ಶಿವಮೊಗ್ಗ: ಶಿವಮೊಗ್ಗವನ್ನು ಕೇಂದ್ರೀಕರಿಸಿ ಉಗ್ರ ಚಟುವಟಿಕೆಯಲ್ಲಿ ನಿರತವಾಗಿದ್ದ ಜಾಲವೊಂದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಶಾರೀಕ್ ಈ ಜಾಲದ ಕಿಂಗ್ ಪಿನ್ ಆಗಿದ್ದು, ಶಿವಮೊಗ್ಗದ ಸಿದ್ಧೇಶ್ವರ ನಗರದ ಸೈಯದ್ ಯಾಸಿನ್ ಮತ್ತು ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಎಂಬಿಬ್ಬರು ಆತನ ಜತೆಗೆ ಸೇರಿ ದುಷ್ಕೃತ್ಯಗಳಿಗೆ ಸಂಚು ನಡೆಸುತ್ತಿದ್ದರು. ಇದೀಗ ಯಾಸಿನ್ ಮತ್ತು ಮಾಜ್ ಮುನೀರ್ ಅಹಮ್ಮದ್‌ನನ್ನು ಶಿವಮೊಗ್ಗ ಪೊಲೀಸರು ಬಂಧಿಸಿದ್ದಾರೆ. ಕಿಂಗ್ ಪಿನ್ ಶಾರೀಕ್‌ಗಾಗಿ ಶೋಧ ನಡೆಸುತ್ತಿದ್ದಾರೆ.
ಬಾಂಬ್ ಸ್ಫೋಟ ಸೇರಿದಂತೆ ಹಲವು ದುಷ್ಕರ್ಮಿ ಕೃತ್ಯಗಳಲ್ಲಿ ಈ ಆರೋಪಿಗಳು ಭಾಗಿಯಾಗಿರುವ ಶಂಕೆ ಇದ್ದು, ಈ ಅತ್ಯಂತ ಕ್ರೂರ ಉಗ್ರ ಸಂಘಟನೆಯಾಗಿರುವ ಐಸಿಸ್ ಜತೆಗೂ ನಂಟು ಹೊಂದಿರುವ ಸಾಧ್ಯತೆ ಕಂಡುಬಂದಿದೆ.
ಯುಎಪಿಎ ಕಾಯಿದೆಯಡಿ ಬಂಧನ
ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾರೀಕ್ ಮತ್ತು ಆತನ ಸಹಚರರಾದ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್, ಶಿವಮೊಗ್ಗದ ಸಯ್ಯದ್ ಯಾಸೀನ್ ಅವರು ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿದ್ದಾರೆ. ಅವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ, ೧೯೬೭(ಯುಎಪಿಎ) ಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ವಿಶೇಷ ತನಿಖಾ ತಂಡವು ಆರೋಪಿತರಾದ ಮಾಜ್ ಮುನೀರ್ ಅಹಮ್ಮದ್(೨೨) ಮತ್ತು ಸಯ್ಯದ್ ಯಾಸೀನ್ ಅಲಿಯಾಸ್ ಬೈಲು(೨೧) ಅವರನ್ನು ಬಂಧಿಸಿ ಕೋರ್ಟ್‌ಗೆ ಹಾಜರುಪಡಿಸಲಾಗಿದೆ. ಅವರಿಬ್ಬರನ್ನು ಸೆಪ್ಟೆಂಬರ್ ೨೦ರಿಂದ ೨೯ರವರೆಗೆ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ. ಪೊಲೀಸ್ ತನಿಖೆ ವೇಳೆ ಹೆಚ್ಚಿನ ವಿಚಾರಗಳು ಹೊರಬರುವ ಸಾಧ್ಯತೆ ಇದೆ. ಬಂಧಿತರದಲ್ಲಿ ಒಬ್ಬನಾಗಿರುವ ಯಾಸಿನ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದಾನೆ.
ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು?
ತೀರ್ಥಹಳ್ಳಿ ಸೊಪ್ಪುಗುಡ್ಡೆಯ ಶಾರೀಕ್ ಮತ್ತು ಆತನ ಸಹಚರರಾದ ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್, ಶಿವಮೊಗ್ಗದ ಸಯ್ಯದ್ ಯಾಸೀನ್ ಅವರು ಶಿವಮೊಗ್ಗವನ್ನು ಕೇಂದ್ರವಾಗಿಟ್ಟುಕೊಂಡು ಉಗ್ರ ಚಟುವಟಿಕೆಗಳಿಗೆ ಪ್ಲ್ಯಾನ್ ಮಾಡುತ್ತಿದ್ದು, ರಾಜ್ಯದಲ್ಲಿ ಬಾಂಬ್ ಸ್ಫೋಟಕ್ಕೂ ಸಂಚು ನಡೆಸಿದ್ದರು ಎಂದು ಹೇಳಲಾಗಿದೆ.
ಒಂದೊಮ್ಮೆ ಪೊಲೀಸರು ಇವರನ್ನು ಬಂಧಿಸದೆ ಹೋಗಿದ್ದರೆ ಈ ಜಾಲವನ್ನು ಬೇಧಿಸದೆ ಹೋಗಿದ್ದರೆ ರಾಜ್ಯದ ಒಂದು ಪ್ರಮುಖ ಭಾಗದಲ್ಲಿ ಬಾಂಬ್ ಸ್ಫೋಟ ನಡೆಯುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
ಮಂಗಳೂರು ಮತ್ತು ಶಿವಮೊಗ್ಗದ ಈ ಯುವಕರಿಗೆ ಐಸಿಸ್ ಲಿಂಕ್ ಇದ್ದು, ಬಾಂಬ್ ಸ್ಫೋಟ ಸೇರಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ತರಬೇತಿ ಪಡೆದಿದ್ದರು ಎನ್ನಲಾಗಿದೆ. ಅವರು ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ.
ಯಾಸಿನ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿರುವದುರಿಂದ ಆತ ಬಾಂಬ್ ತಯಾರಿಯ ಬಗ್ಗೆ ತರಬೇತಿ ನೀಡುತ್ತಿದ್ದ ಎಂಬ ಬಗ್ಗೆಯೂ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ.