ಶಿವಮೊಗ್ಗ: ಶಿವಮೊಗ್ಗವನ್ನು ಕೇಂದ್ರೀಕರಿಸಿ ಉಗ್ರ ಚಟುವಟಿಕೆಯಲ್ಲಿ (Terror link) ನಿರತವಾಗಿದ್ದ ಸಯ್ಯದ್ ಯಾಸಿನ್ ಮತ್ತು ಮಾಝ್ ಮುನೀರ್ ಅಹ್ಮದ್ ಬಂಧನ ಪ್ರಕರಣ ಸಂಬಂಧ ಕೇಂದ್ರೀಯ ಸೈಬರ್ ತಂಡ ಜಿಲ್ಲೆಗೆ ಆಗಮಿಸಿದ್ದು, ಮೊಬೈಲ್ ರಿಟ್ರೀವ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ. ಅಲ್ಲದೆ, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ 11 ಕಡೆ ತಪಾಸಣೆ ನಡೆಸಲಾಗಿದೆ.
ಮಂಗಳೂರಿನಿಂದ ಇಬ್ಬರು ಅಧಿಕಾರಿಗಳು ಗ್ರಾಮಾಂತರ ಠಾಣೆಗೆ ಆಗಮಿಸಿದ್ದು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕ್ರಂ ಆಮ್ಟೆ ಉಪಸ್ಥಿತಿಯಲ್ಲಿ ಮೊಬೈಲ್ ಡೇಟಾ ರಿಕವರಿ ಪ್ರಕ್ರಿಯೆ ನಡೆಯುತ್ತಿದೆ.
11 ಕಡೆ ತೀವ್ರ ಶೋಧ
ಬಂಧಿತ ಸಯ್ಯದ್ ಯಾಸಿನ್ ಮತ್ತು ಮಾಝ್ ಮುನೀರ್ ಅಹ್ಮದ್‌ನನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಶಿವಮೊಗ್ಗ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಒಟ್ಟು 11 ಕಡೆ ಶೋಧಕಾರ್ಯ ನಡೆಸಲಾಗಿದೆ. ತನಿಖೆಗಾಗಿ 30ಕ್ಕೂ ಹೆಚ್ಚು ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದ್ದು, 7 ದಿನಗಳ ಕಾಲ ಈ ಇಬ್ಬರನ್ನು ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ | NIA Raid | ಪಿಎಫ್ಐಗೆ ಸೇರಿದ ಹಲವು ಮಹತ್ವದ ದಾಖಲೆಗಳು ವಶ; ಬಂಧಿತರ ವಿಚಾರಣೆ ಪ್ರಾರಂಭ
ಮಂಗಳೂರಿನಿಂದ ಶಿವಮೊಗ್ಗಕ್ಕೆ ಮಾಝ್ ವಾಪಸ್
ಸ್ಥಳೀಯವಾಗಿ ಬಾಂಬ್ ತಯಾರಿಕೆ ನಡೆಸುತ್ತಿದ್ದಲ್ಲದೆ, ಶಿವಮೊಗ್ಗ ಹಳೇ ಗುರುಪುರದ ತುಂಗಾ ನದಿ ತೀರ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಬಳಿಯ ನೇತ್ರಾವತಿ ನದಿ ತೀರದಲ್ಲೂ ಬಾಂಬ್ ಸ್ಫೋಟದ ತಾಲೀಮು ನಡೆಸಿದ್ದಾರೆ ಎಂಬ ಸಂಗತಿ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಮಾಝ್‌ನನ್ನು ಬುಧವಾರ ಸಂಜೆ ಹೊತ್ತಿಗೆ ಬಂಟ್ವಾಳಕ್ಕೆ ಕರೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ಶಿವಮೊಗ್ಗ ಹಾಗೂ ಮಂಗಳೂರಿನ ಬಂಟ್ವಾಳ ಸೇರಿದಂತೆ ಒಟ್ಟು 11 ಕಡೆ ಬಾಂಬ್ ಸ್ಫೋಟ ಪರೀಕ್ಷೆ ಸೇರಿದಂತೆ ಇನ್ನಿತರ ಚಟುವಟಿಕೆ ನಡೆಸಿದ ಸ್ಥಳಗಳನ್ನು ಪರಿಶೀಲನೆ ಮಾಡಲಾಗಿದೆ. ಸ್ಥಳ ಪರಿಶೀಲನೆ ಬಳಿ ಮಂಗಳೂರಿನಿಂದ ಮಾಝ್‌ನನ್ನು ಗುರುವಾರ ತಡರಾತ್ರಿ 12 ಗಂಟೆಗೆ ಶಿವಮೊಗ್ಗಕ್ಕೆ ಕರೆತರಲಾಗಿದೆ.
