ಬೆಂಗಳೂರು : ಪಠ್ಯ ಪರಿಷ್ಕರಣೆ ವಿರೋಧಿಸಿ ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಮಾವೇಶ ನಡೆಯುತ್ತಿದೆ. ಸಮಾವೇಶದಲ್ಲಿ ಭಾಗಿಯಾಗಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪಠ್ಯ ಪುಸ್ತಕವನ್ನು ಹರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಡಿ.ಕೆ ಶಿವಕುಮಾರ್ ರಾಜ್ಯ ಸರ್ಕಾರದ ಪಠ್ಯ ಪರಿಷ್ಕರಣೆ ವಿರುದ್ಧ ಕಿಡಿಕಾರಿದ್ದಾರೆ. ಬಳಿಕ ಎಲ್ಲರ ಸಮ್ಮುಖದಲ್ಲಿ ಪರಿಷ್ಕರಣೆಯಾಗಿರುವ ಪಠ್ಯ ಪುಸ್ತಕವನ್ನು ಹರಿದು ಹಾಕಿದ್ದಾರೆ. ನನಗೆ ಈ ಹೊಸ ಪಠ್ಯವನ್ನು ಸುಡೋದಕ್ಕೆ ಇಷ್ಟವಿಲ್ಲ. ಹೀಗಾಗಿ ಇದನ್ನು ನಿಮ್ಮೆಲ್ಲರ ಸಮ್ಮುಖದಲ್ಲೇ ಹರಿದು ಹಾಕುತ್ತಿದ್ದೇನೆ ಎಂದು ಹೇಳಿ ಪಠ್ಯ ಪುಸ್ತಕವನ್ನು ಹರಿದು ಸರ್ಕಾರದ ವಿರುದ್ಧ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ಇದನ್ನು ಓದಿ| Textbook protest | ಪಠ್ಯಪುಸ್ತಕ ಪರಿಷ್ಕರಣೆ ವಿರುದ್ಧ ಬೆಂಗಳೂರಲ್ಲಿ ಬೃಹತ್ ಪ್ರತಿಭಟನೆ, ಟ್ರಾಫಿಕ್ ಜಾಮ್
ಮುಖ್ಯಮಂತ್ರಿಗಳೇ ಬಂದು ನಮ್ಮ ಹಕ್ಕೊತ್ತಾಯದ ಮನವಿ ಪಡೆಯಬೇಕು. ದೇವೇಗೌಡರಿಂದ ಮನವಿ ಪಡೆಯಬೇಕು. ರೋಹಿತ್ ಚಕ್ರತೀರ್ಥ ಮೇಲೆ ನಾಡದ್ರೋಹ, ದೇಶದ್ರೋಹ ಕೇಸ್ ದಾಖಲಿಸಬೇಕು. ಶಿಕ್ಷಣ ಸಚಿವ ನಾಗೇಶ್ರನ್ನು ವಜಾಗೊಳಿಸಬೇಕು. ರೋಹಿತ್ ಸಮಿತಿ ರಚಿಸಿದ ಪಠ್ಯ ಪುಸ್ತಕವನ್ನು ವಾಪಸ್ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಇನ್ನು ಇದೇ ಕಾರ್ಯಕ್ರಮದಲ್ಲಿ ಪ್ರತಿಭಟನಾಕಾರರು ಆರ್ಎಸ್ಎಸ್ ಚಡ್ಡಿ ಸುಡುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪೊಲೀಸರು ಈ ವೇಳೆ ತಡೆಯಲು ಬಂದರೆ ಆರ್ಎಸ್ಎಸ್ನವರ ಚಡ್ಡಿ ರಕ್ಷಣೆ ಮಾಡಲು ಬರ್ತಿದ್ದೀರಾ ಎಂದು ವಾಗ್ದಾಳಿ ನಡೆಸಿದ್ದಾರೆ. ಬಳಿಕ ಪೊಲೀಸರನ್ನು ತಳ್ಳಿ ಬದಿಗೆ ಸರಿಸಿ ಚಡ್ಡಿ ಸುಟ್ಟು ಬಿಜೆಪಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇದೇ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆಯನ್ನು ವರದಿ ಮಾಡಲು ಬಂದಿದ್ದ ಖಾಸಗಿ ಮಾಧ್ಯಮದ ಕ್ಯಾಮೆರಮ್ಯಾನ್ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ರಣಧೀರ ಪಡೆಯ ರಾಜ್ಯಾಧ್ಯಕ್ಷ ಹರೀಶ್ ಭೈರಪ್ಪ ನಿಮ್ಮದು ಆರ್ಎಸ್ಎಸ್ ಚಾನೆಲ್. ಯಾಕಿಲ್ಲಿ ಬಂದಿದ್ದೀಯಾ ಎಂದು ರಸ್ತೆಯಲ್ಲೆಲ್ಲಾ ಅಟ್ಟಾಡಿಸಿ ಬಟ್ಟೆ ಹರಿದು ಹಲ್ಲೆ ಮಾಡಿದ್ದಾರೆ. ಪೊಲೀಸರಿದ್ದರೂ ಹಲ್ಲೆ ನಡೆಸಿ ಆರ್ಎಸ್ಎಸ್ಗೆ ಧಿಕ್ಕಾರ ಎಂದು ಕೂಗಿದ್ದಾರೆ.