Site icon Vistara News

Terrorists in Bengaluru : ಕಿರಾತಕ ಉಗ್ರರಿಗೆ ನೆಲೆ ಒದಗಿಸಿದ ಹಿಂದು ಮನೆ ಮಾಲಕಿ ಹೇಳುವುದೇನು?

Relatives of terrorists

ಬೆಂಗಳೂರು: ಮೊಹಮ್ಮದ್‌ ಸುಹೇಲ್‌ ನಮ್ಮ ಮನೆಗೆ ಬಂದಾಗ ಹೆಂಡತಿ ಮತ್ತು ತಾಯಿ ಇದ್ದಾರೆ ಎಂದು ಹೇಳಿದ್ದ. 5000 ರೂ. ಪಡೆದು ಬಾಡಿಗೆ ಮನೆ ಕೊಟ್ಟಿದ್ದೆ. ಅದು ಬಿಟ್ಟು ಅವರ ಬಗ್ಗೆ ಹೆಚ್ಚೇನೂ ಗೊತ್ತಿಲ್ಲ ಎಂದು ಹೇಳಿದ್ದಾರೆ ಸುಲ್ತಾನ್‌ ಪಾಳ್ಯದ ಮಸೀದಿ (Sultan Palya Mosque) ಸಮೀಪ ಐವರು ಶಂಕಿತ ಉಗ್ರರು (Suspected Terrorists) ವಾಸವಿದ್ದ ಮನೆಯ (Terrorists in Bengaluru) ಮಾಲಕಿ ಪದ್ಮಾವತಿ.

ಬೆಂಗಳೂರಿನಲ್ಲಿ ಬುಧವಾರ ಐವರು ಉಗ್ರರನ್ನು ಸಿಸಿಬಿ ಪೊಲೀಸರು (CCB Police) ಬಂಧಿಸಿದ್ದು, ಅವರು ವಾಸವಾಗಿರುವ ಮನೆಗಳ ಪರಿಸ್ಥಿತಿ ಹೇಗಿದೆ ಎಂಬ ಚಿತ್ರಣ ಇಲ್ಲಿದೆ.

ಬಾಡಿಗೆಗೆ ಮನೆ ಕೊಟ್ಟಿದ್ದ ಪದ್ಮಾವತಿ

ಪದ್ಮಾವತಿ ಅವರು ಕೆಲವು ಬಾಡಿಗೆ ಮನೆಗಳನ್ನು ಹೊಂದಿದ್ದು, ಅದರಿಂದ ಬರುವ ಬಾಡಿಗೆಯಿಂದಲೇ ಜೀವನ ಸಾಗಿಸುತ್ತಿದ್ದಾರೆ. ಈ ಮನೆಗೆ ಮೂರು ತಿಂಗಳ ಹಿಂದೆ ಬಾಡಿಗೆಗೆ ಬಂದಿದ್ದ ಮೊಹಮ್ಮದ್‌ ಸೊಹೈಲ್‌.

ಮೊದಲು 5000 ರೂ. ಕೊಟ್ಟವನು ನಂತರ ಬಾಡಿಗೆ ಕೊಟ್ಟಿರಲಿಲ್ಲ. ಹೀಗಾಗಿ, ಬಾಡಿಗೆ ಕೊಡದಿದ್ದರೆ ಮನೆ ಬಿಡುವಂತೆ ಹೇಳಿದ್ದೆ. ಬಾಡಿಗೆ ಕೊಡುವುದಾಗಿ ಹೇಳಿದ್ದ ಎಂದು ಹೇಳಿದ್ದಾರೆ ಪದ್ಮಾವತಿ.

