Site icon Vistara News

ಹಾಕಿರುವ ತೇಪೆಗಿಂತ ಉಳಿದಿರುವ ತೂತುಗಳೇ ಹೆಚ್ಚು: ಪಠ್ಯ ಪರಿಷ್ಕರಣೆ ಕುರಿತು ಸಿದ್ದರಾಮಯ್ಯ ಟೀಕೆ

siddaramaiah

ಬೆಂಗಳೂರು: ಪರಿಷ್ಕೃತ ಪಠ್ಯಪುಸ್ತಕದಲ್ಲಿನ ತಪ್ಪುಗಳನ್ನು ಶಿಕ್ಷಣ ಇಲಾಖೆಯೇ ಸರಿಪಡಿಸಿ, ತಿದ್ದೋಲೆ ಹೊರಡಿಸಲು ಮುಂದಾಗಿರುವುದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡುವುದೊಂದೇ ಈ ವಿವಾದಕ್ಕೆ ಪರಿಹಾರ ಎಂದು ಟ್ವೀಟ್‌ ಮಾಡಿದ್ದಾರೆ. ಸದ್ಯ ತೇಪೆ ಹಾಕಲು ಮುಂದಾಗಿರುವುದಕ್ಕಿಂತಲೂ ಹೆಚ್ಚಿನ ತಪ್ಪುಗಳು ಉಳಿದಿವೆ ಎಂದಿದ್ದಾರೆ.

ಪರಿಷ್ಕೃತ ಪಠ್ಯಪುಸ್ತಕದ ಬಗೆಗಿನ ವಿವಾದವನ್ನು ಸರ್ಕಾರ ಪ್ರತಿಷ್ಠೆಯಾಗಿ ಸ್ವೀಕರಿಸದೆ ವಿದ್ಯಾರ್ಥಿಗಳ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಬೇಕು. ವಿವಾದವನ್ನು ಬೆಳೆಸದೆ ಹೊಸ ಪಠ್ಯವನ್ನು ವಾಪಸು ಪಡೆದು ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಹಳೆಯ ಪಠ್ಯವನ್ನು ಬೋಧಿಸಲು ಆದೇಶ ನೀಡಬೇಕೆಂದು ಅವರು ಆಗ್ರಹಿಸಿದ್ದಾರೆ.

ಇದನ್ನೂ ಓದಿ | ಪಠ್ಯ ಪರಿಷ್ಕರಣೆ ಎಡವಟ್ಟಿಗೆ 8 ಕಡೆ ತೇಪೆ: ಮಕ್ಕಳು ಎರಡೆರಡು ಪುಸ್ತಕ ಓದುವ ತೊಂದರೆ

ಪರಿಷ್ಕೃತ ಪಠ್ಯದಲ್ಲಿರುವುದು ಬೆರಳೆಣಿಕೆಯ ತಪ್ಪುಗಳಲ್ಲ, ಅದರ ಪುಟ-ಪುಟಗಳಲ್ಲಿಯೂ ತಪ್ಪುಗಳಿರುವುದನ್ನು ನಾಡಿನ ಅನೇಕ ಶಿಕ್ಷಣ ತಜ್ಞರು ವಿವರವಾಗಿ ಪಟ್ಟಿಮಾಡಿ ಸರ್ಕಾರದ ಗಮನಕ್ಕೆ ತಂದಿದ್ದಾರೆ. ಹೀಗಿದ್ದರೂ ದೋಷಪೂರ್ಣ ಪಠ್ಯವನ್ನು ಸಮರ್ಥಿಸಲು ಹೊರಟಿರುವುದು ಸರ್ಕಾರದ ಉದ್ದಟತನವನ್ನಷ್ಟೇ ತೋರಿಸುತ್ತದೆ ಎಂದು ಟೀಕಿಸಿರುವ ಅವರು, ರಾಜ್ಯ ಸರ್ಕಾರದ ಆದೇಶ ಇಲ್ಲದೆ ರಚನೆಗೊಂಡ ರೋಹಿತ ಚಕ್ರತೀರ್ಥ ಎಂಬ ಬುದ್ಧಿಗೇಡಿಯ ಅಧ್ಯಕ್ಷತೆಯ ಸಮಿತಿಯೇ ಅಕ್ರಮವಾಗಿರುವಾಗ, ಆ ಸಮಿತಿ ಪರಿಷ್ಕೃರಿಸಿರುವ ಪಠ್ಯ ಹೇಗೆ ಕ್ರಮಬದ್ಧವಾಗಲು ಸಾಧ್ಯ? ಎಂದು ಪ್ರಶ್ನಿಸಿದ್ದಾರೆ.

ಪರಿಷ್ಕೃತ ಪಠ್ಯಕ್ಕೆ ವಿರೋಧ ವ್ಯಕ್ತವಾದ ನಂತರ ರಾಜ್ಯ ಸರ್ಕಾರ ದಿನಕ್ಕೊಂದು ಹೇಳಿಕೆ ನೀಡಿ ತನ್ನ ತಪ್ಪನ್ನು ಮುಚ್ಚಿಕೊಳ್ಳುವ ಪ್ರಯತ್ನ ಮಾಡುತ್ತಿದೆ. ಪಠ್ಯ ಪರಿಷ್ಕರಣೆಗೆ ರಚನೆಗೊಂಡ ಸಮಿತಿಯನ್ನೇ ರದ್ದುಗೊಳಿಸಿದ ನಂತರ ಅದರ ಶಿಫಾರಸಿನ ಪಠ್ಯ ಕೂಡಾ ರದ್ದಿಗೆ ಸೇರಬೇಕಲ್ಲವೇ? ಎಂದು ಕುಟುಕಿರುವ ಸಿದ್ದರಾಮಯ್ಯ, ಪರಿಷ್ಕೃತ ಪಠ್ಯಗಳಲ್ಲಿನ ಕೆಲವು ತಪ್ಪುಗಳನ್ನು ಸರಿಪಡಿಸಿ ಕಳೆದುಹೋದ ಮಾನ ಕಾಪಾಡುವ ವ್ಯರ್ಥ ಪ್ರಯತ್ನವನ್ನು ರಾಜ್ಯ ಸರ್ಕಾರ ಮಾಡಲು ಮುಂದಾಗಿದೆ. ಹಾಕಿರುವ ತೇಪೆಗಳಿಗಿಂತ ಉಳಿದಿರುವ ತೂತುಗಳೇ ಹೆಚ್ಚಾಗಿವೆ. ಹೊಸ ಪಠ್ಯವನ್ನು ರದ್ದುಪಡಿಸಿ ಹಳೆಯ ಪಠ್ಯವನ್ನೇ ಮುಂದುವರಿಸುವುದೊಂದೇ ಈಗ ಉಳಿದಿರುವ ದಾರಿ ಎಂದಿದ್ದಾರೆ.

ಇದನ್ನೂ ಓದಿ| Text book | ಪಠ್ಯ ಪುಸ್ತಕ ಪರಿಷ್ಕರಣೆ ಎಡವಟ್ಟು ತಿದ್ದಲಿದೆ ಶಿಕ್ಷಣ ಇಲಾಖೆ!

Exit mobile version