Site icon Vistara News

Terrorist arrested in Bangalore : ಮನೆ ಖಾಲಿ ಮಾಡಿ ಉ.ಪ್ರದೇಶಕ್ಕೆ ಹಾರಲು ರೆಡಿಯಾಗಿದ್ದ ಉಗ್ರನಿಗೆ ಶಾಕ್‌!

Terrorist arrested in Bangalore

#image_title

ಬೆಂಗಳೂರು: ಬೆಂಗಳೂರಿನ ಥಣಿಸಂದ್ರದಲ್ಲಿ ಕಳೆದ ಎರಡು ವರ್ಷಗಳಿಂದ ವಾಸವಾಗಿದ್ದ (Terrorist arrested in Bangalore) ಶಂಕಿತ ಉಗ್ರ, ಸಾಫ್ಟ್‌ ವೇರ್‌ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ ಮೊಹಮ್ಮದ್‌ ಆರಿಫ್‌ ಸೋಮವಾರ ತನ್ನ ಊರಾದ ಉತ್ತರ ಪ್ರದೇಶಕ್ಕೆ ಹಾರಲು ರೆಡಿ ಆಗಿದ್ದ. ಆದರೆ, ಅವನು ಎಲ್ಲವನ್ನೂ ಪ್ಯಾಕ್‌ ಮಾಡಿಕೊಳ್ಳಬೇಕು ಎನ್ನುವಾಗ ಐಎಸ್‌ಡಿ ಮತ್ತು ಎನ್‌ಐಎ ಅಧಿಕಾರಿಗಳು ಹೋಗಿ ಬಾಗಿಲು ತಟ್ಟಿದ್ದರು!

ಆಂತರಿಕ ಭದ್ರತಾ ವಿಭಾಗ ಮತ್ತು ರಾಷ್ಟ್ರೀಯ ಭದ್ರತಾ ವಿಭಾಗದ ಅಧಿಕಾರಿಗಳು ಶನಿವಾರ ಮುಂಜಾನೆ ಥಣಿಸಂದ್ರದಲ್ಲಿ ಆರೋಪಿ ವಾಸವಾಗಿದ್ದ ಮನೆಯ ಬಾಗಿಲು ತಟ್ಟಿದ್ದು, ಆರಿಫ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಮನೆಯಲ್ಲಿದ್ದ ಮೊಬೈಲ್‌, ಲ್ಯಾಪ್‌ಟಾಪ್‌ ಮತ್ತು ಎರಡು ಹಾರ್ಡ್‌ ಡಿಸ್ಕ್‌ಗಳನ್ನು ವಶಕ್ಕೆ ಪಡೆದಿರುವ ಅಧಿಕಾರಿಗಳು ಅದನ್ನು ತಪಾಸಣೆಗೆ ಒಳಪಡಿಸಲು ನಿರ್ಧರಿಸಿದ್ದಾರೆ.

ಆರಿಫ್‌ ಸೋಮವಾರ ಬೆಂಗಳೂರಿನ ಮನೆ ಖಾಲಿ ಮಾಡಿ ಉತ್ತರ ಪ್ರದೇಶಕ್ಕೆ ಹೋಗಲು ಅಣಿಯಾಗಿದ್ದ. ಮನೆ ಮಾಲೀಕರಿಗೂ ಮನೆ ಖಾಲಿ ಮಾಡೋದಾಗಿ ಹೇಳಿದ್ದ ಎನ್ನಲಾಗಿದೆ.

ಪತ್ನಿಯ ವಿಚಾರಣೆ ಬಳಿಕ ಎನ್‌ಐಎ ಕಚೇರಿಗೆ

ಥಣಿಸಂದ್ರದ ಮಂಜುನಾಥ ನಗರದಲ್ಲಿ ಆರಿಫ್‌ ಹೆಂಡತಿ ಹಾಗೂ ಇಬ್ಬರು ಮಕ್ಕಳೊಂದಿಗೆ ವಾಸವಾಗಿದ್ದ. ಆತ ಈ ಮನೆಗೆ ಬಂದಿದ್ದು ಒಂದುವರೆ ವರ್ಷದ ಹಿಂದೆ. ಅದಕ್ಕಿಂತ ಮೊದಲು ಆತ ಪಿಜಿಯಲ್ಲಿದ್ದ. ಮನೆ ಮಾಡಿದ ಬಳಿಕ ಹೆಂಡತಿ ಮಕ್ಕಳನ್ನು ಕರೆಸಿಕೊಂಡಿದ್ದ.

