ಬೆಂಗಳೂರು: ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಆರೋಪದಲ್ಲಿ ಬಂಧಿತರಾಗಿದ್ದ (Terrorists punished) ಮೂವರು ಉಗ್ರರಿಗೆ ಎನ್‌ಐಎ ವಿಶೇಷ ಕೋರ್ಟ್ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ. ಪಾಕಿಸ್ತಾನ ಮೂಲದ ಸೈಯದ್ ಅಬ್ದುಲ್ ರೆಹಮಾನ್, ಮೊಹಮ್ಮದ್ ಫಹಾದ್ ಅಲಿಯಾಸ್ ಕೋಯಾ ಮತ್ತು ಭಾರತದವನೇ ಅದ ಅಫ್ಸರ್ ಪಾಶಾ ಅವರಿಗೆ ಕೋರ್ಟ್ ಶಿಕ್ಷೆ ವಿಧಿಸಿದೆ.
ಈ ಉಗ್ರರು ಲಷ್ಕರೆ ತಯ್ಬಾ ಸಂಘಟನೆಯಲ್ಲಿ ತರಬೇತಿ ಪಡೆದು, 2006ರಲ್ಲಿ ಭಾರತದ ಕೋಲ್ಕೊತಾ ಮೂಲಕ ಅಕ್ರಮವಾಗಿ ಪ್ರವೇಶಿಸಿ, ಮೈಸೂರಿನಲ್ಲಿ ತಂಗಿದ್ದರು. ಹೀಗೆ ತಂಗಿದ್ದ ಉಗ್ರರು ಕೆಲ ಅಪರಾಧ ಕೃತ್ಯದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಜೈಲು ಸೇರಿದ್ದರು. ಜೈಲಿನಲ್ಲಿದ್ದುಕೊಂಡೇ ಬೆಂಗಳೂರಿನ ಪ್ರತಿಷ್ಠಿತ ಕಟ್ಟಡಗಳ ಸ್ಫೋಟಕ್ಕೆ ಸ್ಕೆಚ್ ರೂಪಿಸಿದ್ದರು.
ಆದರೆ ಈ ಬಗ್ಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಅಂದಿನ ಭಯೋತ್ಪಾದಕ ನಿಗ್ರಹ ದಳದಲ್ಲಿದ್ದ ಇನ್ಸ್‌ಪೆಕ್ಟರ್ ಛಲಪತಿ ಹಾಗೂ ಅವರ ತಂಡ ತನಿಖೆ ಕೈಗೊಂಡಿದ್ದರು. ಈ ವೇಳೆ ಎಲ್ಇಟಿ ತರಬೇತಿ ಪಡೆದು ಪಾಕಿಸ್ತಾನದಿಂದ ಭಾರತಕ್ಕೆ ಅಕ್ರಮವಾಗಿ ನುಸುಳಿದ್ದರು ಎಂಬ ಮಾಹಿತಿ ತಿಳಿದು ಬಂದಿತ್ತು.
ರಾಜ್ಯದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಸಜ್ಜಾಗಿದ್ದ ಇವರನ್ನು ಭಯೋತ್ಪದನ ನಿಗ್ರಹ ದಳ ಬಂಧಿಸಿ, ಆರೋಪಿಗಳ ವಿರುದ್ಧ ತನಿಖೆ ನಡೆಸಿ ಕೋರ್ಟ್‌ಗೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಆ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯ 11 ವರ್ಷದ ಬಳಿಕ ಮೂವರು ಉಗ್ರರಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿದೆ.
ತನಿಖೆ ವೇಳೆ ಫಹಾದ್‌ಗೆ ವಿದೇಶಗಳಿಂದ ಉಗ್ರ ಚಟುವಟಿಕೆಗಳಿಗೆ ಹಣ ಬರುತ್ತಿರುವುದು ಬೆಳಕಿಗೆ ಬಂದಿತ್ತು. ಆತ ವಿಕಾಸ ಸೌಧ, ಹೈಕೋರ್ಟ್ ಸೇರಿದಂತೆ ಸರ್ಕಾರಿ ಕಟ್ಟಡಗಳನ್ನು ಧ್ವಂಸ ಮಾಡಲು ಪ್ಲಾನ್ ಮಾಡಿದ್ದ. ಜತೆಗೆ ಎತ್ತರದ ಕಟ್ಟಡಗಳ ಮೇಲೆ ವೈಮಾನಿಕ ದಾಳಿ ಮಾಡಿ ಧ್ವಂಸಗೊಳಿಸಲು ಪೈಲಟ್ ತರಬೇತಿಯನ್ನೂ ಪಡೆದಿದ್ದಾಗಿಯೂ ಬೆಳಕಿಗೆ ಬಂದಿತ್ತು.
ಈ ಬಗ್ಗೆ ಸರಿ ಸುಮಾರು 5 ತಿಂಗಳ ಕಾಲ ಸುಧೀರ್ಘ ತನಿಖೆ ನಡೆಸಿದ್ದ ತನಿಖಾಧಿಕಾರಿ ಛಲಪತಿ ಅವರು ಕೋರ್ಟ್‌ಗೆ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿದರು. ಈ ಬಗ್ಗೆ ವಿಚಾರಣೆ ಆರಂಭಿಸಿದ್ದ ನ್ಯಾಯಾಲಯ ತನಿಖಾಧಿಕಾರಿಗಳು ಆರೋಪಿಸಿ ಸಲ್ಲಿಸಿದ್ದ ಸಾಕ್ಷಿಗಳು ಸಾಬೀತಾದ ಹಿನ್ನೆಲೆ ಮೂವರು ಆರೋಪಿಗಳಾದ ಸೈಯದ್ ಅಬ್ದುಲ್ ರೆಹಮಾನ್, ಫಹಾದ್ ಹಾಗೂ ಅಫ್ಸರ್ ಪಾಷಾಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶಿಸಿದೆ.
ಇದನ್ನೂ ಓದಿ: Bengaluru Theft Case: ಮನೆ ಮಾಲೀಕನಿಗೆ ಊಟದಲ್ಲಿ ಅಮಲು ಔಷಧಿ ಬೆರೆಸಿ ಚಿನ್ನಾಭರಣ ಕಳ್ಳತನ; ನೇಪಾಳಿ ಗ್ಯಾಂಗ್ ಅರೆಸ್ಟ್
ಭಯೋತ್ಪಾದನ ನಿಗ್ರಹ ದಳ ಪರ ಸರ್ಕಾರಿ ವಕೀಲ ರವೀಂದ್ರ ಅವರು ವಾದ ಮಂಡಿಸಿದರು. ಸದ್ಯ ಶಿಕ್ಷೆಗೆ ಗುರಿಯಾಗಿರುವ ಉಗ್ರರನ್ನು ಒಂದೇ ಕಡೆ ಬಿಟ್ಟರೆ ಮತ್ತೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಬಹುದು ಎಂಬ ಕಾರಣಕ್ಕೆ ಮೂವರನ್ನು ಪ್ರತ್ಯೇಕವಾಗಿ ಬೆಂಗಳೂರು, ಧಾರವಾಡ, ಕಲಬುರಗಿ ಜೈಲಿನಲ್ಲಿ ಇರಿಸಲಾಗುತ್ತಿದೆ.
ರಾಜ್ಯದ ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