ಬೆಂಗಳೂರು : ರಾಜ್ಯದಲ್ಲಿ ಪಠ್ಯ ಪರಿಷ್ಕರಣೆ ವಿವಾದ ಮುಂದುವರಿದಿದೆ. ಪಠ್ಯ ಪರಿಷ್ಕರಣೆ ವಿಚಾರವಾಗಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಅವರು ಪತ್ರ ಬರೆದ ಹಿನ್ನೆಲೆಯಲ್ಲಿ ಇಂದು (ಬುಧವಾರ) ಸಿಎಂ ಬಸವರಾಜ ಬೊಮ್ಮಾಯಿ ಸಭೆ ನಡೆಸಲಿದ್ದಾರೆ.
ಸಭೆಯಲ್ಲಿ ಶಿಕ್ಷಣ ಸಚಿವ ಬಿ.ಸಿ ನಾಗೇಶ್, ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಭಾಗಿಯಾಗಲಿದ್ದಾರೆ. ಕಳೆದ ಕೆಲ ದಿನಗಳಿಂದ ರಾಜ್ಯದ ಹಲವು ಕಡೆ ಪಠ್ಯ ಪರಿಷ್ಕರಣೆ ವಿರುದ್ದವಾಗಿ ಪ್ರತಿಭಟನೆಗಳು ನಡೆಯುತ್ತಿದೆ. ಇತ್ತೀಚಿಗಷ್ಟೇ ಬೆಂಗಳೂರಿನಲ್ಲೂ ಸಹ ಸಾಹಿತಿಗಳೆಲ್ಲರೂ ಸೇರಿ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಿದ್ದರು. ರೋಹಿತ್ ಚಕ್ರತೀರ್ಥ ಸಮಿತಿ ಪರಿಷ್ಕರಣೆ ಮಾಡಿದ್ದ ಪಠ್ಯವನ್ನು ಹಿಂಪಡೆಯುವಂತೆ ಒತ್ತಾಯ ಮಾಡಿದ್ದರು.
ಇದನ್ನು ಓದಿ| ಪಠ್ಯ ಪರಿಷ್ಕರಣೆಗೆ ವಿರೋಧ: ಫ್ರೀಡಂ ಪಾರ್ಕ್ ಸಮಾವೇಶದಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಡಿಕೆಶಿ ಭಾಗಿ
ಸದ್ಯ ಈ ಎಲ್ಲಾ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಇಂದು (ಬುಧವಾರ) ಸಿಎಂ ಮಹತ್ವದ ಸಭೆ ನಡೆಸಲಿದ್ದು, ಪಠ್ಯ ಪರಿಷ್ಕರಣೆ ವಿಚಾರವಾಗಿ ಚರ್ಚೆ ನಡೆಸಲಿದ್ದಾರೆ. ಸಭೆಯಲ್ಲಿ ಪ್ರಮುಖವಾಗಿ ಕಳೆದ ವರ್ಷದ ಪಠ್ಯ ಮುಂದುವರಿಸಬೇಕಾ ಅಥವಾ ಹೊಸ ಪಠ್ಯ ಪರಿಷ್ಕರಣೆ ಮಾಡಿರುವ ಪಠ್ಯ ಮುಂದುವರರಿಸಬೇಕಾ ಅನ್ನೋ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ.
ಕಳೆದ ಒಂದು ತಿಂಗಳಿನಿಂದ ಮಕ್ಕಳಿಗೆ ಕಲಿಕಾ ಚಟುವಟಿಕೆ ತರಗತಿಗಳು ಮಾತ್ರ ನಡೆದಿವೆ. ಇನ್ನು ಪಾಠ ಶುರು ಮಾಡಲಾಗಿಲ್ಲ. ಹೀಗಾಗಿ ಪಠ್ಯ ಪರಿಷ್ಕರಣೆ ಕುರಿತು ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಪರಿಷ್ಕೃತ ಪಠ್ಯದಲ್ಲಿ ಅಂಬೇಡ್ಕರ್, ಬಸವಣ್ಣ ಸೇರಿ ಹಲವರಿಗೆ ಅಪಮಾನ ಮಾಡಲಾಗಿದೆ. ಹಾಗಾಗಿ ಹಳೆ ಪಠ್ಯವನ್ನೇ ಮುಂದುವರಿಸಬೇಕು ಎಂದು ದೇವೇಗೌಡರು ಆಗ್ರಹಿಸಿದ್ದರು.