ಕಾರವಾರ: ಭಯೋತ್ಪಾದನಾ ಚಟುವಟಿಕೆ ಮಾಡುವವರಿಗೆ ಕಾಂಗ್ರೆಸ್‌ನವರು ಬೆಂಗಾವಲಾಗಿ ನಿಂತಿದ್ದಾರೆ. ಅಂಥವರ ರಕ್ಷಣೆ ಮಾಡಿದ ಪರಿಣಾಮವಾಗಿಯೇ ಗಲಭೆಗಳಾಗಿವೆ. ಹೀಗಾಗಿ ಕಾಂಗ್ರೆಸ್ಸೇ ಒಂದು ಭಯೋತ್ಪಾದನಾ ಸಂಘಟನೆ (Terror Politics) ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ಮಾಡಿದ್ದಾರೆ.
ಕಾರವಾರದಲ್ಲಿ ಆಯೋಜನೆಯಾಗಿದ್ದ ಬಿಜೆಪಿ ವಿಜಯ ಸಂಕಲ್ಪ ಅಭಿಯಾನ ಮತ್ತು ಮತಗಟ್ಟೆ ಪೇಜ್ ಪ್ರಮುಖರ ಸಮಾವೇಶಕ್ಕೆ ಆಗಮಿಸಿದ್ದ ವೇಳೆ ಇಲ್ಲಿನ ಮಾಲಾದೇವಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅವರು, ಅತಿ ಹೆಚ್ಚು ಮತೀಯ ಗಲಭೆಗಳು ಆಗಿರುವುದು ಕಾಂಗ್ರೆಸ್ ಕಾಲದಲ್ಲಿ. ಕಾಂಗ್ರೆಸ್ ಆಡಳಿತಕ್ಕೆ ಬಂದಾಗೆಲ್ಲ ಮತೀಯ ಗಲಭೆಗಳಿಗೆ ಪ್ರಚೋದನೆ ಕೊಟ್ಟಿದೆ. ಅವರ ತುಷ್ಟೀಕರಣ ನೀತಿಯಿಂದಾಗಿ ಕಾಂಗ್ರೆಸ್ ಸಮಯದಲ್ಲಿ ಮತೀಯ ಗಲಭೆಗಳು ಹೆಚ್ಚಾಯಿತು. ಒಂದು ಕಣ್ಣಿಗೆ ಬೆಣ್ಣೆ ಒಂದು ಕಣ್ಣಿಗೆ ಸುಣ್ಣ ಎಂಬಂತೆ ಆಡಳಿತ ನಡೆಸಿದ ಕಾರಣದಿಂದಲೇ ಮತೀಯ ಗಲಭೆಗಳು ಹೆಚ್ಚಾಗಿದ್ದವು ಎಂದು ಆರೋಪಿಸಿದರು.
ಅತಿ ಹೆಚ್ಚು ಹಿಂದುಗಳ ಹತ್ಯೆ ನಡೆದದ್ದು ಸಿದ್ದರಾಮಯ್ಯ ಕಾಲದಲ್ಲಿ
ʻʻಪಿಎಫ್ಐನ ಎರಡು ಸಾವಿರ ಕಾರ್ಯಕರ್ತರನ್ನು ಬಿಡುಗಡೆಗೊಳಿಸಿದವರು ಸಿದ್ರಾಮಣ್ಣ. ಅತಿ ಹೆಚ್ಚು ಹಿಂದೂಗಳ ಹತ್ಯೆಯಾಗಿರುವುದು ಸಿದ್ದರಾಮಯ್ಯನ ಕಾಲದಲ್ಲಿ. ಅಂದು ಅವರು ಯಾರ ಮನೆಗೂ ಹೋಗಿಲ್ಲ, ಯಾವ ಪೊಲೀಸರನ್ನೂ ಕೇಳಿಲ್ಲ, ಯಾರ ಬಂಧನವೂ ಆಗಿಲ್ಲ. ಶೃಂಗೇರಿಯಲ್ಲಿ ಗೋ ಹಂತಕನೊಬ್ಬನ ಎನ್‌ಕೌಂಟರ್ ಆದಾಗ ಅವರ ಮನೆಗೆ 10 ಲಕ್ಷ ಕೊಟ್ಟಿದ್ದರು. ಆ ಮೂಲಕ ಜನರ ಭಾವನೆಗಳನ್ನ ಕೆರಳಿಸಿ ಮತೀಯ ಗಲಭೆಗಳಿಗೆ ಅವಕಾಶ ಮಾಡಿಕೊಟ್ಟರು. ರಕ್ತಸಿಕ್ತ ಆಡಳಿತ ನಡೆಸಿದ ಉದಾಹರಣೆಯಿದ್ದರೆ ಅದು ಸಿದ್ರಾಮಣ್ಣಂದು. ಮತೀಯ ಗಲಭೆಗಳನ್ನು ಸೃಷ್ಟಿಸಿ ಅಧಿಕಾರಕ್ಕೆ ಪಡೆದಿರುವುದು ಕಾಂಗ್ರೆಸ್‌ನ ಇತಿಹಾಸʼʼ ಎಂದರು.