ಇದೀಗ ದಾಳಿ ಮಾಡಿರುವ ಅಧಿಕಾರಿಗಳು ಹೆಂಡತಿ ಸಫಾಳನ್ನೂ ವಿಚಾರಣೆ ಮಾಡಿದ್ದು, ಇಬ್ಬರೂ ಇದುವರೆಗೆ ಯಾವುದೇ ವಿಷಯ ಬಾಯಿಬಿಟ್ಟಿಲ್ಲ ಎಂದು ತಿಳಿದುಬಂದಿದೆ. ಸುಮಾರು ನಾಲ್ಕು ಗಂಟೆಗಳ ಕಾಲ ಇಬ್ಬರನ್ನೂ ವಿಚಾರಣೆ ಮಾಡಿದ ಅಧಿಕಾರಿಗಳು ಇಬ್ಬರನ್ನು ಎನ್‌ಐಎ ಕಚೇರಿಗೆ ಕರೆದುಕೊಂಡು ಹೋಗಿದ್ದಾರೆ.

ಯಾರಿವನು ಆರಿಫ್‌?
ಆರಿಫ್‌ ಉತ್ತರ ಪ್ರದೇಶ ಮೂಲದವನಾಗಿದ್ದು, ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಆತ ಕಳೆದ ಎರಡು ವರ್ಷಗಳಿಂದ ಬೆಂಗಳೂರಿನ ಟೆಕ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆ. ಕಳೆದ ಹಲವು ವರ್ಷಗಳಿಂದ ಉಗ್ರ ಸಂಘಟನೆಗಳಲ್ಲಿ ಭಾಗಿಯಾಗಿದ್ದ ಆತ ಹೆಂಡತಿ ಮಕ್ಕಳನ್ನು ಉತ್ತರ ಪ್ರದೇಶದಲ್ಲಿ ಬಿಟ್ಟು ಸಿರಿಯಾಗೆ ಹೋಗಲು ತಯಾರಿ ಮಾಡಿಕೊಂಡಿದ್ದ ಎನ್ನಲಾಗಿದೆ.

ಟೆಲಿಗ್ರಾಂ, ಡಾರ್ಕ್‌ನೆಟ್‌ನಲ್ಲಿ ಕಾರ್ಯಾಚರಣೆ

ಕಳೆದ ಎರಡು ವರ್ಷಗಳಿಂದ ಬೆಂಗಳೂರಿನಲ್ಲಿ ಅನಾಮಿಕನಂತೆ ಕುಳಿತಿದ್ದ ಆರಿಫ್‌ ಮನೆಯಿಂದಲೇ ಕುಕೃತ್ಯಗಳನ್ನು ನಡೆಸುತ್ತಿದ್ದ ಎನ್ನುವುದು ಬಯಲಾಗಿದೆ. ಅಲ್‌ಖೈದಾದ ಗ್ರೂಪ್‌ಗಳಲ್ಲಿ ಸಕ್ರಿಯವಾಗಿದ್ದ ಆತ ಟೆಲಿಗ್ರಾಮ್‌ ಮೂಲಕ ಆಪರೇಟ್‌ ಮಾಡುತ್ತಿದ್ದ ಎಂದು ತಿಳಿದುಬಂದಿದೆ. ಟೆಲಿಗ್ರಾಮ್ ಹಾಗು ಡಾರ್ಕ್ ನೆಟ್ ಮೂಲಕ ಉಗ್ರ ಸಂಘಟನೆಯ ಜೊತೆಗೆ ಸಂಪರ್ಕ ಸಾಧಿಸಿದ್ದ.

ಈ ಹಿಂದೆಯೂ ವಿದೇಶಕ್ಕೆ ಹಾರಲು ಟ್ರೈ ಮಾಡಿದ್ದ!