ʻʻಮೊನ್ನೆ ಯಿಂದ ಪೊಲೀಸ್ರು ಬಂದು ಬಂದು ಹೋಗ್ತಾ ಇದ್ದರು. ಪೊಲೀಸರು ಬಂದಾಗ ಮನೆಯಲ್ಲಿ ಗನ್ ಇತ್ತು ಅಂತಾ ನನ್ನ ಮಗಳು ಹೇಳಿದ್ದಳು. ಇವನು ಪೇಟಿಂಗ್ ಕೆಲಸ ಮಾಡ್ತೇನೆ ಎಂದು ನಮಗೆ ಹೇಳಿದ್ದ. ಈಗ ನೋಡಿದರೆ ಪೊಲೀಸರು ಬರುತ್ತಿದ್ದಾರೆ ಅಂತ ನಾನು ಯೋಚಿಸಿದ್ದೆ. ಒಂದು ದಿನ ಪೊಲೀಸನನ್ನೇ ಕೇಳಿದೆ. ಏನಿದು ಅಂತ. ಆಗ ಅವರು ಕೂಡಾ ಹೆಚ್ಚೇನು ವಿವರ ಹೇಳಲಿಲ್ಲ. ನಿಮಗೆ ಅವನು ಪರಿಚಯವಾ ಎಂದು ಕೇಳಿದ್ದರು. ಇಲ್ಲ ಬಾಡಿಗೆಗೆ ಬಂದ ಮೇಲಷ್ಟೇ ಗೊತ್ತು ಎಂದು ಹೇಳಿದೆ. ಅವರು ನನ್ನ ಫೋನ್‌ ನಂಬರ್‌ ತೆಗೆದುಕೊಂಡು ಹೋದರು ʼʼ ಎಂದು ಪದ್ಮಾವತಿ ವಿವರಿಸಿದರು.

ನನ್ನ ಗಂಡ ನಿರಪರಾಧಿ, ಎಲ್ಲ ಜುನೇದ್‌ ಮಾಡಿದ್ದು ಅನ್ನುವ ಪತ್ನಿ

ಈ ನಡುವೆ, ಮನೆಯಲ್ಲಿರುವ ಉಗ್ರ ಸೊಹೈಲ್‌ನ ಪತ್ನಿ ʻನನ್ನ ಗಂಡ ನಿರಪರಾಧಿʼ ಎಂದು ಹೇಳುತ್ತಿದ್ದಾಳೆ. ಮಾಧ್ಯಮಗಳ ಜತೆ ಮಾತನಾಡಿದ ಆಕೆ, ಮೂರು ದಿನದ ಹಿಂದೆ ನನ್ನ ಗಂಡನನ್ನು ಅರೆಸ್ಟ್ ಮಾಡಿದ್ದಾರೆ. ನನ್ನ ಗಂಡ ವೆಲ್ಡಿಂಗ್ ಕೆಲಸ ಮಾಡುತ್ತಿದ್ದು, ಮೂರು ತಿಂಗಳಿನಿಂದ ಇಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದೇವೆ. ನನ್ನ ಗಂಡ ನಿರಪರಾಧಿ. ನಮ್ಮ ಮನೆಗೆ ಒಂದು ಪಾರ್ಸೆಲ್‌ ಬಂದಿದ್ದು ನಿಜ. ಅದು ಸೊಹೈಲ್‌ಗೆ ಸೇರಿದ್ದಲ್ಲ. ಜುನೇದ್‌ ಕಳುಹಿಸಿದ್ದು, ಅವನಿಗೇ ಸೇರಿದ್ದು. ಬೇರೆಯವರು ಮಾಡಿದ ತಪ್ಪನ್ನು ನನ್ನ ಪತಿಯ ಮೇಲೆ ಹಾಕಲಾಗುತ್ತಿದೆʼʼ ಎಂದು ಆಕೆ ಆರೋಪಿಸಿದ್ದಾರೆ.