ʻʻಮಂಗಳೂರಿನ ಕುಕ್ಕರ್ ಬ್ಲಾಸ್ಟ್‌ನಲ್ಲಿ ಸಿದ್ದರಾಮಯ್ಯ, ಡಿಕೆಶಿ, ಕಾಂಗ್ರೆಸ್‌ನವರು ಬೆಂಬಲವಾಗಿ ನಿಂತಿದ್ದರು. ಇವರು ಭಯೋತ್ಪಾದಕರಿಗೆ ಬೆಂಬಲವಾಗಿ ನಿಂತವರು. ಡಿಜೆ ಹಳ್ಳಿ, ಕೆಜೆ ಹಳ್ಳಿ ಗಲಭೆಯಲ್ಲಿ ಅಖಂಡ ಶ್ರೀನಿವಾಸ್ ಮನೆಗೆ ಬೆಂಕಿ ಹಾಕಿದರು. ಇವತ್ತಿಗೂ ಕಾಂಗ್ರೆಸ್ ಅವರನ್ನು ಉಚ್ಛಾಟನೆ ಮಾಡಿಲ್ಲ. ಪಿಎಫ್ಐ, ಕೆಎಫ್ ಡಿಯನ್ನು ನಿಷೇಧ ಮಾಡಿದರೂ ಪ್ರಶ್ನಿಸುತ್ತಾರೆ. ಇವರದೇ ಶಾಸಕನ ಮೇಲೆ ಚೂರಿ ಇರಿತವಾಗಿದ್ದರೂ ಸಂಘಟನೆ ಪರವಾಗಿ ನಿಂತರುʼʼ ಎಂದರು.
ಎಚ್ಚರಿಕೆಯಿಂದ ಮಾತನಾಡಲು ಎಚ್‌ಡಿಕೆಗೆ ಸಲಹೆ
ಎಚ್.ಡಿ.ಕುಮಾರಸ್ವಾಮಿಯವರ ಪಂಚರತ್ನ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ʻʻಒಬ್ಬ ಮಾಜಿ ಮುಖ್ಯಮಂತ್ರಿ ಜವಾಬ್ದಾರಿಯುತವಾಗಿ ಎಚ್ಚರಿಕೆಯಿಂದ ಮಾತನಾಡಬೇಕು. ಸಮುದಾಯಗಳನ್ನ ಕೆರಳಿಸುವ, ಸಮಾಜಗಳನ್ನು ಹೀನವಾಗಿ ಕಾಣುವಂಥದ್ದು ಸರಿಯಲ್ಲ. ಗಾಂಧಿ ಕೊಲೆಯನ್ನು ಒಂದು ಸಮುದಾಯಕ್ಕೆ ಇವರು ಕಟ್ಟಿದ್ದಾರೆ. ಇವರ ಆಡಳಿತವೇ ಹಾಗೆ, ರಾಮಕೃಷ್ಣ ಹೆಗಡೆಯವರಿಗೆ ಹೊಡೆದವರು ಯಾರು? ಅವರು ರಕ್ತದಲ್ಲೇ ಬ್ರಾಹ್ಮಣ ವಿರೋಧಿ. ರಾಮಕೃಷ್ಣ ಹೆಗಡೆಯವರ ಕಾಲದಿಂದಲೇ ದಾಳಿ ಮಾಡುತ್ತಾ ಬಂದವರು. ಈಗ ಬಾಯಲ್ಲಿ ನೇರವಾಗಿ ಹೇಳಿದ್ದಾರೆ, ಇಷ್ಟು ದಿನ ಕಲ್ಲಲ್ಲಿ ಹೊಡೆಯುತ್ತಿದ್ದರು. ಬ್ರಾಹ್ಮಣ ಸಮುದಾಯವನ್ನು ಕೀಳಾಗಿ ನೋಡುವ, ಸಮುದಾಯಕ್ಕೆ ಅಪಮಾನ ಮಾಡುವ, ತುಚ್ಛವಾಗಿ ಕಾಣುವುದು ಒಬ್ಬ ಮಾಜಿ ಮುಖ್ಯಮಂತ್ರಿಗೆ ಶೋಭೆಯಲ್ಲʼʼ ಎಂದರು.
ʻʻಅವರು ಮೂರು ಜಿಲ್ಲೆಗಳನ್ನಿಟ್ಟುಕೊಂಡು ಇಡೀ ರಾಜ್ಯ ಗೆಲ್ಲುವ ಕನಸು ಕಾಣುತ್ತಾರೆ. ಈ ಬಾರಿ ಕಳೆದ ಬಾರಿಯಷ್ಟೂ ಅವರು ಗೆಲ್ಲಲ್ಲ. ಕಳೆದ ಬಾರಿ ಯಾರ್ಯಾರದ್ದೋ ಸಹಾಯದಿಂದ ಗೆದ್ದಿದ್ದಾರೆ. ಈ ಬಾರಿ 20ಕ್ಕಿಂತ ಮೇಲೆ ಅವರು ಹೋಗಲ್ಲ. ಸರ್ವೆ ರಿಪೋರ್ಟ್ ನಲ್ಲಿ ಅವರಿಗೆ 20 ಸ್ಥಾನವನ್ನೂ ಮುಟ್ಟಲ್ಲ ಎನ್ನುವುದು ಅವರಿಗೆ ಗೊತ್ತಾಗಿದೆ. ಹೀಗಾಗಿ ಮಾನಸಿಕ ಚಂಚಲತೆಯಿಂದ ಮಾತನಾಡುತ್ತಿದ್ದಾರೆʼʼ ಎಂದರು.
ಇದನ್ನೂ ಓದಿ : Hindu Vs Hindutva : ನಾನು ಹಿಂದು ಧರ್ಮದ ಬಗ್ಗೆ ಮಾತನಾಡಿಯೇ ಇಲ್ಲ, ಅದಕ್ಕೆ ನನ್ನ ವಿರೋಧವೇ ಇಲ್ಲ: ಸಿದ್ದರಾಮಯ್ಯ ಯು ಟರ್ನ್