ಬೆಂಗಳೂರು: ಗೆಳತಿ ಪವಿತ್ರಾ ಗೌಡ (Pavithra Gowda) ಅವರಿಗೆ ಅಶ್ಲೀಲವಾಗಿ ಮೆಸೇಜ್ ಮಾಡಿದ ರೇಣುಕಾಚಾರ್ಯ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ನಟ ದರ್ಶನ್ (Actor Darshan), ಪವಿತ್ರಾ ಗೌಡ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ಚುರುಕುಗೊಳಿಸಿದ್ದಾರೆ. ರಾಜ್ಯಾದ್ಯಂತ ನಟ ದರ್ಶನ್ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರತಿಭಟನೆಗಳು ನಡೆಯುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ನಟನ ವಿರುದ್ಧ ಜನ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಇದರ ಮಧ್ಯೆಯೇ, ದರ್ಶನ್ ಪುತ್ರ ವಿನೀಶ್ ತೂಗುದೀಪ (Vineesh Thoogudeepa) ಭಾವನಾತ್ಮಕ ಪೋಸ್ಟ್ ಮಾಡಿದ್ದಾನೆ. “ನನ್ನ ತಂದೆಯನ್ನು ಕೆಟ್ಟ ಪದಗಳಿಂದ ನಿಂದಿಸಿದ ನಿಮಗೆಲ್ಲ ಧನ್ಯವಾದʼ ಎಂಬ ಬೇಸರದ ಪೋಸ್ಟ್‌ಅನ್ನು ವಿನೀಶ್ ಹಂಚಿಕೊಂಡಿದ್ದಾನೆ.
“ನನ್ನ ತಂದೆಯ ಬಗ್ಗೆ ಕೆಟ್ಟ ಕಮೆಂಟ್‌ಗಳನ್ನು ಮಾಡಿ, ಅಶ್ಲೀಲ ಭಾಷೆಯಲ್ಲಿ ನಿಂದಿಸಿದ್ದಕ್ಕೆ ನಿಮಗೆಲ್ಲ ಧನ್ಯವಾದಗಳು. ನಾನು 15 ವರ್ಷದ ಬಾಲಕ, ನನಗೂ ಭಾವನೆಗಳಿವೆ ಎಂಬುದನ್ನು ನೀವು ಪರಿಗಣಿಸಲೇ ಇಲ್ಲ. ಇಂತಹ ಕೆಟ್ಟ ಸಮಯದಲ್ಲಿ ನನ್ನ ತಾಯಿ ಹಾಗೂ ತಂದೆಗೆ ನಿಮ್ಮ ಬೆಂಬಲದ ಅಗತ್ಯವಿದೆ. ನೀವು ನನಗೆ ಶಾಪ ಹಾಕುವುದರಿಂದ ಯಾವುದೇ ಬದಲಾವಣೆ ಆಗುವುದಿಲ್ಲ” ಎಂದು ತಂದೆಯ ಬಂಧನ, ಜನರ ಆಕ್ರೋಶ, ಕೆಟ್ಟ ಕಮೆಂಟ್‌ಗಳ ಬಗ್ಗೆ ವಿನೀಶ್ ತೂಗುದೀಪ ಬೇಸರದ ಪೋಸ್ಟ್ ಮಾಡಿದ್ದಾನೆ.
ರೇಣುಕಾಸ್ವಾಮಿಯನ್ನ ಚಿತ್ರದುರ್ಗದಲ್ಲಿ ಜೂನ್ 8ರಂದು ಬೆಳಗ್ಗೆ 11 ಗಂಟೆಗೆ ರಾಘವೇಂದ್ರ, ನಂದೀಶ್ ಹಾಗೂ ಮತ್ತಿಬ್ಬರು ಕಿಡ್ನಾಪ್ ಮಾಡಿದ್ದರು. ನಂತರ ಮಧ್ಯಾಹ್ನ ಎರಡು ಗಂಟೆ ಸುಮಾರಿಗೆ ಪಟ್ಟಣಗೆರೆ ಶೆಡ್‌ಗೆ ಕರೆದುಕೊಂಡು ಬಂದಿದ್ದರು. ಶೆಡ್‌ನಲ್ಲಿ ಪವನ್, ಕಾರ್ತಿಕ್, ಪ್ರದೋಶ್ ಸೇರಿ ಹಲ್ಲೆ ಮಾಡಿದ್ದರು. ರೇಣುಕಾಸ್ವಾಮಿಯ ಕಾಲನ್ನು ಅಗಲಿಸಿ ಮರ್ಮಾಂಗದ ಮೇಲೆ ಹಲ್ಲೆ ಮಾಡಲಾಗಿತ್ತು. ಮೊದಲು ನಾಲ್ಕು ಜನ ಹಲ್ಲೆ ನಡೆಸಿದಾಗಲೇ ರೇಣುಕಾಸ್ವಾಮಿ ಸ್ಥಿತಿ ಗಂಭೀರವಾಗಿತ್ತು. ಬಳಿಕ ಉಳಿದ ಆರೋಪಿಗಳು ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸಿದ್ದಾರೆ.
ಕೊನೆಗೆ ನಟ ದರ್ಶನ್ ಸಹ ಹಲ್ಲೆ ಮಾಡಿದ್ದಾರೆ. ಹಲ್ಲೆಯಿಂದ ತೀವ್ರ ರಕ್ತಸ್ರಾವವಾಗಿ ಸಂಜೆ 6.30ರ ಸುಮಾರಿಗೆ ರೇಣುಕಾಸ್ವಾಮಿ ಕೊನೆಯುಸಿರೆಳೆದಿದ್ದ. ಅದಾದ ಮೇಲೆ ರಾತ್ರಿ ಒಂದು ಗಂಟೆವರೆಗೆ ಮೃತದೇಹದೊಂದಿಗೆ ಹಂತಕರು ಇದ್ದರು. ಬಳಿಕ ದರ್ಶನ್‌ಗೆ ರಾಘವೇಂದ್ರ ಹಾಗೂ ವಿನಯ್ ಮಾಹಿತಿ ನೀಡಿದ್ದರು. ಬಳಿಕ ಶವ ಬಿಸಾಡುವುದರ ಬಗ್ಗೆ ಡೀಲ್ ನಡೆದಿದೆ. ನಂತರ ಜೂನ್ 9ರಂದು ಬೆಳಗ್ಗೆ ಸುಮನಹಳ್ಳಿ ರಾಜಕಾಲುವೆ ಬಳಿ ರೇಣುಕಾಸ್ವಾಮಿ ಶವ ಪತ್ತೆಯಾಗಿತ್ತು. ರೇಣುಕಾಸ್ವಾಮಿಗೆ ಒದ್ದಿರುವುದು ನಿಜ ಎಂಬುದಾಗಿ ವಿಚಾರಣೆ ವೇಳೆ ದರ್ಶನ್ ಒಪ್ಪಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Actor Darshan: ʻಡೆವಿಲ್ʼ ಸಿನಿಮಾಗೆ ದರ್ಶನ್ ಪಡೆದಿದ್ದು ಬರೋಬ್ಬರಿ 22 ಕೋಟಿ ರೂ.; ಶಾಕ್‌ನಲ್ಲಿ ನಿರ್ಮಾಪಕ!