ನನ್ನ ತಮ್ಮನನ್ನು ಉಮರ್‌ ಹಾಳು ಮಾಡಿದ

ಪ್ರಕರಣದ ಮತ್ತೊಬ್ಬ ಆರೋಪಿ ಭದ್ರಪ್ಪ ಲೇ ಔಟ್‌, ಕೊಡಿಗೆಹಳ್ಳಿಯ ನಿವಾಸಿ ಜಾಹಿದ್ ತಬ್ರೇಜ್ ಕುಟುಂಬಸ್ಥರು, ತಬ್ರೇಜ್‌ನನ್ನು ಹಾಳು ಮಾಡಿದ್ದು ಉಮರ್‌ (ಇನ್ನೊಬ್ಬ ಆರೋಪಿ ಮಹಮ್ಮದ್‌ ಉಮರ್)‌ ಎಂದು ಆರೋಪಿಸುತ್ತಾರೆ.

2017ರಲ್ಲಿ ನನ್ನ ತಮ್ಮ ಒಂದು ಮರ್ಡರ್‌ ಕೇಸ್‌ನಲ್ಲಿ ಸಿಕ್ಕಿಬಿದ್ದಿದ್ದ. ಅದಾದ ನಂತರ ಸುಧಾರಿಸಿದ್ದ. ಆದರೆ, ಉಮರ್ ನನ್ನ ತಮ್ಮನ್ನು ಮುಂಬೈಗೆ ಕರೆದುಕೊಂಡು ಹೋಗಿ ಹಾಳು ಮಾಡಿದ್ದಾನೆʼʼ ಎಂದು ತಬ್ರೇಜ್‌ ಅಣ್ಣ ಆರೋಪಿಸಿದ್ದಾರೆ.

ʻʻತಬ್ರೇಜ್‌ ದಿನವೂ ಕೆಲಸಕ್ಕೆ ಹೋಗುತ್ತಿದ್ದ. ಜಿಮ್‌ಗೆ ಹೋಗಿ ಮನೆಗೆ ಬರ್ತಾ ಇದ್ದ. ಭಾನುವಾರ ಬೆಳಗ್ಗೆ 6 ಗಂಟೆಗೆ ಪೊಲೀಸರು ಮನೆಗೆ ನುಗ್ಗಿದರು. ಬ್ಯಾಗ್ ನಲ್ಲಿ ಎಲ್ಲವನ್ನೂ ತುಂಬಿಕೊಂಡು ಹೋಗಿದ್ದಾರೆ. ಈಗ ಟೆರೆರಿಸ್ಟ್ ಅಂತೆಲ್ಲ ತೋರಿಸ್ತಾ ಇದ್ದಾರೆʼʼ ಎಂದು ಕಣ್ಣೀರು ಹಾಕಿದರು ತಬ್ರೇಜ್ ಅಣ್ಣ‌. ಎಲ್ಲದಕ್ಕೂ ಉಮರ್‌ ಕಾರಣ ಎನ್ನುವುದು ತಬ್ರೇಜ್‌ ಅಣ್ಣನ ಮಾತು.

ಟಿವಿಯಲ್ಲಿ ನೋಡಿಯೇ ನಮಗೆ ವಿಷಯ ಗೊತ್ತಾಯಿತು

ಐದನೇ ಆರೋಪಿಯಾಗಿ ಗುರುತಿಸಲ್ಪಟ್ಟಿರುವ ಜಾಹೀದ್‌ನ ಮನೆ ಇರುವುದು ಬೆಂಗಳೂರಿನ ಭದ್ರಪ್ಪ ಲೇಔಟ್. ಜಾಹೀದ್‌ ಇಲ್ಲಿ ಕಳೆದ 5 ವರ್ಷದಿಂದ ಕುಟುಂಬ ಸಮೇತ ವಾಸವಾಗಿದ್ದಾನೆ. ʻʻಜಾಹೀದ್‌ ಟಾಟಾ ಕಂಪನಿಯಲ್ಲಿ ಅಲ್ಯೂಮಿನಿಯಂ ಕೆಲಸ ಮಾಡುತ್ತಿದ್ದ. ಭಾನುವಾರ ಬಂದು ಪೊಲೀಸರು ಕರೆದುಕೊಂಡು ಹೋಗಿದ್ದಾರೆ. ನಮಗೆ ಯಾವುದೇ ಮಾಹಿತಿ ಇಲ್ಲ. ಟಿವಿಯಲ್ಲಿ ನೋಡಿದಾಗ ನಮ್ಮ ಗಮನಕ್ಕೆ ಬಂದಿದೆʼʼ ಎಂದು ಮನೆಯವರು ಹೇಳಿದ್ದಾರೆ.

