ಬೆಂಗಳೂರು : ಪಠ್ಯ ಪರಿಷ್ಕರಣೆ ವಿರೋಧಿಸಿ ಇಂದು (ಶನಿವಾರ) ವಿವಿಧ ಕನ್ನಡ ಪರ ಸಂಘಟನೆಗಳು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸುತ್ತಿವೆ. ಈಗಾಗಲೇ ಪ್ರತಿಭಟನಾ ಮೆರವಣಿಗೆ ಫ್ರೀಡಂ ಪಾರ್ಕ್ ತಲುಪಿದ್ದು, ಜನಸ್ತೋಮವೇ ಸೇರಿದೆ.
ಪ್ರತಿಭಟನೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ಸಿಎಂ ಇಬ್ರಾಹಿಂ, ಸಾ.ರಾ ಗೋವಿಂದು, ಪ್ರವೀಣ್ ಶೆಟ್ಟಿ, ಸಾಹಿತಿ ಎನ್ ಎಲ್ ಮುಕುಂದ್ ರಾಜ್, ಸಾಹಿತಿ ಬರಗೂರು ರಾಮಚಂದ್ರಪ್ಪ, ಹಿರಿಯ ವಕೀಲ ಸಿಎಚ್ ಹನುಮಂತರಾಯ, ಸಿ ಎನ್ ಬಾಲಕೃಷ್ಣ, ಪರಿಷತ್ ಮಾಜಿ ಸದಸ್ಯ ವಿ ಆರ್ ಸುದರ್ಶನ್, ಮುಖ್ಯಮಂತ್ರಿ ಚಂದ್ರು, ಸಂಗೀತ ನಿರ್ದೇಶಕ ಹಂಸಲೇಖ ಭಾಗಿಯಾಗಿದ್ದಾರೆ.
ಇವರ ಜೊತೆಗೆ ಮೈಸೂರಿನ ಜ್ಞಾನಪ್ರಕಾಶ ಸ್ವಾಮೀಜಿ, ಸೇವಾಲಾಲ್ ಸರ್ದಾರ್ ಸ್ವಾಮೀಜಿ, ಶಫಿಹಮೀದ್ ಉಲ್ಲಾ ಪಾಶಾ, ಚಿತ್ತರಮೇಶ ಚೈತನ್ಯ ಸ್ವಾಮೀಜಿ, ಸಿದ್ದರಾಮೇಶ್ವರ ಯೋಗಿ ಸ್ವಾಮೀಜಿ, ಜಸವನಾಗಿದೇವರ ಸ್ವಾಮೀಜಿ, ರಮಾನಂದನಾಥ ಸ್ವಾಮೀಜಿ, ನಾಗಾನಂದನಾಥ ಸ್ವಾಮೀಜಿ, ಅಲ್ಲಮಪ್ರಭುನಾಥ ಸ್ವಾಮೀಜಿ ಸೇರಿದಂತೆ ಹಲವಾರು ಧರ್ಮಗುರುಗಳು, ನಿವೃತ್ತ ನ್ಯಾಯಾಧೀಶರಾದ ಗೋಪಾಲಗೌಡ ಹಾಗೂ ನಾಗಮೋಹನ್ ದಾಸ್ ಕೂಡ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದಾರೆ.
ಇದನ್ನು ಓದಿ| ಪಠ್ಯ ವಿವಾದ-2: ಸದ್ಯದಲ್ಲೆ ಪಿಯು ಪಠ್ಯ ಪರಿಷ್ಕರಣೆ
ಪಠ್ಯ ಪರಿಷ್ಕರಣೆ ವಿರೋಧಿಸಿ ಫ್ರೀಡಂ ಪಾರ್ಕ್ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಣ ಸಚಿವ ಬಿ ಸಿ ನಾಗೇಶ್ “”ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಸರ್ಕಾರ ಈಗಾಗಲೇ ಪಠ್ಯ ಪುಸ್ತಕ ಪರಿಷ್ಕರಣೆ ಬಗ್ಗೆ ನಿರ್ಧಾರ ಪ್ರಕಟಿಸಿಯಾಗಿದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಪ್ರತಿಭಟನೆ ಮಾಡುವವರು ಮಾಡಲಿʼʼ ಎಂದು ಹೇಳಿಕೆ ನೀಡಿದ್ದಾರೆ.
ಫ್ರೀಡಂ ಪಾರ್ಕ್ನಲ್ಲಿ ಜನಸ್ತೋಮ ಸೇರಿದೆ. ಪರಿಷ್ಕೃತ ಆಗಿರುವ ಪಠ್ಯ ಪುಸ್ತಕವನ್ನು ರದ್ದು ಮಾಡಬೇಕು, ಹಳೆಯ ಪಠ್ಯಗಳೇ ಇರಬೇಕು ಎಂದು ಆಗ್ರಹಿಸುವ ಫಲಕಗಳನ್ನು ಪ್ರತಿಭಟನಾಕಾರರು ಹಿಡಿದಿದ್ದಾರೆ.