ಬೆಂಗಳೂರು: ರಾಜಧಾನಿಯಲ್ಲಿ ದೊಡ್ಡ ಮಟ್ಟದ ನರಮೇಧಕ್ಕೆ ಮುಂದಾದ ನರರಾಕ್ಷಸರನ್ನು (Terrorists in Bengaluru) ಬೆಂಗಳೂರಿನ ಸಿಸಿಬಿ ಪೊಲೀಸರು (CCB Police) ಬಂಧಿಸಿ ಅವರನ್ನು ಜೈಲಿಗಟ್ಟಿದ್ದಾರೆ. ಆದರೆ ಈ ಕಿರಾತಕರು ಇಂಥಹುದೊಂದು ಸಂಚು ನಡೆಸುತ್ತಿದ್ದಾರೆ ಎಂಬ ಮೊದಲ ಸುಳಿವು ಸಿಕ್ಕಿದ್ದು ಎಲ್ಲಿಂದ? ಪೊಲೀಸರು ಟ್ರ್ಯಾಕ್ ಮಾಡಿದ್ದು ಹೇಗೆ?
ನಿಜವೆಂದರೆ, ಪೊಲೀಸರು ನೇರವಾಗಿ ಈ ದಾಳಿಯನ್ನು ಮಾಡಿದ್ದಲ್ಲ. ಬೆಂಗಳೂರಿನಲ್ಲಿ ಇಂಥಹುದೊಂದು ಕೃತ್ಯ ನಡೆಯಲಿದೆ ಎನ್ನುವ ಯಾವ ಕನಸೂ ಅವರಿಗೆ ಬಿದ್ದಿರಲಿಲ್ಲ. ಉಗ್ರ ಕೃತ್ಯದ ಸುಳಿವೂ ಇರಲಿಲ್ಲ. ಎಲ್ಲವನ್ನೂ ಸಂಶಸಯದಿಂದಲೇ ನೋಡುವ, ಜತನದಿಂದ ಹುಡುಕುವ, ಎಳೆಗಳನ್ನು ಎಳೆದಾಡುವ ಗುಪ್ತಚರ ಇಲಾಖೆ ಸಂಶಯದ ಹಿನ್ನೆಲೆಯಲ್ಲಿ ಕೆಲವು ಕಾಲ್‌ಗಳನ್ನು ಟ್ರ್ಯಾಕ್ ಮಾಡಿತ್ತು. ಅಲ್ಲಿಂದ ಸಣ್ಣ ಸಣ್ಣ ಎಳೆಗಳು ಸೇರಿ ಈ ದೊಡ್ಡ ಪಾತಕ ಕೃತ್ಯವನ್ನು ತಡೆಯಲು ಸಾಧ್ಯವಾಗಿದೆ.
ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಭಾಗದಲ್ಲಿ ರಾತ್ರಿಯ ಹೊತ್ತು ಒಂದೆರಡು ಮೊಬೈಲ್‌ಗಳು ಆಕ್ಟಿವ್ (Mobiles active in Parappana Agrahara Prison) ಆಗಿರುವ ಸಣ್ಣ ಸುಳಿವೊಂದು ಕೇಂದ್ರ ಗುಪ್ತಚರ ವಿಭಾಗಕ್ಕೆ ಸಿಕ್ಕಿತ್ತು. ಯಾರು ರಾತ್ರಿ ಎಲ್ಲ ಮಾತನಾಡುತ್ತಾರೆ, ಯಾರೊಂದಿಗೆ ಮಾತನಾಡುತ್ತಾರೆ, ಏನು ಮಾತನಾಡುತ್ತಾರೆ ಎನ್ನುವ ಕುತೂಹಲದೊಂದಿಗೆ ಇಲಾಖೆ ಕಣಕ್ಕೆ ಇಳಿದಿತ್ತು.
