ಬೆಂಗಳೂರು: ನಗರದ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಿಸಲು ಸಂಚು ರೂಪಿಸಿದ್ದ ಶಂಕಿತ ಉಗ್ರನನ್ನು ಎನ್‌ಐಎ ಬಂಧಿಸಿದೆ. 2014ರಲ್ಲಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ ಆರೋಪದಲ್ಲಿ ಶಂಕಿತ ಉಗ್ರನ (Terrorist Arrested) ಸೆರೆಯಾಗಿದೆ.
ನೂರುದ್ದೀನ್ ಅಲಿಯಾಸ್ ರಫಿ ಬಂಧಿತ ಶಂಕಿತ ಉಗ್ರ. ಮೈಸೂರಿನ ರಾಜೀವ ನಗರದಲ್ಲಿ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ 2014ರಲ್ಲಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಟ್ರಿನಿಟಿ ಸರ್ಕಲ್ ಬಳಿ ಇರುವ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ.
NIA Arrests a Proclaimed Offender in Sri Lankan-Pak Espionage Case pic.twitter.com/Meb9Otvrpf
— NIA India (@NIA_India) May 15, 2024
ಇನ್ನು ಕೊಲಂಬೋದಲ್ಲಿರುವ ಪಾಕಿಸ್ತಾನಿ ಹೈ ಕಮೀಷನ್ ಕಚೇರಿನಲ್ಲಿ ಉದ್ಯೋಗಿಯಾಗಿರುವವನ ಜತೆ ಸಂಪರ್ಕ ಹೊಂದಿದ್ದ ಶಂಕಿತ ಉಗ್ರ, ಪಾಕಿಸ್ತಾನಿ ಪ್ರಜೆ ಅಮೀರ್ ಜುಬೇರ್ ಸಿದ್ಧಿಕಿಯ ಆಣತಿ ಮೇರೆಗೆ ಕಾರ್ಯ ನಿರ್ವಹಿಸುತ್ತಿದ್ದ. ಜತೆಗೆ ಪಾಕಿಸ್ತಾನಿ ಬೇಹುಗಾರರಿಗೆ ನೂರುದ್ದೀನ್ ಹಣ ಸಹಾಯ ಮಾಡುತ್ತಿದ್ದ. ಸದ್ಯ ಮೈಸೂರಿನಲ್ಲಿ ವಶಕ್ಕೆ ಪಡೆದ ಶಂಕಿತನಿಂದ ಒಂದು ಡ್ರೋನ್, ಮೊಬೈಲ್, ಲ್ಯಾಪ್ ಟಾಪ್, ಪೆನ್ ಡ್ರೈವ್ ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ ಹೈದರಾಬಾದ್ ಬೇಹುಗಾರಿಕಾ ಪ್ರಕರಣದಲ್ಲಿ ಜಾಮೀನು ಪಡೆದು ಪರಾರಿಯಾಗಿದ್ದ ಶಂಕಿತ ಉಗ್ರ ನೂರುದ್ದೀನ್ ಸುಳಿವು ನೀಡಿದವರಿಗೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 5 ಲಕ್ಷ ಬಹುಮಾನ ಘೋಷಿಸಿತ್ತು. 2023ರ ಆಗಸ್ಟ್‌ನಲ್ಲಿ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾದ ನಂತರ ಚೆನ್ನೈನ NIA ವಿಶೇಷ ನ್ಯಾಯಾಲಯಕ್ಕೆ ಹಾಜರಾಗಲು ವಿಫಲವಾದಾಗ ನೂರುದ್ದೀನ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಲಾಗಿತ್ತು.
ಇದನ್ನೂ ಓದಿ | Prajwal Revanna Case: ಸೆಕ್ಸ್ ಕೇಸಲ್ಲಿ ಎಕ್ಸ್ ಮಾನ್ಯತೆ ಕಳೆದುಕೊಂಡ ಪ್ರಜ್ವಲ್ ರೇವಣ್ಣ!
ಶ್ರೀಲಂಕಾದ ಪ್ರಜೆ ಮುಹಮ್ಮದ್ ಸಕೀರ್ ಹುಸೇನ್ ಮತ್ತು ಕೊಲಂಬೋದಲ್ಲಿನ ಪಾಕಿಸ್ತಾನ ಹೈಕಮೀಷನ್ ಕಚೇರಿ ಉದ್ಯೋಗಿ, ಪಾಕಿಸ್ತಾನದ ಪ್ರಜೆ ಅಮೀರ್ ಜುಬೇರ್ ಸಿದ್ಧಿಕಿ ಸೇರಿ ಚೆನ್ನೈನ ಯುಎಸ್ ಕಾನ್ಸುಲೇಟ್ ಹಾಗೂ ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಆ ಸಂದರ್ಭದಲ್ಲಿ ಆರೋಪಿ ನೂರುದ್ದೀನ್, ಪಾಕಿಸ್ತಾನಿ ಪ್ರಜೆಯ ಆದೇಶದ ಮೇರೆಗೆ ನಕಲಿ ನೋಟುಗಳನ್ನು ಪೂರೈಸುವ ಮೂಲಕ ದೇಶ ವಿರೋಧಿ ಬೇಹುಗಾರಿಕೆ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುತ್ತಿದ್ದ ಎಂದು ಎನ್ಐಎ ತನಿಖೆಯಲ್ಲಿ ಬಹಿರಂಗವಾಗಿದೆ.
ನೂರುದ್ದೀನ್ ತಲೆಮರೆಸಿಕೊಂಡ ನಂತರ ಸ್ಥಗಿತಗೊಂಡಿದ್ದ ಆತನ ವಿರುದ್ಧದ ವಿಚಾರಣೆ ಈಗ ಪುನರಾರಂಭವಾಗಲಿದೆ ಎಂದು ಎನ್‌ಐಎ ಮಾಹಿತಿ ನೀಡಿದೆ.