Site icon Vistara News

Terrorists in Bengaluru : ಕಿರಾತಕರಿಗೆ ಲಷ್ಕರ್‌ ನಂಟು; ಇವರ ಹಿಂದಿದ್ದಾನೆ 2008ರ ‌Bangalore Blast ಕಿಂಗ್‌ಪಿನ್

T Nazir and arrested terrorists

ಬೆಂಗಳೂರು: ರಾಜಧಾನಿಯಲ್ಲಿ ದೊಡ್ಡ ಮಟ್ಟದ ಸ್ಫೋಟ (Blast in Bangalore) ನಡೆಸಲು ಸಂಚು ನಡೆಸುತ್ತಿದ್ದ ಐವರು ಶಂಕಿತ ಉಗ್ರರನ್ನು (Terrorists in Bengaluru) ಬೆಂಗಳೂರಿನ ಸಿಸಿಬಿ ಪೊಲೀಸರು (Bangalore CCB Police) ಬಂಧಿಸುವ ಮೂಲಕ ದೊಡ್ಡ ಅಪಾಯವನ್ನು ತಪ್ಪಿಸಿದ್ದಾರೆ. ಈ ಐವರು ಉಗ್ರರ ಚಟುವಟಿಕೆಗಳು ಮತ್ತು ರೌಡಿಶೀಟರ್‌ಗಳಾಗಿದ್ದ ಅವರು ಭಯಾನಕ ಉಗ್ರರಾಗಿ ಬದಲಾದ ಬಗೆ ಆತಂಕ ಹುಟ್ಟಿಸುತ್ತಿದೆ. ಅವರು ಈಗ ಸಾಮಾನ್ಯರಲ್ಲ. ಯಾಕೆಂದರೆ, ಅವರ ಹಿಂದೆ ಕುಖ್ಯಾತ ಉಗ್ರ ಸಂಘಟನೆ ಲಷ್ಕರೆ ತಯ್ಬಾ (Lashkar E Toiba) ಇದೆ ಎಂಬ ಅಂಶ ಬಯಲಾಗಿದೆ. ಅವರಿಗೆ ಲಷ್ಕರ್‌ ಜತೆ ಸಂಪರ್ಕ ಕುದುರಿಸಿದ್ದು ಟಿ. ನಝೀರ್‌. ಅವನು ಸಾಮಾನ್ಯನಲ್ಲ. 2008ರಲ್ಲಿ ನಡೆದ ಬೆಂಗಳೂರು ಸರಣಿ ಬಾಂಬ್‌ ಸ್ಫೋಟದ ರೂವಾರಿ. ಪ್ರಸಕ್ತ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಈ ನಝೀರ್‌ನೇ ಈ ಎಲ್ಲ ಕೃತ್ಯಗಳ ಹಿಂದಿರುವ ಮಾಸ್ಟರ್‌ ಮೈಂಡ್‌. ಅವನಿಗೆ ಬೆಂಬಲವಾಗಿ ನಿಂತವನು ಮೊಹಮ್ಮದ್‌ ಜುನೈದ್‌.

2008ರಲ್ಲಿ ನಡೆದಿತ್ತು ಬೆಂಗಳೂರು ಸ್ಫೋಟ

ಎಲ್ಲರಿಗೂ ಗೊತ್ತಿರುವ ಹಾಗೆ 2008ರ ಜುಲೈ 25 ರಂದು ಬೆಂಗಳೂರಲ್ಲಿ ಸೀರಿಯಲ್ ಬಾಂಬ್ ಬ್ಲಾಸ್ಟ್ (2008 Bangalore Blast) ಸಂಭವಿಸಿತ್ತು. ಬೆಂಗಳೂರಿನ 9 ಕಡೆಗಳಲ್ಲಿ ಲಷ್ಕರೆ ತಯ್ಬಾ ಉಗ್ರರು ಸ್ಫೋಟ ನಡೆಸಿದ್ದು ಇದರಲ್ಲಿ ಮೂವರು ಗಾಯಗೊಂಡಿದ್ದರು. 20 ಮಂದಿ ಗಾಯಗೊಂಡಿದ್ದರು.