ಕೆಲವು ಮೊಬೈಲ್‌ಗಳನ್ನು ಗಮನಿಸಿದಾಗ ಹೆಚ್ಚಿನ ಸಂಶಯಗಳು ಉಳಿಯಲಿಲ್ಲ. ಆದರೆ, ಅದೊಂದು ಮೊಬೈಲ್ ಸಂಶಯಾಸ್ಪದವಾಗಿತ್ತು. ಹೀಗಾಗಿ ಆ ಒಂದು ಮೊಬೈಲನ್ನು ಇಂಟರ್ ಸೆಪ್ಷನ್ ಗೆ (Mobile interception) ಹಾಕಿತ್ತು ಹಾಕಿತ್ತು ಇಂಟೆಲಿಜೆನ್ಸ್ ಬ್ಯೂರೊ (Central Intelligence Bureau).
ಅದಕ್ಕೆ ಬರುತ್ತಿದ್ದ ಮತ್ತು ಅದರಿಂದ ಹೋಗುತ್ತಿದ್ದ ಎಲ್ಲ ಫೋನ್ ಕರೆಗಳನ್ನು ಅಧಿಕಾರಿಯೊಬ್ಬರು ಅತ್ಯಂತ ಜತನದಿಂದ ಕದ್ದಾಲಿಸುತ್ತಿದ್ದರು. ಇದು ಸಣ್ಣ ಅವಧಿಯ ಕದ್ದಾಲಿಸುವಿಕೆಯೇನಲ್ಲ, ಕಳೆದ ಮೂರು ತಿಂಗಳಿನಿಂದ ಈ ಕಾಯುವಿಕೆ ನಡೆದಿತ್ತು. ಆರಂಭದಲ್ಲಿ ಅಂಥ ದೊಡ್ಡ ಮಾಹಿತಿಯೇನೂ ಸಿಗಲಿಲ್ಲ. ಆದರೆ, ಕಳೆದ ಒಂದು ತಿಂಗಳ ಅವಧಿಯಲ್ಲಿ ನಿಗೂಢವಾದ ಕೋಡ್ ವರ್ಡ್‌ಗಳ ಬಳಕೆ ಜಾಸ್ತಿಯಾಗಿತ್ತು. ಹಾಗಾಗಿ ಐಬಿ ಫುಲ್ ಅಲರ್ಟ್ ಆಗಿತ್ತು.
ಹಾಗಿದ್ದರೆ ಮಾತನಾಡುತ್ತಿದುದು ಯಾರು?
ಹಾಗಿದ್ದರೆ ಪರಪ್ಪನ ಅಗ್ರಹಾರ ಜೈಲಿನ ಒಳಗೆ ಕುಳಿತು ಮಾತನಾಡುತ್ತಿದ್ದುದು ಯಾರು? ಅವನು ಮಾತನಾಡುತ್ತಿದ್ದುದು ಯಾರೊಂದಿಗೆ ಎನ್ನುವ ಕುತೂಹಲದಿಂದ ನೋಡಿದಾಗ ಕಂಡಿದ್ದು ಟಿ. ನಝೀರ್ ಮತ್ತು ಜುನೈದ್.
ಹೌದು, 2008ರಲ್ಲಿ ಬೆಂಗಳೂರಿನಲ್ಲಿ ಒಂಬತ್ತು ಕಡೆ ಸಂಭವಿಸಿದ ಬಾಂಬ್ ಸ್ಫೋಟಗಳ ರೂವಾರಿ ಲಷ್ಕರ್ ಉಗ್ರ ಟಿ. ನಝೀರ್ ಪರಪ್ಪನ ಅಗ್ರಹಾರದಲ್ಲಿ ಕುಳಿತು ಮಾತನಾಡುತ್ತಿದ್ದರೆ ಆ ಕಡೆಯಿಂದ ಇವನ ಆದೇಶಕ್ಕೆ ಹೂಂ ಎನ್ನುತ್ತಿದ್ದವನು ಜುನೈದ್. ಜುನೈದ್ ಎಂದರೆ 2017ರಲ್ಲಿ ನಡೆದ ನೂರ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿ, 2020ರಲ್ಲಿ ರಕ್ತ ಚಂದನ ಸಾಗಾಟ ಪ್ರಕರಣದಲ್ಲಿ ಸಿಕ್ಕಿಬಿದ್ದು ಜಾಮೀನು ಪಡೆದವನು. ಜಾಮೀನು ಪಡೆದ ಬಳಿಕ ಕಣ್ಮರೆಯಾದವನು. ಆತ ಜೈಲಿನೊಳಗೆ ಇರುವಾಗ ಟಿ. ನಝೀರ್ ಜತೆ ಸಂಪರ್ಕ ಹೊಂದಿ ಜೈಲಿನಿಂದ ಬಿಡುಗಡೆಯಾದ ಬಳಿಕ ಲಷ್ಕರ್ ಜತೆ ಸಂಪರ್ಕ ಸಾಧಿಸಿ ಅದರ ಏಜೆಂಟನಾಗಿದ್ದ.
