Site icon Vistara News

Terrorists in Bengaluru : ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗ್ತಿದೆ; ಬಸವರಾಜ ಬೊಮ್ಮಾಯಿ ಆರೋಪ

Basavaraja Bommai

#image_title

ಬೆಂಗಳೂರು: ರಾಜಧಾನಿ ಬೆಂಗಳೂರು ಉಗ್ರರ ಸುರಕ್ಷಿತ ತಾಣವಾಗಿ ಪರಿವರ್ತನೆಯಾಗುತ್ತಿದೆ (Terrorists in Bengaluru) ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraja Bommai) ಆತಂಕ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸಿಸಿಬಿ ಪೊಲೀಸರು ಐವರು ಉಗ್ರರನ್ನು ಬಂಧಿಸಿ (CCB Police arrest five suspecter terrorists) ದೊಡ್ಡ ಮಟ್ಟದ ಉಗ್ರ ಸಂಚನ್ನು ನಿಷ್ಕ್ರಿಯಗೊಳಿಸಿದ ಬೆನ್ನಿಗೇ ಮಾಜಿ ಸಿಎಂ ಬೊಮ್ಮಾಯಿ ಅವರು ಈ ಹೇಳಿಕೆ ನೀಡಿದ್ದಾರೆ.

ಬುಧವಾರ ಮಾಧ್ಯಮಗಳೊಂದಿಗೆ ‌ಮಾತನಾಡಿದ ಅವರು, ಕಳೆದ ಎರಡು‌ ತಿಂಗಳಿಂದ ಬೆಂಗಳೂರಿನ ಕ್ರೈಮ್ ಹೆಚ್ಚಾಗುತ್ತಿದೆ.‌ ಬೆಂಗಳೂರಿನ ಕಾನೂನು ಸುವ್ಯವಸ್ಥೆ ಅಪರಾದ ನಿಯಂತ್ರಣ ಕೈ ತಪ್ತಿದೆ. ದಿನನಿತ್ಯ ಕೊಲೆ ಸುಲಿಗೆ ಸಾಮಾನ್ಯವಾಗುತ್ತಿದೆ ಎಂದು ಹೇಳಿದರು.

ಬಹಳಷ್ಟು ಕೇಸ್ ಗಳು ಪೊಲೀಸ್ ಸ್ಟೇಶನಲ್ಲಿ ರಿಜಿಸ್ಟರ್ ಆಗುತ್ತಿಲ್ಲ. ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ ‌ಮಾಡುವುದು ಪೊಲೀಸರ ಕೆಲಸ. ಈ ಸರ್ಕಾರ ಬಂದಮೇಲೆ ಮಧ್ಯವರ್ತಿಗಳು ಕೈ ಹಾಕಿ‌ ನಿಯಂತ್ರಣ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಸರ್ಕಾರ ಅವಕಾಶ ಕೊಡಬಾರದು. ಬೆಂಗಳೂರಿನಲ್ಲಿ ಕ್ಲಬ್ ಚಟುವಟಿಕೆಗಳು ಹೆಚ್ಚಾಗಿದೆ, ಹಫ್ತಾ ವಸೂಲಿ ತೀವ್ರವಾಗುತ್ತಿದೆ ಎಂದು ಬೊಮ್ಮಾಯಿ ಆರೋಪಿಸಿದರು.

ಇಲ್ಲೇ ನೆಲೆಸಿ ಕ್ರಿಮಿನಲ್ ಚಟುವಟಿಕೆಗಳಿಗೆ ಕುಮ್ಮಕ್ಕು ಕೊಡುವಂತಹ ಕೆಲಸ ಆಗುತ್ತಿದೆ. ಅಂತರಾಷ್ಟ್ರೀಯ ಐಎಸ್ ಐ ಇವರ ಸಂಪರ್ಕದಲ್ಲಿದ್ದಾರೆ. ಸಿಸಿಬಿ ಅಧಿಕಾರಿಗಳನ್ನು ಬಹಿರಂಗ ಪಡಿಸಿ, ಇದರ ಆಳ ಮತ್ತು ಉದ್ದ ದೊಡ್ಡದಿದೆ. ಇದಕ್ಕೆಲ್ಲಾ ಅಂತಾರಾಷ್ಟ್ರೀಯ ಕುಮ್ಮಕ್ಕು ಇದೆ. ಉಗ್ರರನ್ನು ಬಂಧಿಸಿದ ಸಿಸಿಬಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು ಬಸವರಾಜ ಬೊಮ್ಮಾಯಿ.

