ಉಡುಪಿ: ರಾಜ್ಯದಲ್ಲೀಗ ಗ್ಯಾರಂಟಿಗಳ ಹೊರತಾಗಿ “ಶಿಕ್ಷಣ” ಕ್ಷೇತ್ರವೂ ಭಾರಿ ಸುದ್ದಿಯಲ್ಲಿದೆ. ಪಠ್ಯ ಪುಸ್ತಕದಲ್ಲಿ (Text Book) ಕೆಲವು ಬದಲಾವಣೆಗಳನ್ನು ತರುವುದಾಗಿ ನೀಡಿರುವ ಹೇಳಿಕೆಗೆ ಬಿಜೆಪಿ ಕೆಂಡವಾಗಿದೆ. ಈ ಬಗ್ಗೆ ಮಾಜಿ ಸಚಿವ ವಿ. ಸುನಿಲ್ ಕುಮಾರ್ (V Sunil Kumar) ತೀವ್ರ ಆಕ್ರೋಶವನ್ನು ಹೊರಹಾಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹಾಗೂ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu Bangarappa) ವಿರುದ್ಧ ಕಿಡಿಕಾರಿದ್ದಾರೆ.
ಆರ್‌ಎಸ್‌ಎಸ್ ಸಂಸ್ಥಾಪಕ ಡಾ. ಕೇಶವ ಬಲಿರಾಮ್ ಹೆಡ್ಗೇವಾರ್, ಚಕ್ರವರ್ತಿ ಸೂಲಿಬೆಲೆ ವಿರಚಿತ “ತಾಯಿ ಭಾರತಿ” ಹಾಗೂ ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯವನ್ನು ಕೈಬಿಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವ ಬಗ್ಗೆ ಮಾಜಿ ಸಚಿವ ಸುನಿಲ್ ಕುಮಾರ್ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದು, ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ
ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾದರೂ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: Liquor Price Hike : ಕಿಕ್ ಪ್ರಿಯರಿಗೆ ಶಾಕ್; ಮದ್ಯದ ದರ ಹೆಚ್ಚಳ, ಇದು ʼಗ್ಯಾರಂಟಿʼ ಎಫೆಕ್ಟ್!
ಈ ಕುರಿತು ಮಾಜಿ ಸಚಿವ ಸುನೀಲ್ ಕುಮಾರ್ ಸರಣಿ ಟ್ವೀಟ್ ಮಾಡಿದ್ದು, ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅವರ ಟ್ವೀಟ್ ಹೀಗಿದೆ.
- ಅಧಿಕಾರಕ್ಕೆ ಬಂದು ತಿಂಗಳು ಕಳೆಯುವಷ್ಟರಲ್ಲೇ ಸಿದ್ದರಾಮಯ್ಯ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಗೆ ಕೈ ಹಾಕಿದೆ. ಪಠ್ಯದಲ್ಲಿ ಭಾರತೀಯತೆ, ಸಂಸ್ಕೃತಿ ಹಾಗೂ ಇತಿಹಾಸದ ನೈಜ ಸತ್ಯಗಳೇನು ಎಂಬುದು ವಿದ್ಯಾರ್ಥಿಗಳಿಗೆ ತಿಳಿಯದಂತೆ ಮುಚ್ಚಿಡುವುದು ಸರ್ಕಾರದ ಉದ್ದೇಶವೇ? ಶಾಲೆಗಳಿಗೆ ಪಠ್ಯ- ಪುಸ್ತಕ ಪೂರೈಕೆಯಾದ ನಂತರ