ಮಡಿವಾಳದಿಂದ ನಾಯಂಡಹಳ್ಳಿಯವರಗೆ ಅಲ್ಲಲ್ಲಿ ಜಿಲ್ಯಾಟಿನ್‌ ಬಳಸಿ ಸ್ಫೋಟ ನಡೆಸಲಾಗಿತ್ತು.
ಮೊದಲ ಸ್ಫೋಟ: ಮಡಿವಾಳ ಬಸ್ ಸ್ಟ್ಯಾಂಡ್- ಮಧ್ಯಾಹ್ನ 1.20
ಎರಡನೇ ಸ್ಫೋಟ: ಮೈಸೂರು ರಸ್ತೆ – ಮಧ್ಯಾಹ್ನ 1-25ರ ಸಮಯ
ಮೂರನೇ ಸ್ಫೋಟ: ಆಡುಗೋಡಿ – ಮಧ್ಯಾಹ್ನ 1-40 ಸಮಯ
ನಾಲ್ಕನೇ ಸ್ಫೋಟ: ಕೋರಮಂಗಲ – ಮಧ್ಯಾಹ್ನ 2-10
ಐದನೇ ಸ್ಫೋಟ: ವಿಠಲ್ ಮಲ್ಯ ರೋಡ್ -ಮಧ್ಯಾಹ್ನ 2-25ರ ಹೊತ್ತು
ಆರನೇ ಸ್ಫೋಟ: ಲ್ಯಾಂಗ್ ಫೋರ್ಡ್ ರೋಡ್: ಮಧ್ಯಾಹ್ನ 2-35 ಸಮಯ
ಏಳನೇ ಸ್ಫೋಟ: ರಿಚ್ಮಂಡ್ ಟೌನ್ ಬಳಿ ಸ್ಫೋಟ
ಎಂಟನೆಯದ್ದು: ಫೋರಂ ಮಾಲ್ ಬಳಿ ಬಾಂಬ್ ಪತ್ತೆ
9ನೆಯದ್ದು: ನಾಯಂಡಹಳ್ಳಿ ಬಳಿ ಪತ್ತೆಯಾಗಿತ್ತು.

ಆವತ್ತು ಈ ಸ್ಫೋಟವನ್ನು ಸಂಘಟಿಸಿದ್ದು ಟಿ. ನಝೀರ್‌ ಮತ್ತು ಅಬ್ದುಲ್‌ ಸತ್ತಾರ್‌ ಎಂಬ ಲಷ್ಕರ್‌ ಉಗ್ರರು. ಇಬ್ಬರು ಕೂಡಾ ಪಿಡಿಪಿಯ ಅಬ್ದುಲ್ ನಾಸಿರ್ ಮದನಿ ಜೊತೆ ಸಂಪರ್ಕ ಹೊಂದಿದ್ದರು. ಈ ಪ್ರಕರಣದ ಪ್ರಧಾನ ಆರೋಪಿಯಾಗಿರುವ ಟಿ. ನಝೀರ್‌ ಕಳೆದ 10 ವರ್ಷಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ.

ಬಂಧಿತ ಉಗ್ರರು ಇವರು

ನಝೀರ್‌ ಜತೆ ಬಂಧಿತರ ಶಂಕಿತ ಉಗ್ರರ ಸಂಪರ್ಕ ಹೇಗೆ?

ಈಗ ಜೈಲಿನಲ್ಲಿರುವ ನಝೀರ್‌ ಈಗ ಬಂಧಿತರಾಗಿರುವ ಐದು ಮಂದಿ ಶಂಕಿತ ಉಗ್ರರನ್ನು ತರಬೇತಿ ನೀಡಿ ಸ್ಫೋಟಕ್ಕೆ ಸಜ್ಜುಗೊಳಿಸಿದ್ದು ಹೇಗೆ ಎನ್ನುವುದು ಇಂಟರೆಸ್ಟಿಂಗ್‌ ಕಥೆ.