ಹೀಗೆ ಜೈಲಿನಿಂದ ನಜೀರ್ ಮತ್ತು ಹೊರಗಿನಿಂದ ಜುನೈದ್ ಮಾತನಾಡುತ್ತಿರುವುದನ್ನು ಗಮನಿಸಿದ ಐಬಿ ಎಚ್ಚರಿಕೆಯ ಕಿವಿಯನ್ನು ಇಟ್ಟಿತ್ತು. ಒಂದು ತಿಂಗಳ ಹಿಂದೆ ಮಾತುಕತೆಗಳು ಒಂದು ನಿರ್ಣಾಯಕ ತಿರುವನ್ನು ಪಡೆಯುತ್ತಿರುವಂತೆ ಗುಪ್ತಚರ ಇಲಾಖೆಗೆ ಕಂಡಿತ್ತು.
ಆವತ್ತು ಅದೊಂದು ಉಪಕರಣದ ಡೆಲಿವರಿ ಬಗ್ಗೆ ಮಾಹಿತಿಯ ವಿನಿಮಯ ಆಗಿತ್ತು. ಆಗ ಅದು ಇನ್ನಷ್ಟು ಅಲರ್ಟ್ ಆಗಿತ್ತು. ಈ ಮಾಹಿತಿಗಳನ್ನು ರಾಜ್ಯದ ಗುಪ್ತಚರ ಇಲಾಖೆಯೊಂದಿಗೆ ಹಂಚಿಕೊಂಡು ದೊಡ್ಡ ಕಾರ್ಯಾಚರಣೆಗೆ ಪ್ಲ್ಯಾನ್ ಮಾಡಿತ್ತು. ಪ್ರತಿಯೊಂದು ಉಪಕರಣದ ಪೂರೈಕೆ ಮಾಹಿತಿ ಬಂದಾಗಲೆಲ್ಲ ಅಲರ್ಟ್ ಮಾಡುತ್ತಿತ್ತು. ಅದು ನಿಜವೇ ಎಂದು ಪರಿಶೀಲನೆ ನಡೆಸಲಾಗುತ್ತಿತ್ತು. ಅಲ್ಲಿ ನಡೆಯುವ ಮಾತುಕತೆ ಇಲ್ಲಿ ಸರಿಯಾಗಿ ಎಕ್ಸಿಕ್ಯೂಟ್ ಆಗುತ್ತಿರುವುದನ್ನು ಗಮನಿಸಿದ ಅಧಿಕಾರಿಗಳು ಇದೊಂದು ದೊಡ್ಡ ಮಟ್ಟದ ಉಗ್ರ ಕೃತ್ಯಕ್ಕೆ ನಡೆಯುತ್ತಿರುವ ಪ್ಲ್ಯಾನಿಂಗ್ ಎಂದು ಸ್ಪಷ್ಟಪಡಿಸಿಕೊಂಡರು. ಅಲ್ಲಿಂದ ಜಂಟಿ ಕಾರ್ಯಾಚರಣೆ ಇನ್ನಷ್ಟು ಬಿಗಿಗೊಂಡಿತು.