ಆರಿಫ್‌ ಅಲಿಯಾಸ್‌ ಮೊಹಮ್ಮದ್‌ ಆರಿಫ್‌ ಕೆಲವು ವರ್ಷಗಳ ಹಿಂದೆ ಐಸಿಸ್‌ ಸೇರುವ ಒಲವು ಹೊಂದಿದ್ದ. ಆದರೆ, ಆದರೆ ನಂತರದ ಹಂತದಲ್ಲಿ ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ ಮತ್ತು ತಾಲಿಬಾನ್ ಪ್ರವರ್ಧಮಾನಕ್ಕೆ ಬಂದಿತ್ತು. ತಾಲಿಬಾನ್ ಪವರ್ ಫುಲ್ ಆಗಿದ್ದ ಬಳಿಕ ಈತನ ಒಲವು ಆಲ್ ಖೈದಾ ಮತ್ತು ತಾಲಿಬಾನ್ ಕಡೆಗೆ ತಿರುಗಿತ್ತು. ಹೀಗಾಗಿ ಅವನು ಅಫ್ಘಾನಿಸ್ತಾನಕ್ಕೆ ಹೋಗಲು ಪ್ಲ್ಯಾನ್‌ ಮಾಡಿದ್ದ.

ಈ ಹಿಂದೆ ಐಸಿಸ್‌ ಬಗ್ಗೆ ಒಲವಿದ್ದಾಗ ಇರಾಕ್‌ ಮೂಲಕ ಸಿರಿಯಾಕ್ಕೆ ಹೋಗಲು ಯತ್ನಿಸಿದ್ದ. ಆದರೆ, ಇರಾಕ್‌ ಮೂಲಕ ಹೋಗುವಂತಿರಲಿಲ್ಲ. ಆ ನಂತರ ಇರಾನ್‌ ಮೂಲಕ ಹಾರಲು ಯತ್ನಿಸಿದಾಗ ಆ ರೂಟ್‌ ಕೂಡಾ ಬಂದ್‌ ಆಗಿತ್ತು. ಈಗ ಅವನ ಗುರಿ ಅಫಘಾನಿಸ್ತಾನ. ಹಾಗಂತ ಅಲ್ಲಿಗೆ ನೇರವಾಗಿ ಹಾರಿದರೆ ಸಂಶಯ ಬರುತ್ತದೆ ಎಂಬ ಕಾರಣಕ್ಕಾಗಿ ಬೇರೆ ಬೇರೆ ರೂಟ್‌ಗಳ ಮೂಲಕ ವಿಮಾನ ಟಿಕೆಟ್‌ ಬುಕ್‌ ಮಾಡಿಕೊಂಡಿದ್ದ ಎನ್ನಲಾಗಿದೆ.

ಟ್ವಿಟರ್‌ ಅಕೌಂಟ್‌ ಕ್ಲೋಸ್‌

ಆರಿಫ್‌ ಈ ಹಿಂದಿನಿಂದಲೂ ಸಾಮಾಜಿಕ ಜಾಲತಾಣದಲ್ಲಿ ಫೇಕ್‌ ಅಕೌಂಟ್‌ ಮೂಲಕ ಉಗ್ರ ಸಂಘಟನೆಗಳ ಪರ ವಾದ ಮಾಡುತ್ತಿದ್ದ. ಜತೆಗೆ ನಾನಾ ವ್ಯಕ್ತಿಗಳ ಜತೆ ಸಂಪರ್ಕ ಹೊಂದಿದ್ದ. ಈ ನಡುವೆ ಆತನ ಟ್ವಿಟರ್‌ ಖಾತೆಗಳು ಬ್ಲಾಕ್‌ ಆಗಿದ್ದವು. ಬಳಿಕ ಆತ ಟೆಲಿಗ್ರಾಮ್‌ನಲ್ಲಿ ಸಕ್ರಿಯನಾಗಿದ್ದ ಎನ್ನಲಾಗಿದೆ.

ಇದನ್ನೂ ಓದಿ : Terrorist arrested in Bangalore : ಬೆಂಗಳೂರಲ್ಲಿ ಶಂಕಿತ ಉಗ್ರ ಸೆರೆ; ಅಲ್‌ ಖೈದಾ ಜತೆ ಸಂಪರ್ಕ ಹೊಂದಿದ್ದ ಟೆಕ್ಕಿ ಆರಿಫ್‌

Exit mobile version