2019ರ ಅಕ್ಟೋಬರ್‌ 9ರಂದು ಬೆಂಗಳೂರಿನ ಬೆನ್ಸನ್‌ ಟೌನ್‌ ನಿವಾಸಿಯಾಗಿರುವ ನಿಸಾರ್‌ ಅಹಮದ್‌ ಅವರ ಪುತ್ರ ನೂರ್‌ ಅಹಮದ್‌, ಅವನ ಗೆಳೆಯರಾದ ಮುದಸ್ಸರ್‌ ಮತ್ತು ಕಾಳು ಎಂಬಾತನ ಅಪಹರಣ ನಡೆಯುತ್ತದೆ. ಯಾವುದೇ ಕೆಲಸ ಮಾಡದೆ ಮನೆಗೆ ಭಾರವಾಗಿದ್ದ ನೂರ್‌ ಅಹಮದ್‌ ಮತ್ತು ಆತನ ಗೆಳೆಯರನ್ನು ದೇವೇ ಗೌಡ ರಸ್ತೆಯ ವಿಕೇರ್‌ ಆಸ್ಪತ್ರೆಯ ಮುಂಭಾಗದಿಂದ ಕಾರಿನಲ್ಲಿ ಅಪಹರಣ ಮಾಡಲಾಗಿತ್ತು. ಸ್ವಲ್ಪವೇ ಹೊತ್ತಿನಲ್ಲಿ ನೂರ್‌ ಅಹಮದ್‌ನ ಕೊಲೆ ನಡೆದಿತ್ತು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು 21 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅದರಲ್ಲಿ ಪ್ರಮುಖರೇ ಆರ್‌ಟಿ ನಗರ ನಿವಾಸಿ ಮೊಹಮ್ಮದ್‌ ಜುನೇಡ್‌, ಸುಲ್ತಾನ್‌ಪಾಳ್ಯದ ಸೈಯ್ಯದ್ ಸುಹೇಲ್‌ ಖಾನ್‌, ಕೊಡಿಗೆಹಳ್ಳಿ ದೇವಿ ನಗರದ ಮಹಮ್ಮದ್ ಉಮ್ಮರ್, ಕೊಡಿಗೆ ಹಳ್ಳಿ ಭದ್ರಪ್ಪ ಲೇಔಟ್‌ನ ಜಾಹಿದ್ ತಬ್ರೈಜ್‌, ಆರ್‌ಟಿ ನಗರ ಮೇನ್‌ರೋಡ್‌ನ ದಿಣ್ಣೂರಿನ ಸೈಯ್ಯದ್ ಮುದಾಸ್ಸಿರ್‌ ಪಾಷಾ. ಇವರ ಜತೆಗೆ ಇನ್ನೂ 15 ಮಂದಿ ಜೈಲು ಸೇರಿದ್ದರು.