ಮನೆ ಖಾಲಿ ಮಾಡಿದ ಉಮರ್‌ ಪೋಷಕರು

ಪ್ರಕರಣದಲ್ಲಿ ನಾಲ್ಕನೇ ಆರೋಪಿ ಎಂದು ಗುರುತಿಸಲಾಗಿರುವ ಮಹಮ್ಮದ್‌ ಉಮರ್‌ನ ಮನೆ ಇರುವುದು ಕೊಡಿಗೆಹಳ್ಳಿಯ ದೇವಿ ನಗರದಲ್ಲಿ. 2017ರ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಅವನಿಗೆ ಐದು ತಿಂಗಳ ಹಿಂದಷ್ಟೇ ಮದುವೆಯಾಗಿತ್ತು.

ಶುಕ್ರವಾರ ರಾತ್ರಿ 9 ಗಂಟೆಗೆ ಪೊಲೀಸರು ಉಮರ್‌ ಮನೆ ಹೊಕ್ಕಿದ್ದರು. ರಾತ್ರಿ ಇಡೀ ಶೋಧ ನಡೆಸಿ ಶನಿವಾರ ಬೆಳಗ್ಗೆ 6 ಗಂಟೆಗೆ ಉಮ್ಮರ್ ನನ್ನ ಕರೆದುಕೊಂಡು ಹೋಗಿದ್ದಾರೆ.

ಉಮ್ಮರ್ ತಂದೆ ಜನರಲ್ ಸ್ಟೋರ್ ನಡೆಸುತ್ತಿದ್ದು, ಉಮರ್‌ಗೆ ಸ್ವಂತ ಮನೆ ಇದೆ. ಉಮರ್‌ ಬಂಧನದ ನಂತರ ಪೋಷಕರು ಮನೆ ಖಾಲಿ ಮಾಡಿ ಹೋಗಿದ್ದಾರೆ.

A-7 ಆರೋಪಿ ಮನೆ ಖಾಲಿ

ಪ್ರಕರಣದ ಏಳನೇ ಆರೋಪಿಯಾಗಿರುವ ಮೊಹಮ್ಮದ್ ಫೈಝಲ್ ರಬ್ಬಾನಿ ಮನೆಗೆ ಬೀಗ ಹಾಕಲಾಗಿದೆ. ಸ್ಪೆನ್ಸರ್ ರೋಡ್ ನಲ್ಲಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿರುವ ಫೈಜಲ್ ರಬ್ಬಾನಿ ಕುಟುಂಬವೂ ಈಗ ಅಲ್ಲಿಲ್ಲ.

