ಬೆಂಗಳೂರು: ರಾಜಧಾನಿಯ ಸುಲ್ತಾನ್ ಪಾಳ್ಯದ ಮನೆಗೆ ದಾಳಿ ಮಾಡಿ ಐವರು ಶಂಕಿತ ಉಗ್ರರನ್ನು (Terrorists in Bengaluru) ಬಂಧಿಸಿದ ವಿದ್ಯಮಾನದ ಬಗ್ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ (Dr. G Parameshwar) ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಮತ್ತು ವಿಧಾನಸಭೆಗೆ ಮಾಹಿತಿ ನೀಡಿದ್ದಾರೆ. ಇನ್ನು ಒಂದೆರಡು ದಿನ ಬಿಟ್ಟಿದ್ದರೆ ಬೆಂಗಳೂರಿನಲ್ಲಿ ದೊಡ್ಡದೊಂದು ಸ್ಫೋಟ (Big Blast averted in Bangalore) ನಡೆಯುವ ಎಲ್ಲ ಸಾಧ್ಯತೆಗಳಿದ್ದವು. ಪೊಲೀಸರ ಸಕಾಲಿಕ ಕಾರ್ಯಾಚರಣೆಯಿಂದ ದೊಡ್ಡ ಅನಾಹುತ ತಪ್ಪಿದೆ ಎಂದು ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.
ವಿಧಾನಸಭೆ ಆವರಣದ ಸಿಎಂ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಉಗ್ರರ ಸಂಚಿನ ಮಾಹಿತಿ ನೀಡಿದ ಗೃಹ ಸಚಿವ ಪರಮೇಶ್ವರ್ ಅವರು, ಪೊಲೀಸರು ಸರಿಯಾದ ಮಾಹಿತಿ ಆಧರಿಸಿ ಉಗ್ರರನ್ನ ಸೆರೆ ಹಿಡಿದಿದ್ದಾರೆ. ಒಂದೊಮ್ಮೆ ಅವರ ಬಂಧನ ಆಗದೆ ಇರುತ್ತಿದ್ದರೆ ಎರಡು ದಿನದಲ್ಲಿ ದೊಡ್ಡ ಮಟ್ಟದ ಸ್ಫೋಟ ನಡೆಯುವ ಅಪಾಯವಿತ್ತು. ಅಷ್ಟರ ಮಟ್ಟಿಗೆ ಉಗ್ರರು ಸಿದ್ಧತೆ ಮಾಡಿಕೊಂಡಿದ್ದರು ಎಂದು ಪರಮೇಶ್ವರ್ ಅವರು ಸಿಎಂಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಗುಪ್ತಚರ ಇಲಾಖೆಯ ಸಂಪೂರ್ಣ ವರದಿಯನ್ನು ಪರಮೇಶ್ವರ್ ಅವರು ಸಿಎಂಗೆ ನೀಡಿದರು.
ʻʻಇನ್ನೆರಡು ದಿನದಲ್ಲಿ ಬೆಂಗಳೂರಿನಲ್ಲಿ ದೊಡ್ಡ ಮಟ್ಟದ ಬ್ಲಾಸ್ಟ್ ಮಾಡಲು ಸಿದ್ಧತೆ ನಡೆಸಿದ್ದರು. ಒಂದು ದಿನ ತಡವಾಗಿದ್ದರೂ ಬೆಂಗಳೂರಿನಲ್ಲಿ ಬಿಗ್ ಬ್ಲಾಸ್ಟ್ ನಡೆಯುವ ಅಪಾಯವಿತ್ತು. ಬೆಂಗಳೂರು ಪೊಲೀಸರು ಕಡೆ ಗಳಿಗೆಯಲ್ಲಿ ಉಗ್ರರನ್ನು ಬಂಧಿಸಿ ಬಾರಿ ಅನಾಹುತ ತಪ್ಪಿಸಿದ್ದಾರೆʼʼ ಎಂದು ಪರಮೇಶ್ವರ್ ಅವರು ಸಿದ್ದರಾಮಯ್ಯ ಅವರಿಗೆ ಮಾಹಿತಿ ನೀಡಿದ್ದಾರೆ.