ಹೀಗೆ ಪರಪ್ಪನ ಅಗ್ರಹಾರ ಜೈಲು ಸೇರಿದ್ದ ಜುನೈದ್‌ ಮತ್ತು ಟೀಮಿಗೆ ಪರಿಚಯವಾದವನೇ ಟಿ. ನಝೀರ್‌. ಉದ್ದಕ್ಕೆ ಗಡ್ಡ ಬಿಟ್ಟುಕೊಂಡು ಜೈಲಿನಲ್ಲಿದ್ದ ಅಪರಾಧಿ, ವಿಚಾರಣಾಧೀನ ಕೈದಿಗಳ ಜತೆ ಸಂಪರ್ಕ ಸಾಧಿಸುತ್ತಿದ್ದ. ಹಾಗೆ ಅವನ ಸಂಪರ್ಕ ಸಿಕ್ಕವನೇ ಮೊಹಮ್ಮದ್‌ ಜುನೈದ್‌. ಟಿ. ನಝೀರ್‌ ಜುನೈದ್‌ನ ಬ್ರೇನ್‌ ವಾಷ್‌ ಮಾಡಿ ಉಗ್ರ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಿದ್ದ. ಅದುವರೆಗೆ ಕೇವಲ ರೌಡಿಸಂ, ಕೊಲೆ ಮೊದಲಾದ ಸ್ಥಳೀಯ ಸಂಗತಿಗಳಲ್ಲಿ ಕ್ರಿಮಿನಲ್‌ ಎನಿಸಿಕೊಂಡಿದ್ದ ಜುನೈದ್‌ನ ತಲೆಯಲ್ಲಿ ಮೊದಲ ಬಾರಿಗೆ ಧಾರ್ಮಿಕ ದ್ವೇಷ ಮೊಳೆತಿತ್ತು. ಈ ಜುನೇದ್‌ ಆಗಲೇ ಜೈಲಿನಲ್ಲಿರುವ ತನ್ನ ಜತೆಗಾರರಲ್ಲಿ ಈ ಧರ್ಮ ದ್ವೇಷದ ಬೀಜವನ್ನು ಬಿತ್ತಲು ಶುರು ಮಾಡಿದ್ದ. ಕೆಲವು ಸಂದರ್ಭದಲ್ಲಿ ಈ ಆರೋಪಿಗಳಿಗೂ ನಝೀರ್‌ ಸಂಪರ್ಕ ಸಿಕ್ಕಿತ್ತಾದರೂ ಜುನೇದ್‌ನ ಸಂಪರ್ಕ ಕೊಂಡಿಯಾಗಿದ್ದ.

ಆಗಲೇ ನಜೀರ್‌ ಬಾಂಬ್‌ ತಯಾರಿ ಹೇಗೆ, ಪರಿಕರಗಳನ್ನು ಎಲ್ಲಿಂದ ತರಬೇಕು, ಧರ್ಮದ್ವೇಷದ ಉದ್ದೇಶವೇನು? ಅದರಿಂದ ಪರಲೋಕದಲ್ಲಿ ಸಿಗುವ ಸವಲತ್ತುಗಳೇನು ಎಂದೆಲ್ಲ ವಿವರಿಸಿ ಅವರ ಮನಗೆದ್ದಿದ್ದ. ಹೀಗಾಗಿ ಅವರೆಲ್ಲರ ಒಳಗೊಂದು ದ್ವೇಷದ ಕಿಡಿ ಹೊತ್ತಿಕೊಂಡಿತ್ತು.

ಅವರೆಲ್ಲ ಜೈಲಿನಿಂದ ಹೊರಗೆ ಬಂದಿದ್ದರು

ಈ ನಡುವೆ, ನೂರ್‌ ಮಹಮ್ಮದ್‌ ಕೊಲೆ ಪ್ರಕರಣದಲ್ಲಿ ಆರೋಪಿಗಳಿಗೆ ಜಾಮೀನು ಸಿಕ್ಕಿತ್ತು. ಹೀಗಾಗಿ ಜುನೇದ್‌ ಸಹಿತ ಅವರೆಲ್ಲರೂ ಜೈಲಿನಿಂದ ಹೊರಬಂದು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಹೆಚ್ಚಿನವರು ಮೆಕ್ಯಾನಿಕ್‌ ಕೆಲಸಗಾರರು. ಈ ನಡುವೆ ಜುನೇದ್‌ 2020ರಲ್ಲಿ ರಕ್ತಚಂದನ ಕಳವು ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಸೇರಿದ್ದಾನೆ. ಆಗ ನಝೀರ್‌ ಮತ್ತು ಅತನ ಸಂಪರ್ಕ ಇನ್ನಷ್ಟು ಗಾಢವಾಗಿದೆ. ಈ ಪ್ರಕರಣದಲ್ಲಿ ಕೂಡಾ ಆತ ಜಾಮೀನು ಪಡೆದು ಹೊರಗೆ ಬಂದಿದ್ದಾನೆ. ಆದರೆ, ನಝೀರ್‌ನೊಂದಿಗಿನ ಸಂಪರ್ಕ ಮುಂದುವರಿದಿತ್ತು.