ಪರಿಷ್ಕರಣೆಯ ಹಠವೇಕೆ? - ಮಾನ್ಯ ಸಿದ್ದರಾಮಯ್ಯನವರೇ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪನವರಿಗೆ ಇಲಾಖೆಯ ಇತರೆ ವಿಚಾರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವುದಕ್ಕಾದರೂ ಅವಕಾಶ ಕೊಡಿ. ಆರಂಭದಲ್ಲೇ ವಿದ್ಯಾರ್ಥಿಗಳಿಗೆ ಕಲಿಸುವ ಪಾಠ ಯಾವುದೆಂದು ನಿರ್ಧರಿಸಿ ಎಂದು ನೀವು ಪಾಠ ಮಾಡಬೇಡಿ
- ನಾನು ಮೇಷ್ಟ್ರಾಗಿದ್ದೆ ಕಣ್ರಿ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿಕೆ ನೀಡುವುದಕ್ಕೆ ಮುನ್ನ ವಿದ್ಯಾರ್ಥಿ ಹಾಗೂ ಶಿಕ್ಷಕರ ಸಮಸ್ಯೆ ಮೊದಲು ಅರ್ಥ ಮಾಡಿಕೊಳ್ಳಿ. ಪಠ್ಯ ಪರಿಷ್ಕರಣೆ ಬಗ್ಗೆ ನಿಮಗಿರುವ ಧಾವಂತ ನೋಡಿದರೆ ಶಿಕ್ಷಣ ಇಲಾಖೆಯನ್ನು ಮೂರನೇ ವ್ಯಕ್ತಿಗಳು ನಿಯಂತ್ರಿಸುತ್ತಿರುವ ಅನುಮಾನ ಬರುತ್ತಿದೆ.
- ಸಿದ್ದರಾಮಯ್ಯನವರೇ ನಿಮಗೆ ಶ್ರೇಷ್ಠ ಭಾರತೀಯ ಚಿಂತನೆಗಳು, ನಿಜವಾದ ಆದರ್ಶ ಪುರುಷ ಯಾರಾಗಬೇಕು ? ತಾಯಿ ಭಾರತೀಯ ಅಮರಪುತ್ರರು ಎಂಬ ವಿಚಾರಗಳು ಹೇಗೆ ಇಷ್ಟವಾಗುತ್ತದೆ ಹೇಳಿ? ನಿಮ್ಮ ದೃಷ್ಟಿಯಲ್ಲಿ ಶಾಲಾ ಪಠ್ಯದಲ್ಲಿ ನಕಲಿ ಗಾಂಧಿ ಕುಟುಂಬದ ಚರಿತ್ರೆ, ವಿದೇಶಿ ದಾಳಿಯ ವಿಕೃತಿಗಳು ಮಾತ್ರ ತುಂಬಿರಬೇಕಲ್ಲವೇ ?
- ನಿಮ್ಮನ್ನು ಎರಡನೇ ಬಾರಿಗೆ ಮುಖ್ಯಮಂತ್ರಿ ಮಾಡಿದ್ದಾರೆಂಬ ಋಣ ತೀರಿಸಿಕೊಳ್ಳುವುದಕ್ಕಾಗಿ ಗುಲಾಮಿ ಚಿಂತನೆಯನ್ನು ಶಿಕ್ಷಣದಲ್ಲಿ ತುರುಕುತ್ತೀರಾ?
ಇದನ್ನೂ ಓದಿ: Murder Case: ಶೀಲ ಶಂಕಿಸಿ ಮಚ್ಚಿನಿಂದ ಕೊಚ್ಚಿ ಪತ್ನಿಯ ಕೊಂದ; ತಾನೂ ನೇಣಿಗೆ ಕೊರಳೊಡ್ಡಿದ
ಪಠ್ಯ ಪುಸ್ತಕದಿಂದ ಕೆಲವು ಪಠ್ಯವನ್ನು ಕೈಬಿಡುವ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಸುನಿಲ್ ಕುಮಾರ್, ಶಿಕ್ಷಣ ಇಲಾಖೆಯನ್ನು ಮೂರನೇ ವ್ಯಕ್ತಿಗಳು ನಿಯಂತ್ರಣ ಮಾಡುತ್ತಿದ್ದಾರೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಗಾಂಧಿ ಕುಟುಂಬದ ಬಗ್ಗೆ ಮಾತ್ರ ಪಠ್ಯದಲ್ಲಿರಬೇಕೇ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿದ್ದಾರೆ.