ಸದನಕ್ಕೆ ಮಾಹಿತಿ ನೀಡಿದ ಪರಮೇಶ್ವರ್
ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ವಿಧಾನಸಭೆ ಅಧಿವೇಶನಕ್ಕೆ ಆಗಮಿಸಿದ ಗೃಹ ಸಚಿವ ಪರಮೇಶ್ವರ್ ಅವರು, ದೊಡ್ಡ ಮಟ್ಟದ ಅಪಾಯವನ್ನು ತಪ್ಪಿಸಿದ ಸಿಸಿಬಿ ಪೊಲೀಸರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಈ ಆರೋಪಿಗಳು ಜೈಲಿನಲ್ಲಿ ಇರೋ ಅಪರಾಧಿಗಳ ಜತೆ ಸಂಪರ್ಕದಲ್ಲಿ ಇದ್ದರು ಎಂದು ಹೇಳಿದರು.
ಬಂಧಿತ ಶಂಕಿತ ಉಗ್ರರು ಯಾವ ಭಯೋತ್ಪಾದಕ ಸಂಘಟನೆ ಜತೆ ಗುರುತಿಸಿಕೊಂಡಿದ್ದಾರೆ ಎನ್ನುವುದು ತನಿಖೆಯಿಂದ ಗೊತ್ತಾಗಲಿದೆ ಎಂದು ಹೇಳಿದರು.
ಬೆಂಗಳೂರಿನ ಆಯಕಟ್ಟಿನ ಜಾಗಗಳೇ ಟಾರ್ಗೆಟ್
2008ರಲ್ಲಿ ಬೆಂಗಳೂರಿನ 9 ಕಡೆಗಳಲ್ಲಿ ಬಾಂಬ್ ಇಟ್ಟಿದ್ದ ದುಷ್ಟ ವ್ಯೂಹವೇ ಈ ಬಾರಿಯ ಸಂಚಿನಲ್ಲಿ ಭಾಗಿಯಾಗಿದ್ದು, ಈ ಬಾರಿ ಜನದಟ್ಟಣೆಯ ಪ್ರದೇಶಗಳನ್ನೇ ಟಾರ್ಗೆಟ್ ಆಗಿ ಇಟ್ಟುಕೊಂಡಿತ್ತು ಎನ್ನಲಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳೂ ಸೇರಿದಂತೆ ಜನ ಸೇರುವ ಜಾಗಗಳಲ್ಲಿ ಬಾಂಬ್ ಇಡುವುದು ಪ್ಲ್ಯಾನ್ ಆಗಿತ್ತು ಎನ್ನಲಾಗಿದೆ.
ಸುಮಾರು ಹತ್ತಕ್ಕೂ ಹೆಚ್ಚು ಜನರ ಟೀಮ್ ಒಂದು ಸ್ಫೋಟಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿರುವ ಸುಳಿವು ಪಡೆದ ಕೇಂದ್ರ ಗುಪ್ತಚರ ಇಲಾಖೆ ರಾಜ್ಯದ ಪೊಲೀಸರಿಗೆ ಅಲರ್ಟ್ ಮಾಡಿದ ಹಿನ್ನೆಲೆಯಲ್ಲಿ ಸುಲ್ತಾನ್ ಪಾಳ್ಯದಲ್ಲಿ ಕಾರ್ಯಾಚರಣೆ ನಡೆದಿದೆ.
ಇದನ್ನೂ ಓದಿ : Terrorists in Bengaluru : ಕಿರಾತಕರಿಗೆ ಲಷ್ಕರ್ ನಂಟು; ಇವರ ಹಿಂದಿದ್ದಾನೆ 2008ರ Bangalore Blast ಕಿಂಗ್‌ಪಿನ್