ಜೈಲಿನಿಂದ ಹೊರಬಂದವನು ಕಣ್ಮರೆ

ಹೀಗೆ ಜಾಮೀನು ಪಡೆದು ಹೊರಗೆ ಬಂದಿದ್ದ ಜುನೇದ್‌ ಮತ್ತೆ ಯಾರಿಗೂ ಸಿಕ್ಕಿಲ್ಲ. ಕಣ್ಮರೆಯಾದ ಆತ ಈಗ ವಿದೇಶದಲ್ಲಿದ್ದಾನೆ ಎಂದು ಪೊಲೀಸರು ಹೇಳುತ್ತಾರೆ. ಈ ನಡುವೆ, ಜುನೈದ್‌ ಟಿ. ನಝೀರ್‌ ಸಹಕಾರದೊಂದಿಗೆ ಲಷ್ಕರೆ ತಯ್ಬಾ ಸಂಘಟನೆಯ ಜತೆ ಸಂಪರ್ಕ ಸಾಧಿಸಿದ್ದಾನೆ.

ಇತ್ತ ಜುನೇದ್‌ ನೂರ್‌ ಮಹಮ್ಮದ್‌ ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಜೈಲು ಸೇರಿ, ಅಲ್ಲಿ ಒಂದಿಷ್ಟು ಬ್ರೇನ್‌ ವಾಷ್‌ ಆಗಿದ್ದ ತನ್ನ ಹಳೆ ಟೀಮ್‌ನ್ನು ಒಂದುಗೂಡಿಸಲು ಪ್ಲ್ಯಾನ್‌ ಮಾಡಿದ್ದ. ಅವನ ಬಲೆಗೆ ಕೆಲವರು ಮಂದಿ ಸಿಕ್ಕಿದ್ದವರು. ಅವರೇ ಈಗ ಪೊಲೀಸರಿಂದ ಬಂಧನಕ್ಕೆ ಒಳಗಾಗಿರುವ 15 ಮಂದಿ ಶಂಕಿತ ಉಗ್ರರು.

ಈ ಐವರು ಬೆಂಗಳೂರಿನ ನಿವಾಸಿಗಳೇ ಆಗಿದ್ದರೂ ಒಂದೇ ಕಡೆ ವಾಸ ಮಾಡಬೇಕು ಎಂದು ಸೂಚನೆ ಕೊಟ್ಟವನು ಇದೇ ಜುನೈದ್‌. ಈ ಐವರಿಗೆ ಬೆಂಗಳೂರಿನಲ್ಲಿ ಬಾಂಬ್‌ ಸ್ಫೋಟ ನಡೆಸಬೇಕಾದ ಜಾಗ, ಯಾವ ರೀತಿ ನಡೆಸಬೇಕು ಎಂಬುದರಿಂದ ಹಿಡಿದು ಅದಕ್ಕೆ ಬೇಕಾದ ಕಚ್ಚಾ ಸಾಮಗ್ರಿಗಳನ್ನು ಹಂತ ಹಂತವಾಗಿ ಒದಗಿಸಿದ್ದ.

ಸುಲ್ತಾನ್‌ ಪಾಳ್ಯದಲ್ಲಿ ವಾಸವಾಗಿದ್ದ ಈ ಐವರ ಮನೆಗಳಿಗೆ ಪೊಲೀಸರು ದಾಳಿ ಮಾಡಿ 7 ಕಂಟ್ರಿಮೇಡ್ ಪಿಸ್ತೂಲುಗಳು, 45 ಜೀವಂತ ಗುಂಡುಗಳು, ವಾಕಿ ಟಾಕಿ ಸೆಟ್ಸ್, ಒಂದು ಡ್ಯಾಗರ್‌ ಮತ್ತು 12 ಮೊಬೈಲ್‌ ಫೋನ್‌ಗಳನ್ನು ವಶಪಡಿಸಿಕೊಂಡಿದ್ದರು. ಈ ಎಲ್ಲ ವಸ್ತುಗಳನ್ನು ಇವರಿಗೆ ಒದಗಿಸಿದ್ದು ಜುನೇದ್‌. ಜುನೇದ್‌ ಕಳೆದ ಮೂರು ತಿಂಗಳಿನಿಂದ ಹಣ, ಕಚ್ಚಾ ವಸ್ತುಗಳನ್ನು ಪಾರ್ಸೆಲ್‌ ಮಾಡುತ್ತಿದ್ದ.

