Site icon Vistara News

Pratap Simha: ಸಿಎಂಗೆ ಇಂಥ ದೈನಾಸಿ ಸ್ಥಿತಿ ಬರಬಾರದಿತ್ತು; ಸೋಲಿಸಿ ಎಂದ ಸಿದ್ದರಾಮಯ್ಯಗೆ ಪ್ರತಾಪ್‌ ಸಿಂಹ ತಿರುಗೇಟು

CM Siddaramaiah and MP Pratap simha

ಮೈಸೂರು: ಉದಯಗಿರಿಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಾಂಧವರ ಮುಂದೆ ಹೋಗಿ ಕೈ ಮುಗಿದು ನನ್ನ ಸೋಲಿಸಲು ಕರೆ ಕೊಟ್ಟಿದ್ದಾರೆ. ಅವರು ತಮ್ಮ ಬಾಂಧವರ ಉದ್ಧಾರಕ್ಕೆ ಮಾತ್ರ ಇರುವುದು ಎಂಬುದು ನನಗೆ ಗೊತ್ತು. ಬಾಂಧವರ ಮುಂದೆ ಕೈ ಮಗಿದು ನನ್ನ ಸೋಲಿಸಿ ಅಂತ ಕೇಳುವ ದೈನಾಸಿ ಸ್ಥಿತಿ ಸಿಎಂಗೆ ಬರಬಾರದಿತ್ತು ಎಂದು ಸಂಸದ ಪ್ರತಾಪ್‌ ಸಿಂಹ (Pratap Simha) ವ್ಯಂಗ್ಯವಾಡಿದ್ದಾರೆ.

ಪ್ರತಾಪ್ ಸಿಂಹನನ್ನು ಈ ಬಾರಿ ಸೋಲಿಸಿ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಸಿಎಂ ಯಾವ ಬಡಾವಣೆಯಲ್ಲಿ ನಿಂತು ನನ್ನ ಸೋಲಿಸಿ ಎಂದು ಹೇಳಿದ್ದಾರೆ ಎಂಬುವುದನ್ನು ನೋಡಿದೆ. ಮೈಸೂರಿನ ಕುವೆಂಪು ನಗರದಲ್ಲೋ, ಸರಸ್ವತಿಪುರಂನಲ್ಲೋ, ಸಿದ್ದಾರ್ಥ ಬಡಾವಣೆಯಲ್ಲೋ ಬಂದು ಸಿಎಂ ಈ ರೀತಿ ಹೇಳೋಕೆ ಆಗಲ್ಲ ಎಂದು ಕಿಡಿಕಾರಿದ್ದಾರೆ.

ಇದನ್ನೂ ಓದಿ | Government Transfer : ಇನ್ನು ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯ!

ನನ್ನನ್ನು ಯಾಕೆ ಜನ ಸೋಲಿಸಬೇಕು ಎಂದು ಸಿಎಂ 5-10 ಕಾರಣ ಕೊಡಲಿ. ಹೈವೇ ಮಾಡಿಸಿದ್ದು ನನ್ನ ತಪ್ಪಾ? ಗ್ರೇಟರ್ ಮೈಸೂರು ಮಾಡಲು ಹೊರಟ್ಟಿದ್ದು ತಪ್ಪಾ? ವಿಮಾನ ನಿಲ್ದಾಣ ಅಭಿವೃದ್ಧಿ ಮಾಡಲು ಹೊರಟಿದ್ದು ತಪ್ಪಾ? ಚಾಮುಂಡಿ ಬೆಟ್ಟದ ಅಭಿವೃದ್ಧಿ ಮಾಡುತ್ತಿರುವುದು ತಪ್ಪಾ? ಯಾವ ಕಾರಣಕ್ಕೆ ಮೈಸೂರು ಜನ ಪ್ರತಾಪ್ ಸಿಂಹನನ್ನು ಸೋಲಿಸಬೇಕು ಹೇಳಿ ಎಂದು ಪ್ರಶ್ನಿಸಿದ್ದಾರೆ.

40 ವರ್ಷದಿಂದ ಸಿದ್ದರಾಮಯ್ಯ ರಾಜಕೀಯದಲ್ಲಿದ್ದಾರೆ. ಮೈಸೂರಿಗೆ ಮಾಡಿರುವ ಕೆಲಸ ಏನೂ ಎಂಬುದು ಹೇಳಲಿ. ಕೆಲಸ ಮಾಡಿದವನನ್ನು ಸೋಲಿಸಬೇಕು ಅಂತ ಕೈ ಮುಗಿದು ಸಿಎಂ ಕೇಳಿದರೆ ಜನ ಅದನ್ನು ಒಪ್ಪುತ್ತಾರಾ? ಸಿದ್ದರಾಮಯ್ಯ ಅವರಿಗೆ ಬಡವರ ಮಕ್ಕಳ ಉದ್ಧಾರವಾಗಬಾರದು. ಬಡವರ ಮಕ್ಕಳು ಬೆಳೆಯಬಾರದು. ಅವರು ಅವರ ಮಕ್ಕಳು ಮಾತ್ರ ರಾಜಕಾರಣ ಮಾಡುತ್ತಾ ಆರಾಮವಾಗಿ ಸದಾಶಿವನಗರದಲ್ಲಿ ಇರಬೇಕು ಅಷ್ಟೆ ಎಂದು ಟೀಕಿಸಿದ್ದಾರೆ.