ಬೆಂಗಳೂರಿಗೆ ಬಂದಿದ್ದ ಅಪರಿಚಿತ ವ್ಯಕ್ತಿ
ವಿದೇಶದಲ್ಲಿರುವ ಜುನೈದ್ ಬೆಂಗಳೂರಿನಲ್ಲಿ ಉಪಕರಣ, ಕಚ್ಚಾ ವಸ್ತುಗಳನ್ನು ತಾನು ನಿಯಮಿಸಿದ ಶಂಕಿತ ಉಗ್ರರಿಗೆ ಪೂರೈಸಲು ಒಬ್ಬ ಅಪರಿಚಿತ ವ್ಯಕ್ತಿಯನ್ನು ನೇಮಕ ಮಾಡಿದ್ದ. ಈಗ ಬಂಧನದಲ್ಲಿರುವ ಐವರು ಶಂಕಿತ ಉಗ್ರನಿಗೆ ಅವನನ್ನು ಪರಿಚಯ ಮಾಡಿಸಿದ್ದ. ಈ ಪರಿಚಯ ಮಾಡಿಸುವ ಮೊದಲ ಭಾಗವಾಗಿ ಆತನ ಮೂಲಕ ಒಂದು ಪಾರ್ಸೆಲ್ ಕಳುಹಿಸಿಕೊಡಲಾಗಿತ್ತು. ಆತ ತಂದುಕೊಟ್ಟ ಕಪ್ಪು ಬಣ್ಣ ಪಾರ್ಸೆಲ್‌ನಲ್ಲಿ ಇದ್ದಿದ್ದು ಒಂದು ಪಿಸ್ತೂಲ್ ಮತ್ತು ಲೈವ್ ಬುಲೆಟ್ಸ್! ಇದನ್ನು ಒಬ್ಬ ಶಂಕಿತ ಉಗ್ರನ ಮನೆಯಲ್ಲಿ ಇಡಲಾಗಿತ್ತು.
ಜೂನ್ 29ರ ಆಸುಪಾಸಿನಲ್ಲಿ ವಾಕಿಟಾಕಿಗಳು ಬಂದಿದ್ದವು. ಜುಲೈ 11ರಂದು ಗ್ರೆನೇಡ್ ಗಳು ಪೂರೈಕೆ ಆಗಿತ್ತು. ಹೆಬ್ಬಾಳದಿಂದ ನೆಲಮಂಗಲ ಟೋಲ್ ಬಳಿಗೆ ಕಾರಿನಲ್ಲಿ ತೆರಳಿ ಗ್ರೆನೇಡ್‌ಗಳನ್ನು ಪಡೆಯಲಾಗಿತ್ತು. ಇದೇ ಅಪರಿಚಿತ ವ್ಯಕ್ತಿ ಗ್ರೆನೇಡನ್ನು ತಂದು ಬಂಧಿತ ಶಂಕಿತ ಉಗ್ರನಿಗೆ ನೀಡಿದ್ದ.
ಇಷ್ಟೆಲ್ಲ ಆಗುವ ಹೊತ್ತಿಗೆ ರಾಜ್ಯ ಗುಪ್ತಚರ ಇಲಾಖೆ ಇನ್ನಷ್ಟು ಅಲರ್ಟ್ ಆಯಿತು. ಕಳೆದ ಒಂದು ವಾರದಿಂದ ಒಬ್ಬೊಬ್ಬರ ಮನೆಗೇ ನಿಗಾ ಇಟ್ಟು ಕುಳಿತಿತ್ತು. ಹೀಗೆ ಒಂದು ಫೋನ್ ಕಾಲ್‌ನಿಂದ ಆರಂಭಗೊಂಡ ಬೇಟೆ ಐವರು ಉಗ್ರರನ್ನು ಬೇಟೆಯಾಡುವವರೆಗೆ ಬಂದು ನಿಂತಿತ್ತು.