Site icon Vistara News

Terror Accused | ರಾಜ್ಯದಲ್ಲಿ 3 ಕಡೆ, ದೇಶದಲ್ಲಿ 13 ಕಡೆ NIA ದಾಳಿ: ಶಂಕಿತರ ತೀವ್ರ ವಿಚಾರಣೆ

Terror Representative image

ಬೆಂಗಳೂರು: ಭಯೋತ್ಪಾದನೆ ಚಟುವಟಿಕೆ ನಡೆಸಲು ಹಾಗೂ ಉಗ್ರ ಸಂಘಟನೆ ಐಸಿಸ್‌ಗೆ ವಿವಿಧ ರೂಪದಲ್ಲಿ ಸಹಾಯ ಮಾಡುತ್ತಿದ್ದ ಆರೋಪದಲ್ಲಿ ರಾಜ್ಯದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಏಕಕಾಲದಲ್ಲಿ ಮೂರು ಕಡೆ ದಾಳಿ ನಡೆಸಿದೆ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳ, ತುಮಕೂರು ಹಾಗೂ ಬೆಳಗಾವಿಯಲ್ಲಿ NIA ದಾಳಿ ನಡೆಸಲಾಗಿದೆ. ಇದೇ ವೇಳೆ ದೇಶದ ಆರು ರಾಜ್ಯಗಳ ಒಟ್ಟು ಹದಿಮೂರು ಸ್ಥಳಗಳಲ್ಲಿ ತಂಡ ದಾಳಿ ನಡೆಸಿದೆ.

ರಾಜ್ಯ ಇಂಟಲಿಜೆನ್ಸ್, ಎನ್ಐಎ ಹಾಗೂ ಕೇಂದ್ರ ತನಿಖಾ ಸಂಸ್ಥೆಗಳ ನೇತ್ರತ್ವದಲ್ಲಿ ದಾಳಿ ನಡೆಸಲಾಗಿದೆ. ಐಸಿಸ್‌ ಜತೆ ನಂಟು ಹೊಂದಿದ್ದ ಭಟ್ಕಳದ ಅಬ್ದುಲ್‌ ಮುಕ್ತಧೀರ್‌(30) ಎಂಬಾತನನ್ನು ಬಂಧಿಸಿ ಗುಪ್ತಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.

ಈತ ಐಸಿಸ್‌ ಬರವಣಿಗೆಗಳನ್ನು ಭಾರತೀಯ ಭಾಷೆಗಳಿಗೆ ಭಾಷಾಂತರ ಮಾಡುವ ಕೆಲಸದಲ್ಲಿ ತೊಡಗಿದ್ದ. ಭಟ್ಕಳದ ಚಿನ್ನದಪಳ್ಳಿ ಪ್ರದೇಶದಲ್ಲಿರುವ ಪತ್ನಿಯ ಮನೆಯಲ್ಲಿದ್ದ ಅಬ್ದುಲ್‌ ಮುಕ್ತಧೀರ್‌ನನ್ನು ಭಾನುವಾರ ಬೆಳಗಿನ ಜಾವ ಎನ್‌ಐಎ ತಂಡ ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಭಟ್ಕಳದಲ್ಲಿ ಉರ್ದು ನಾಮಫಲಕ ತೆರವು; ಮುಂಜಾಗ್ರತೆಯಾಗಿ ನಿಷೇಧಾಜ್ಞೆ ಜಾರಿ

ತುಮಕೂರಿನ‌ಲ್ಲಿಯೂ ಬೆಳಗ್ಗೆ ದಾಳಿ ನಡೆಸಿರುವ ತಂಡ, ಮರಳೂರು ದಿಣ್ಣೆ ಮೂಲದ ನಿವಾಸಿಯನ್ನು ವಶಕ್ಕೆ ಪಡೆದಿದ್ದಾರೆ. ಮಹಾರಾಷ್ಟ್ರ ಮೂಲದ ಸಾಜೀದ್ ಮೆಡಿಕಲ್ ವಿದ್ಯಾರ್ಥಿಯಾಗಿದ್ದು, ಈತ ತುಮಕೂರಿನ ಸದಾಶಿವನಗರದ 7ನೇ ಮುಖ್ಯರಸ್ತೆಯ ಮನೆಯೊಂದನ್ನು ಕಳೆದ 8 ತಿಂಗಳ‌ ಹಿಂದಷ್ಟೇ ಬಾಡಿಗೆಗೆ ನಾಲ್ಕು ಜನ ಸ್ನೇಹಿತರ ಜತೆ ಪಡೆದು ವಾಸವಾಗಿದ್ದ. ಇಲ್ಲಿನ ಎಚ್‌ಎಂಎಸ್ ಯುನಾನಿ ಮೆಡಿಕಲ್ ಕಾಲೇಜಿನಲ್ಲಿ ಮೂರನೇ ವರ್ಷದ ಮೆಡಿಕಲ್ ವಿದ್ಯಾಭ್ಯಾಸ ಮಾಡುತ್ತಿದ್ದ ಈತನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆದೊಯ್ದಿದ್ದಾರೆ. ಉಗ್ರ ಸಂಘಟನೆಯಲ್ಲಿ ಈತನ ಪಾತ್ರದ ಕುರಿತು ಮಾಹಿತಿ ತನಿಖೆಯಿಂದ ಸ್ಪಷ್ಟವಾಗಬೇಕಿದೆ.