ಉಗ್ರರ ವಿರುದ್ಧದ ಕೇಸ್‌ ಎನ್‌ಐಎ ತನಿಖೆಗೆ ಆಗ್ರಹ

ಉಗ್ರರ ವಿರುದ್ದದ ಕೇಸ್ ಗಳನ್ನು ಕೂಡಲೇ ತನಿಖೆಗೆ ಎನ್ ಐಎಗೆ ಕೊಡಬೇಕು. ಬೆಂಗಳೂರು ಸುರಕ್ಷತೆ ಬಗ್ಗೆ ಅಧಿಕಾರಿಗಳು ಫೀಲ್ಡ್ ಗೆ ಇಳಿಬೇಕು. ಇದರ ಹಿಂದೆ ಅಂತಾರಾಷ್ಟ್ರೀಯ ಸಂಸ್ಥೆಗಳ ಬೆಂಬಲವಿದೆ. ಬೆಂಗಳೂರಿನಲ್ಲಿ ಸ್ಪೋಟ ಮಾಡುವ ಹುನ್ನಾರ ಇದೆ. ಇದನ್ನ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಏನಾಗಿತ್ತು ಬೆಂಗಳೂರಿನಲ್ಲಿ?

ಬೆಂಗಳೂರಿನ ಕನಕ ನಗರದ ಸುಲ್ತಾನಾ ಪಾಳ್ಯದ ಮಸೀದಿ (Sultanapalya Mosque) ಬಳಿ ಟೆರರ್‌ ಮೀಟಿಂಗ್‌ (Terror Meeting) ನಡೆಯುತ್ತಿದ್ದ ಸಂದರ್ಭದಲ್ಲೇ ಸಿಸಿಬಿ ಪೊಲೀಸರು ದಾಳಿ ದಾಳಿ ನಡೆಸಿ ಐವರು ಶಂಕಿತ ಉಗ್ರರನ್ನು ಬಂಧಿಸಿದ್ದಾರೆ. ಸುಹೈಲ್, ಉಮರ್, ತಬ್ರೇಜ್, ಮುದಾಸಿರ್, ಫೈಜಲ್‌ ಮತ್ತು ರಬ್ಬಾನಿ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ. 2017ರಲ್ಲಿ ಆರ್ ಟಿ ನಗರದಲ್ಲಿ ನಡೆದ ನೂರ್ ಕೊಲೆ ಪ್ರಕರಣದಲ್ಲಿ ಈ ಬಂಧನ ನಡೆದಿದೆ. ಆದರೆ, ಅವರ ವಿಚಾರಣೆಯ ವೇಳೆ ಹಲವು ಸ್ಫೋಟಕ ವಿಚಾರಗಳು ಬಯಲಿಗೆ ಬಂದಿವೆ. ಬಂಧಿತರಿಗೆ ಟೆರರ್‌ ಲಿಂಕ್‌ ಇದ್ದು, ಇವರಿಗೆ 2008ರ ಬೆಂಗಳೂರು ಸರಣಿ ಸ್ಫೋಟದ ರೂವಾರಿ ಜುನೈದ್‌ನ ಜತೆ ಸಂಪರ್ಕ ಹೊಂದಿರುವುದು ಬಯಲಾಗಿದೆ.

ಜುನೈದ್‌ನ ಜತೆ ಸೇರಿಕೊಂಡು ಈ ಐವರು ಬೆಂಗಳೂರಿನಲ್ಲಿ ದೊಡ್ಡದೊಂದು ಸ್ಫೋಟ ನಡೆಸಲು ಸಂಚು ನಡೆಸುತ್ತಿದ್ದರು ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಬಂಧಿತ ಶಂಕಿತ ಉಗ್ರರನ್ನು ಇದೀಗ ಅಜ್ಞಾತ ಸ್ಥಳದಲ್ಲಿಟ್ಟು ವಿಚಾರಣೆ ನಡೆಸಲಾಗುತ್ತಿದ್ದು, ಹೆಚ್ಚಿನ ಮಾಹಿತಿ ಹೊರಬೀಳುವ ನಿರೀಕ್ಷೆ ಇದೆ.

Exit mobile version