ಮಹಿಷಾ ದಸರಾ ಆರಂಭ ಮಾಡಿ ಮೈಸೂರಿನ ಸ್ವಾಸ್ಥ್ಯ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಮಾಡಿ ರಾಜ್ಯದ ಸೌಹಾರ್ದತೆ ಕೆಡಿಸಿದ್ದು ಸಿದ್ದರಾಮಯ್ಯ ತಾನೇ? ಟಿಪ್ಪು ಜಯಂತಿ ಹಿನ್ನಲೆಯಲ್ಲಿ ಸಾಲು ಸಾಲು
ಹಿಂದೂ ಕಾರ್ಯಾಕರ್ತ ಕೊಲೆಯಾಯಿತು. ಇದಕ್ಕೆ ಯಾರು ಕಾರಣ? ಸಿದ್ದರಾಮಯ್ಯ ಪ್ರತಿ ಬಾರಿಯೂ ಮೋದಿ ವಿರುದ್ಧ ಮಾತನಾಡುತ್ತಾರೆ. ಇದು ಒಂಥರ ಆಕಾಶದ ಕಡೆ ಮುಖ ಮಾಡಿ ಉಗಿದಂತೆ. ಈ ಕೆಲಸವನ್ನು ನಿರಂತರವಾಗಿ ಸಿದ್ದರಾಮಯ್ಯ ಮಾಡುತ್ತಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಬೃಹತ್ ಮೈಸೂರು ಪಾಲಿಕೆ ಮಾಡಬೇಕು ಎಂಬ ಫೈಲ್‌ ಪಾಲಿಕೆ ಕೌನ್ಸಿಲ್ ಮುಂದೆ ಇದೆ. ಕೌನ್ಸಿಲ್ ಸಭೆಯನ್ನು ಸರ್ಕಾರ ದಿಢೀರ್ ರದ್ದುಗೊಳಿಸಿದೆ. ಕಾಂಗ್ರೆಸ್‌ಗೆ ಬೃಹತ್ ಮೈಸೂರು ಪಾಲಿಕೆಯಾಗಲು ವಿರೋಧವಿದೆ. ಅವರಿಗೆ ದಲಿತರು ಕೇರಿಯಲ್ಲೇ ಇರಬೇಕು. ಮುಸ್ಲಿಮರು ಮೊಹಲ್ಲಾದಲ್ಲೇ ಇರಬೇಕು. ನೀವು ಮಾತ್ರ ಸದಾಶಿವನಗರದಲ್ಲಿ ಇರಬೇಕಾ? ಮೈಸೂರು ಅಭಿವೃದ್ಧಿ ಮಾಡಬಾರದಾ? ನೀವಂತೂ ಮೈಸೂರು ಅಭಿವೃದ್ಧಿ ಮಾಡಲಿಲ್ಲ. ನಮಗಾದರೂ ಅಭಿವೃದ್ಧಿ ಮಾಡಲು ಬಿಡಿ ಎಂದು ಹೇಳಿದ್ದಾರೆ.

ಇದನ್ನೂ ಓದಿ | BK Hariprasad : ಸಣ್ಣ ಸಮುದಾಯದವರ ಅವಕಾಶಕ್ಕಾಗಿ ಬೀದಿಗಿಳಿಯುವೆ: ಸಿಎಂ ವಿರುದ್ಧ ಹರಿಪ್ರಸಾದ್‌ ಮತ್ತೆ ಗುಡುಗು

ಅಭಿವೃದ್ಧಿಗೆ ಕಾಂಗ್ರೆಸ್ ವಿರೋಧವಿದೆ. ಭಾಗ್ಯಗಳ ಕೊಟ್ಟಿದ್ದಾರೆ. ಇನ್ನು ಓಸಿ ಪ್ಯಾಕ್ ಕೊಡುವುದು ಮಾತ್ರ ಬಾಕಿ ಇದೆ.
ಅದನ್ನು ಕೊಟ್ಟು ಜನರನ್ನು ಅಲ್ಲೇ ಕೂರಿಸಿ. ನೀವು ಮಾತ್ರ ಬೆಂಗಳೂರಿನಲ್ಲಿ ಅರಾಮವಾಗಿಗಿ ಇರಿ ಎಂದು ಸಿಎಂ ವಿರುದ್ಧ ಸಂಸದ ಪ್ರತಾಪ್ ಸಿಂಹ ಆಕ್ರೋಶ ಹೊರಹಾಕಿದ್ದಾರೆ.

Exit mobile version