ಕರ್ನಾಟಕದ ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ಪ್ರದೇಶದಲ್ಲಿ ದಾಳಿ ನಡೆಸಿರುವ ಎನ್‌ಐಎ ತಂಡ, ಇಬ್ಬರು ಶಂಕಿತರನ್ನು ವಶಕ್ಕೆ ಪಡೆದಿದೆ. ಕೊಲ್ಹಾಪುರ ಜಿಲ್ಲೆಯ ಹುಪರಿ ಗ್ರಾಮದಲ್ಲಿ ಇಬ್ಬರು ಶಂಕಿತರು ವಶಕ್ಕೆ ಪಡೆಯಲಾಗಿದ್ದು, ಕರ್ನಾಟಕದ ಗಡಿಗೆ ಈ ಗ್ರಾಮ ಅತ್ಯಂತ ಹತ್ತಿರದಲ್ಲಿದೆ. ಇಬ್ಬರೂ ಉಗ್ರ ಸಂಗಟನೆ ಜತೆಗೆ ನಂಟು ಹೊಂದಿರುವ ಶಂಕೆ ಇದೆ. ಬಂಧಿತರ ಕುರಿತು ಮತ್ತಷ್ಟು ಮಾಹಿತಿ ಲಭಿಸಬೇಕಿದೆ.

ಮಧ್ಯಪ್ರದೇಶ, ಬಿಹಾರದಲ್ಲೂ ದಾಳಿ

ಕಳೆದ ಒಂದು ವರ್ಷದ ಹಿಂದೆ ಅಗಸ್ಟ್‌ನಲ್ಲಿ ಭಟ್ಕಳದಲ್ಲಿ ದಾಳಿ ನಡೆಸಿದ್ದ ಎನ್ಐಎ ತಂಡ ಐಸಿಸ್‌ನ ಮುಖವಾಣಿ ದಿ ವಾಯ್ಸ್ ಆಫ್ ಹಿಂದ್‌ ಮ್ಯಾಗ್ಸಿನ್‌ನ ಬರಹಗಳನ್ನು ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸುತ್ತಿದ್ದ ಆರೋಪದ ಮೇಲೆ ಜುಫ್ರಿ ಜವಾಹರ್ ದಾಮುದಿ ಎಂಬಾತನನ್ನ ಬಂಧನ ಮಾಡಿದ್ದರು. ಆತ ಐಸಿಸ್ ಭಾಷೆಯಲ್ಲಿ ಬರುತ್ತಿದ್ದ ಲೇಖನಗಳು, ಭಾಷಣಗಳನ್ನು ಭಾರತೀಯ ಸ್ಥಳೀಯ ಭಾಷೆಗಳಿಗೆ ಭಾಷಾಂತರಿಸಿ ಪಸರಿಸುತ್ತಿದ್ದ ಎನ್ನುವ ಆರೋಪ ವ್ಯಕ್ತವಾಗಿತ್ತು. ಇದೇ ಪ್ರಕರಣದ ಸಂಬಂಧ ದೇಶಾದ್ಯಂತ ದಾಳಿ ನಡೆಸಲಾಗಿದೆ.

ಮಧ್ಯಪ್ರದೇಶದ ಭೋಪಾಲ್‌ ಹಾಗೂ ರೈಸೆನ್‌ ಜಿಲ್ಲೆ, ಗುಜರಾತ್‌ನ ಭಾರೂಚ್‌, ಸೂರತ್‌, ನವಸಿರಿ ಹಾಗೂ ಅಹಮದಾಬಾದ್‌ ಜಿಲ್ಲೆಗಳು, ಕರ್ನಾಟಕದ ಭಟ್ಕಳ, ತುಮಕೂರು, ಮಹಾರಾಷ್ಟ್ರದ ಕೊಲ್ಹಾಪುರ, ನಾಂದೇಡ್‌ ಜಿಲ್ಲೆಗಳು, ಉತ್ತರ ಪ್ರದೇಶದ ದೇವಬಂದ್‌ ಜಿಲ್ಲೆಗಳಲ್ಲಿ ದಾಳಿ ನಡೆಸಲಾಗಿದೆ. 2022ರ ಜೂನ್‌ 25 ರಂದು ದಾಖಲಿಸಿಕೊಂಡ ಸ್ವಯಂಪ್ರೇರಿತ ಪ್ರಕರಣದ ಆಧಾರದಲ್ಲಿ ಈ ದಾಳಿ ನಡೆಸಲಾಗಿದೆ. ಅನೇಕ ದಾಖಲೆಗಳನ್ನು ದಾಳಿ ಸಮಯದಲ್ಲಿ ವಶಕ್ಕೆ ಪಡೆಯಲಾಗಿದೆ. ವಿಚಾರಣೆ ಪ್ರಗತಿಯಲ್ಲಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.

ಇದನ್ನೂ ಓದಿ | Terror Accused | ಐಸಿಸ್‌ ಸಂಪರ್ಕ ಶಂಕೆ: ಭಟ್ಕಳದಲ್ಲಿ ಒಬ್ಬನನ್ನು ಬಂಧಿಸಿದ NIA

Exit mobile version