಲ್ಲ. ಇವರನ್ನೂ ಆಹ್ವಾನಿಸಿ ಮುಕ್ತ ಚರ್ಚೆ ನಡೆಸಬೇಕು ಎಂದು ಕೋರ್ಟ್ ಸೂಚನೆ ನೀಡಿದೆ.

ನವೆಂಬರ್‌ ೭ರವರೆಗೆ ನಿರಾತಂಕ
ತಾತ್ಕಾಲಿಕ ವ್ಯವಸ್ಥೆ ಮಾಡುವಂತೆ ಹೈಕೋರ್ಟ್‌ ಸೂಚಿಸಿದ್ದರಿಂದ ಅಗ್ರಿಗೇಟರ್‌ ಆ್ಯಪ್‌ಗಳು ಸದ್ಯಕ್ಕೆ ರಿಲೀಫ್‌ ಆಗಿದ್ದು, ನವೆಂಬರ್‌ ೭ರವರೆಗೆ ನಿರಾತಂಕವಾಗಿ ತಮ್ಮ ಸೇವೆಯನ್ನು ಮುಂದುವರಿಸಲಿವೆ. ಈ ಮಧ್ಯೆ ಸರ್ಕಾರ ಯಾವ ಕ್ರಮವನ್ನು ತೆಗೆದುಕೊಳ್ಳಲಿದೆ ಎಂಬುದು ಕುತೂಹಲ ಮೂಡಿಸಿದೆ.

ಇದನ್ನೂ ಓದಿ | ಮುರುಘಾಶ್ರೀ ಪ್ರಕರಣ | ಇತ್ತ ಮೂರನೇ ಆರೋಪಿಗೆ ಜಾಮೀನು; ಅತ್ತ ಹೈಕೋರ್ಟ್‌ ಮೆಟ್ಟಿಲೇರಿದ ಮುರುಘಾಶ್ರೀ

Exit mobile version