ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಮೈಲಸಂದ್ರದಲ್ಲಿ ಚಿನ್ನದ ಅಂಗಡಿ ದರೋಡೆ ನಡೆಸಿದ್ದ ಖದೀಮರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ ಹಾಗೂ ನಗದನ್ನು ಕಳವು ಮಾಡಿ ಪರಾರಿಯಾಗಿದ್ದ ನಾಲ್ವರು ಆರೋಪಿಗಳನ್ನು ರಾಜಸ್ಥಾನದಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೈಲನಹಳ್ಳಿಯ ರಾಮ್‌ದೇವ್ ಬ್ಯಾಂಕರ್ಸ್ ಆ್ಯಂಡ್ ಜ್ಯುವೆಲರ್ಸ್ ಚಿನ್ನದ ಅಂಗಡಿಯ ಮಾಲೀಕ ರಾಮ್ ದೇವ್ ಪಾರಸ್. ವ್ಯಾಪಾರ ನಡೆಸುವ ಮುನ್ನ ರಾಹುಕಾಲ ನೋಡುವ ವ್ಯಕ್ತಿ. ಜುಲೈ 4ರಂದು ಸೋಮವಾರ ಅಂಗಡಿ ತೆಗೆಯಬೇಕಿತ್ತು, ಅವತ್ತು ಬೆಳಗ್ಗೆ 7.30ರಿಂದ 9.00ರವರೆಗೆ ರಾಹುಕಾಲ.
ರಾಹುಕಾಲ ಕಳೆದ ನಂತರ ಅಂಗಡಿ ತೆಗೆದರೆ ತಡವಾಗುತ್ತದೆ, ರಾಹುಕಾಲ ಆರಂಭ ಆಗುವುದಕ್ಕೂ ಮೊದಲೇ ಅಂಗಡಿ ತೆಗೆಯೋಣ ಎಂದು ಬಂದಿದ್ದರು. ಬೆಳಗ್ಗೆ ಆರು ಗಂಟೆಗೇ ಅಂಗಡಿ ತೆಗೆದು ಇನ್ನೇನು ವ್ಯಾಪಾರ ಆರಂಭಿಸಬೇಕು ಎನ್ನುತ್ತಿರುವಾಗ ಇವರ ಗ್ರಹಚಾರ ಕೆಟ್ಟಿತ್ತು ಎನ್ನಿಸುತ್ತದೆ, ಅಂಗಡಿಗೆ ಬಂದ ಇಬ್ಬರು ಆಸಾಮಿಗಳು ಬೆಳ್ಳಿಯ ವಸ್ತುವನ್ನು ತೋರಿಸುವಂತೆ ಕೇಳಿದ್ದರು.
ಬೆಳ್ಳಿ ವಸ್ತುಗಳನ್ನು ತೋರಿಸಲು ಪಾರಸ್ ಮುಂದಾಗಿದ್ದಾರೆ. ಏಕಾಏಕಿ ಗನ್ ತೋರಿಸಿದ ವ್ಯಕ್ತಿಗಳು, ಅಂಗಡಿಯ ಲಾಕರ್ ಇರುವ ಕಡೆಗೆ ಕರೆದೊಯ್ಯುವಂತೆ ಹೇಳಿದ್ದಾರೆ. ನಂತರ ಪಾರಸ್ ಬಾಯಿ ಹಾಗೂ ಕೈಕಾಲುಗಳಿಗೆ ಟೇಪ್ ಮೂಲಕ ಸುತ್ತಿದ್ದಾರೆ. 3.5 ಕೆಜಿ. ಚಿನ್ನಾಭರಣ, 30 ಕೆ.ಜಿ. ಬೆಳ್ಳಿ ಮತ್ತು 80 ಸಾವಿರ ರೂ. ನಗದನ್ನು ದೋಚಿದ್ದರು.
ಇದನ್ನೂ ಓದಿ | ರಾಹುಕಾಲ ನೋಡಿ ಅಂಗಡಿ ತೆರೆದವನಿಗೆ ಕೆಟ್ಟಿತ್ತು ಗ್ರಹಚಾರ: ಚಿನ್ನಕ್ಕೆ ಕನ್ನ ಹಾಕಿದ ಚೋರರು
ರಾಜಸ್ಥಾನದಲ್ಲಿ ಸುಳಿವು
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆಗೆ ಇಳಿದಿದ್ದ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು, ಆರೋಪಿಗಳ ಇರುವಿಕೆಯ ಸುಳಿವು ಪಡೆದು ರಾಜಸ್ಥಾನದ ಉದಯಪುರಕ್ಕೆ ತೆರಳಿದ್ದರು. ಉದಯಪುರದಲ್ಲಿ ಅಲ್ಲಿನ ಪೊಲೀಸರ ಸಹಕಾರ ಪಡೆದು ರಾಜಸ್ಥಾನ ಮೂಲದ ಆರೋಪಿಗಳಾದ ದೇವಾರಾಮ್, ರಾಹುಲ್ ಸೋಲಂಕಿ, ಅನಿಲ್, ರಾಮ್ ಸಿಂಗ್‌ನನ್ನು ಬಂಧಿಸಿದ್ದಲ್ಲದೆ, ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ, ಬೆಳ್ಳಿ, ಗನ್ ಮತ್ತು ಜೀವಂತ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.
ಬೆಂಗಳೂರಿನ ಹಲವೆಡೆ ದರೋಡೆ ಮಾಡಿದ್ದ ಕುಖ್ಯಾತ ಗ್ಯಾಂಗ್, ಉದಯಪುರ ಪೊಲೀಸರಿಗೂ ಚಳ್ಳೆ ಹಣ್ಣು ತಿನ್ನಿಸಿತ್ತು. ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಫೈರಿಂಗ್ ಮಾಡಿದರೂ ಪ್ರಾಣ ಪಣಕ್ಕಿಟ್ಟು ರಾಜ್ಯದ ಪೊಲೀಸರು ಆರೋಪಿಗಳನ್ನು ಬಂಧಿಸಿರುವುದಕ್ಕೆ ರಾಜಸ್ಥಾನ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಹಾಗೂ ಆಗ್ನೇಯ ವಿಭಾಗ ಡಿಸಿಪಿ ಸಿ.ಕೆ. ಬಾಬ ಮಾಹಿತಿ ನೀಡಿದರು.
ಇದನ್ನೂ ಓದಿ | ಬೆಸ್ಕಾಂ ಕಾಲ್ ಸೆಂಟರ್ ಹೆಸರಿನಲ್ಲಿ ದೋಖಾ, ಗ್ರಾಹಕನ ಅಕೌಂಟ್‌ನಿಂದ 6 ಲಕ್ಷ ರೂ. ಮಾಯ!