ಕಿಂಗ್‌ಪಿನ್‌ಗೆ ತೀವ್ರ ಶೋಧ
ಪ್ರಕರಣದ ಪ್ರಮುಖ ಆರೋಪಿ ತೀರ್ಥಹಳ್ಳಿಯ ಸೊಪ್ಪು ಗುಡ್ಡೆಯ ಶಾರಿಕ್ ತಲೆಮರೆಸಿಕೊಂಡಿದ್ದು, ಆತನಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಶಿವಮೊಗ್ಗ ಸಿದ್ಧೇಶ್ವರ ನಗರದ ಸೈಯದ್ ಯಾಸಿನ್, ಮಂಗಳೂರಿನ ಮಾಜ್ ಮುನೀರ್ ಅಹಮ್ಮದ್ ಹಾಗೂ ಶಾರಿಕ್ ಆಗಾಗ ಶಿವಮೊಗ್ಗದಲ್ಲಿ ಸೇರುತ್ತಿದ್ದರು. ಅಲ್ಲದೆ, ಗುಪ್ತ ಜಾಗವೊಂದರಲ್ಲಿ ಇವರು ಬಾಂಬ್ ತಯಾರಿಸುತ್ತಿದ್ದರು. ಜತೆಗೆ ರಾಜ್ಯದ ಒಂದು ಭಾಗದಲ್ಲಿ ಬಾಂಬ್ ಸ್ಫೋಟಕ್ಕೆ ಸಂಚು ನಡೆಸುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಪೊಲೀಸರ ತನಿಖೆಯ ಸಂದರ್ಭದಲ್ಲಿ ಹಲವು ಮಹತ್ವದ ಅಂಶಗಳು ಬಯಲಾಗಿವೆ. ಡಿವೈಎಸ್ಪಿ ನೇತೃತ್ವದ ಎರಡು ಪ್ರತ್ಯೇಕ ತಂಡ ಶಾರಿಖ್ ಶೋಧ ಕಾರ್ಯಾಚರಣೆಯಲ್ಲಿ ಭಾಗಿಯಾಗಿದೆ.
ಇದನ್ನೂ ಓದಿ | NIA Raid | ಪಿಎಫ್‌ಐ ಮುಖಂಡರ ಮನೆ, ಕಚೇರಿ ಮೇಲೆ ರೇಡ್ ಬೆನ್ನಲ್ಲೇ ಗೃಹ ಸಚಿವ ಅಮಿತ್ ಶಾ ಮಹತ್ವದ ಸಭೆ
ಪ್ರಮುಖ ಭಾಗದಲ್ಲಿ ಸ್ಫೋಟ ಸಂಚು?
ಇವರು ನಿಷೇಧಿತ ಭಯೋತ್ಪಾದಕ ಸಂಘಟನೆಯ ನಂಟನ್ನು ಹೊಂದಿದ್ದು, ಇವರ ವಿರುದ್ಧ ಶಿವಮೊಗ್ಗ ಗ್ರಾಮಾಂತರ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ (ನಿಯಂತ್ರಣ) ಕಾಯಿದೆ, 1967 (ಯುಎಪಿಎ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಒಂದೊಮ್ಮೆ ಪೊಲೀಸರು ಇವರನ್ನು ಬಂಧಿಸದೆ ಹೋಗಿದ್ದರೆ ಈ ಜಾಲವನ್ನು ಬೇಧಿಸದೆ ಹೋಗಿದ್ದರೆ ರಾಜ್ಯದ ಒಂದು ಪ್ರಮುಖ ಭಾಗದಲ್ಲಿ ಬಾಂಬ್ ಸ್ಫೋಟ ನಡೆಯುವ ಸಾಧ್ಯತೆ ಇತ್ತು ಎಂದು ಹೇಳಲಾಗಿದೆ.
ಮಂಗಳೂರು ಮತ್ತು ಶಿವಮೊಗ್ಗದ ಈ ಯುವಕರಿಗೆ ಐಸಿಸ್ ಲಿಂಕ್ ಇದ್ದು, ಬಾಂಬ್ ಸ್ಫೋಟ ಸೇರಿದಂತೆ ಉಗ್ರ ಚಟುವಟಿಕೆಗಳ ಬಗ್ಗೆ ತರಬೇತಿ ಪಡೆದಿದ್ದರು ಎನ್ನಲಾಗಿದೆ. ಅವರು ಐಸಿಸ್ ಜೊತೆ ನಿಕಟ ಸಂಪರ್ಕ ಹೊಂದಿದ್ದರ ಬಗ್ಗೆ ಪೊಲೀಸರಿಗೆ ಸಾಕ್ಷಿ ಲಭ್ಯವಾಗಿದೆ ಎಂದು ತಿಳಿದುಬಂದಿದೆ. ಯಾಸಿನ್ ಎಲೆಕ್ಟ್ರಿಕಲ್ ಎಂಜಿನಿಯರ್ ಆಗಿದ್ದರಿಂದ ಆತ ಬಾಂಬ್ ತಯಾರಿ ಬಗ್ಗೆ ತರಬೇತಿ ನೀಡುತ್ತಿದ್ದ ಎಂಬ ಬಗ್ಗೆಯೂ ಪೊಲೀಸರಿಗೆ ಸಾಕ್ಷ್ಯ ಸಿಕ್ಕಿದೆ ಎನ್ನಲಾಗಿದೆ.
ಇದನ್ನೂ ಓದಿ | NIA Raid | ತಲೆಮರೆಸಿಕೊಂಡ ಪಿಎಫ್‌ಐ ಮುಖಂಡನಿಗೆ ಹುಡುಕಾಟ, ಕಾಪುವಿನಲ್ಲಿ ಕಾರ್ಯಕರ್ತರಿಂದ ರಸ್ತೆ ತಡೆ