ನರಮೇಧಕ್ಕೆ ಸಂಚು ಹೂಡಿದ್ದ ರಕ್ಕಸರು ಇವರು

ಆರೋಪಿ ನಂ. 1 : ಟಿ-ನಜೀರ್‌, ಬೆಂಗಳೂರು ಸರಣಿ ಸ್ಫೋಟ ರೂವಾರಿ (10 ವರ್ಷದಿಂದ ಪರಪ್ಪನ ಅಗ್ರಹಾರದಲ್ಲಿದ್ದಾನೆ)
ಆರೋಪಿ ನಂ. 2 : ಜುನೈದ್, 2017ರ ನೂರ್‌ ಅಹಮದ್‌ ಕೊಲೆ ಆರೋಪಿ, ಜಾಮೀನು ಪಡೆದು ವಿದೇಶದಲ್ಲಿದ್ದಾನೆ. ಶಂಕಿತ ಉಗ್ರರಿಗೆ ಫಂಡಿಂಗ್‌ ಮಾಡುತ್ತಿದ್ದಾನೆ.
ಆರೋಪಿ ನಂ. 3: ಸೈಯ್ಯದ್ ಸುಹೇಲ್‌ ಖಾನ್‌, ಬಂಧಿತ ಶಂಕಿತ ಉಗ್ರ, ವಿಳಾಸ: #428, ಎರಡನೇ ಫ್ಲೋರ್‌, 2ನೇ ಕ್ರಾಸ್‌, ಮುಕ್ರಮ್‌ ಮಸೀದಿ ಸಮೀಪ, ಸುಲ್ತಾನ ಪಾಳ್ಯ ಮುಖ್ಯ ರಸ್ತೆ, ಆರ್‌ಟಿ ನಗರ
ಆರೋಪಿ ನಂ. 4: ಮಹಮ್ಮದ್ ಉಮ್ಮರ್, ಬಂಧಿತ ಶಂಕಿತ ಉಗ್ರ, ವಿಳಾಸ: # 141, 12ನೇ ಕ್ರಾಸ್ದೇ ದೇವಿ ನಗರ, ಕೊಡಿಗೆಹಳ್ಳಿ
ಆರೋಪಿ ನಂ. 5: ಜಾಹಿದ್ ತಬ್ರೈಜ್‌, ಬಂಧಿತ ಶಂಕಿತ ಉಗ್ರ, ವಿಳಾಸ: #30,4ನೇ ಮುಖ್ಯರಸ್ತೆ, ಭದ್ರಪ್ಪ ಲೇ ಔಟ್‌, ಕೊಡಿಗೆಹಳ್ಳಿ
ಆರೋಪಿ ನಂ. 6: ಸೈಯ್ಯದ್ ಮುದಾಸ್ಸಿರ್‌ ಪಾಷಾ, ಬಂಧಿತ ಶಂಕಿತ ಉಗ್ರ, ಫ್ಲ್ಯಾಟ್‌ ನಂಬರ್ 1, ಆಮ್ರನ್‌ ಎನ್‌‌ಕ್ಲೋವ್‌ ಆಪಾರ್ಟ್‌ಮೆಂಟ್, ಮೂರನೇ ಕ್ರಾಸ್‌, ದಿಣ್ಣೂರ್‌ ಮೈನ್‌ ರೋಡ್ ಆರ್‌ಟಿ ನಗರ
ಆರೋಪಿ ನಂ. 7: ಮಹಮ್ಮದ್‌ ಫೈಜಲ್‌, ಬಂಧಿತ ಶಂಕಿತ ಉಗ್ರ, ವಿಳಾಸ: # 208, ಅಜಿಜಿಯಾ ಎನ್‌‌ಕ್ಲೇವ್‌, ಪುಲಕೇಶಿ ನಗರ ಬೆಂಗಳೂರು

ಆರೋಪಿಗಳ ಮೇಲೆ ಹಾಕಿರುವ ಸೆಕ್ಷನ್‌ಗಳು ಯಾವುದು..?

ಐವರು ಬಂಧಿತ ಶಂಕಿತ ಉಗ್ರರ ಮೇಲೆ ಯುಎಪಿಎ ಅಡಿ ಪ್ರಕರಣ ದಾಖಲು
ಶಸ್ತಾಸ್ತ್ರ ಕಾಯ್ದೆ, ಐಪಿಸಿ 121 ಎ, 120 ಬಿ, 121-112 ಅಡಿ ಪ್ರಕರಣ ದಾಖಲು

ಇದನ್ನೂ ಓದಿ: Terrorists in Bengaluru : 2 ದಿನ ತಡವಾಗಿದ್ದರೂ ಬೆಂಗಳೂರಿನಲ್ಲಿ ನಡೀತಿತ್ತು BIG BLAST; ಪರಮೇಶ್ವರ್ ಹೇಳಿದ್ದೇನು?

Exit mobile version