ಈ ಎಲ್ಲ ಸಂಶಯಾಸ್ಪದ ಚಟುವಟಿಕೆಗಳು ಯಾರಿಗೂ ಗೊತ್ತಾಗುವುದಿಲ್ಲ ಎಂದು ಅಪರಾಧಿಗಳು ಭಾವಿಸಿದ್ದರು. ಆದರೆ, ದೂರದಿಂದಲೇ ಒಂದು ಕಣ್ಣು ಈ ಎಲ್ಲ ಚಟುವಟಿಕೆಗಳನ್ನು ಗಮನಿಸುತ್ತಿತ್ತು. ಅದುವೇ ಕೇಂದ್ರದ ಗುಪ್ತಚರ ಇಲಾಖೆ.

ಬೆಂಗಳೂರಿನ ಸುಲ್ತಾನ್‌ ಪಾಳ್ಯದಲ್ಲಿ ಇಂಥ ವಿದ್ಯಮಾನವೊಂದು ನಡೆಯುತ್ತಿದೆ ಗಮನಿಸಿ ಎಂಬ ಸಂದೇಶ ಬೆಂಗಳೂರಿನ ಸಿಸಿಬಿ ಪೊಲೀಸರಿಗೆ ಬಂದಿತ್ತು. ಇದನ್ನು ಆಧರಿಸಿ ಕಳೆದ ಕೆಲವು ದಿನಗಳಿಂದ ಸಿಸಿಬಿ ಪೊಲೀಸರು ಮಫ್ತಿಯಲ್ಲಿ ಈ ಭಾಗದಲ್ಲಿ ಓಡಾಡಿದ್ದರು. ಅಲ್ಲಿನ ಒಂದು ಅಂಗಡಿಯಿಂದ ಹಾರ್ಡ್‌ ಡಿಸ್ಕ್‌ ಒಂದನ್ನು ವಶಪಡಿಸಿಕೊಂಡಿದ್ದರು. ಮನೆಗೆ ಹೋಗಿ ಯಾರೆಲ್ಲ ಇದ್ದಾರೆ ಎಂದು ಮಾತನಾಡಿಸಿ ಬಂದಿದ್ದರು. ಕೊನೆಗೆ ಮಂಗಳವಾರ ರಾತ್ರಿ ಬಹುತೇಕ ಎಲ್ಲರೂ ಜತೆಯಾಗಿರುವಾಗ ನುಗ್ಗಿಯೇ ಬಿಟ್ಟರು. ಹೀಗೆ ದೊಡ್ಡದೊಂದು ದುಷ್ಕ್ರಮಣ ಕೃತ್ಯ ನಡೆಸುವ ಸಂಚು ವಿಫಲಗೊಂಡಿತು.

ಇದೀಗ ಪೊಲೀಸರು ತಲೆಮರೆಸಿಕೊಂಡಿರುವ ಜುನೇದ್‌ಗಾಗಿ ಹುಡುಕಾಟ ಶುರು ಮಾಡಿದ್ದಾರೆ, ಜತೆಗೆ ಜೈಲಿನಲ್ಲಿರುವ ನಝೀರ್‌ನನ್ನು ವಿಚಾರಣೆಗೆ ಒಳಪಡಿಸುವ ಸಾಧ್ಯತೆಗಳಿವೆ.

ಇದನ್ನೂ ಓದಿ: Terrorists in Bengaluru : ಉಗ್ರರು ಇದ್ದದ್ದು ಹಿಂದುಗಳ ಮನೆಯಲ್ಲಿ; ತಾಯಿ, ತಂಗಿಯನ್ನು ತೋರಿಸಿ ಮನೆ ಪಡೆದಿದ್ದ ಉಗ್ರ!

Exit mobile version