ಬೆಂಗಳೂರು: ಬಿಜೆಪಿ ಅವಧಿಯಲ್ಲಿ ಕೈಗೊಂಡ ಪಠ್ಯಪುಸ್ತಕ ಪರಿಷ್ಕರಣೆಯನ್ನು ಬದಲಾವಣೆ ಮಾಡುವುದು ಖಚಿತ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಮಧು ಬಂಗಾರಪ್ಪ, ಈ ವರ್ಷವೇ ಪಠ್ಯ ಪರಿಷ್ಕರಣೆಯಾಗಿದೆ. ಮಕ್ಕಳಿಗೆ ಅವಶ್ಯಕತೆ ಇಲ್ಲದ್ದನ್ನು ತಜ್ಞರು ಪರಿಶೀಲಿಸಿ ತೀರ್ಮಾನಿಸುತ್ತಾರೆ. ಸಂಪುಟದಲ್ಲಿ ಇಟ್ಟೇ ತೀರ್ಮಾನವಾಗಲಿದೆ. ಮುಂದಿನ ಸಂಪುಟದಲ್ಲೇ ಚರ್ಚೆ ಮಾಡಲಾಗುತ್ತದೆ. ಈ ಹಿಂದೆಯೂ ಸಪ್ಲಿಮೆಂಟರಿ ಪರಿಷ್ಕರಣೆ ಆಗಿದ್ದಿದೆ. ಈ ಸಂದರ್ಭದಲ್ಲಿ ಮಕ್ಕಳಿಗೆ ಒತ್ತಡ ಬೇಡ.
ಆರಂಭದಲ್ಲಿ ಸೇತು ಬಂಧ ಇರಲಿದೆ. ಮಕ್ಕಳು ಪಠ್ಯಕ್ಕೆ ಹೋಗಲ್ಲ. ಮತ್ತು ಪಠ್ಯದಲ್ಲಿ ಏನು ಓದಿಸಬೇಕು, ಯಾವುದು ಬೇಡ ಎಂಬುದನ್ನು ನಿರ್ಧರಿಸಲಾಗುತ್ತದೆ. ಇದು ಬಹಳ ಸೂಕ್ಷ್ಮ ವಿಚಾರ. ಮಕ್ಕಳ ಹಿತದೃಷ್ಟಿಯಿಂದ ಕ್ರಮ ತೆಗೆದುಕೊಳ್ಳುತ್ತೇವೆ. ಮಕ್ಕಳ ಭವಿಷ್ಯಕ್ಕೆ ಒಳ್ಳೆಯ ಅಂಶ ಉಳಿಸಲಾಗುತ್ತದೆ.
ಪಠ್ಯ ಪರಿಷ್ಕರಣೆಯಾಗಬೇಕೆಂದು ಸಾಹಿತಿಗಳು ಸಿಎಂಗೆ ಮನವಿ ಕೊಟ್ಟಿದ್ದಾರೆ. ಮುಖ್ಯಮಂತ್ರಿಯವರು ಕೂಡ ಆಸಕ್ತಿ ತೋರಿಸಿದ್ದಾರೆ. ಪಠ್ಯ ಪುಸ್ತಕ ಪರಿಷ್ಕರಣೆ ಮಾಡುತ್ತೇವೆ ಎಂದು ಪ್ರಣಾಳಿಕೆಯಲ್ಲಿ ಹೇಳಿದ್ದೆವು. ಅದನ್ನು ಮಾಡುತ್ತೇವೆ. ಈ ವಿಷಯದಲ್ಲಿ ಮುಖ್ಯಮಂತ್ರಿಯವರೇ ವಿಶೇಷ ಮುತುವರ್ಜಿ ವಹಿಸಿದ್ದಾರೆ. ಇದು ಖುಷಿಯ ವಿಚಾರ.
ತಜ್ಞರು ಪಕ್ಷಕ್ಕೆ ಸೀಮಿತವಾಗಿರಲ್ಲ. ಅವರು ಕೊಡುವ ಸಲಹೆ ಪರಿಗಣಿಸಲಾಗುತ್ತದೆ. ತಪ್ಪು ತಿಳುವಳಿಕೆ ತಕ್ಷಣ ತಡೆ ಹಿಡಿಯಬೇಕಾಗುತ್ತದೆ. ಅದನ್ನು ನಾವು ಮಾಡುತ್ತೇವೆ. ಯಾವ ಪಠ್ಯ ಬೇಡ ಎಂದು ತಜ್ಞರು ಸೂಚಿಸುತ್ತಾರೋ ಅದನ್ನು ಬೋಧಿಸದಂತೆ ತಿಳಿಸಲು ಅವಕಾಶವಿದೆ.
ಶಿಕ್ಷಕರ ನೇಮಕದಲ್ಲಿ ಎರಡು ಸಮಸ್ಯೆ ಇದೆ. ಕಾನೂನಿನ ತೊಡಕಿದೆ ಅದನ್ನು ಎಜಿ ಅವರ ಚರ್ಚೆ ಮಾತನಾಡಲಾಗುತ್ತದೆ. ಶಿಕ್ಷಕರ ಕೊರತೆ ಇದೆ. ಅತಿಥಿ ಶಿಕ್ಷಕರೇ ಸಮಸ್ಯೆಗೆ ಪರಿಹಾರವಲ್ಲ. ಹೀಗಾಗಿ ಆದಷ್ಟು ಶೀಘ್ರವಾಗಿ ಪರಿಹರಿಸಲಾಗುತ್ತದೆ ಎಂದಿದ್ದಾರೆ.
ಈ ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ ಪಠ್ಯಪುಸ್ತಕ ಪರಿಷ್ಕರಣೆ ನಡೆಸಲಾಗಿತ್ತು. ಬಿಜೆಪಿ ಸರ್ಕಾರದ ಅವಧಿಯಲ್ಲಿ ರೋಹಿತ್ ಚಕ್ರತೀರ್ಥ ಅವರ ಅಧ್ಯಕ್ಷತೆಯ ಸಮಿತಿ ಪಠ್ಯಪುಸ್ತಕ ಪರಿಷ್ಕರಣೆ ನಡೆಸಿತ್ತು. ಇದೀಗ ಮತ್ತೆ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಬಿಜೆಪಿ ಸಮಯದಲ್ಲಿ ನಡೆಸಲಾದ ತಿದ್ದುಪಡಿಗಳನ್ನು ಕೈಬಿಡಬೇಕು ಎಂದು ಸಾಹಿತಿಗಳ ನಿಯೋಗ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಒತ್ತಾಯ ಮಾಡಿತ್ತು.
ಇದನ್ನೂ ಓದಿ: Text Book: ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷ ಆಗಲಾರೆ; ಸರ್ಕಾರದ ಆಫರ್ ತಿರಸ್ಕರಿಸಿದ ಬರಗೂರು ರಾಮಚಂದ್ರಪ್ಪ