ಚಿತ್ರದುರ್ಗ: ಅಧಿಕಾರಕ್ಕೆ ಬಂದರೆ 200 ಯುನಿಟ್ ವಿದ್ಯುತ್ ಉಚಿತ ಎಂದು ಕಾಂಗ್ರೆಸ್ ಗ್ಯಾರಂಟಿ ನೀಡಿತ್ತು. ಈಗ ಪಕ್ಷಕ್ಕೆ ಬಹುಮತ ಬಂದಿದೆ. ಪಕ್ಷ ನೀಡಿರುವ ಎಲ್ಲ ಗ್ಯಾರಂಟಿಗಳನ್ನು ಈಡೇರಿಸುತ್ತದೋ ಇಲ್ಲವೋ ಎಂಬ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ. ಈ ನಡುವೆ (Chitradurga News) ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಜನರು ವಿದ್ಯುತ್ ಬಿಲ್ ಪಾವತಿಗೆ ನಿರಾಕರಿಸಿ, ಬೆಸ್ಕಾಂ ಮೀಟರ್ ರೀಡರ್‌ಗೆ ಆವಾಜ್ ಹಾಕಿರುವ ಘಟನೆ ನಡೆದಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ಹೀಗಾಗಿ ನಾವು ಬಿಲ್ ಕಟ್ಟಲ್ಲ ಎಂದು ಗ್ರಾಮಸ್ಥರು ಹೇಳಿದ್ದು, ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಚಿತ್ರದುರ್ಗ ತಾಲೂಕಿನ ಸಿದ್ದಾಪುರ ಗ್ರಾಮಕ್ಕೆ ವಿದ್ಯುತ್ ಬಿಲ್ ವಿತರಿಸಲು ಮೀಟರ್ ರೀಡರ್ ತೆರಳಿ ಬಿಲ್ ಕಟ್ಟುವಂತೆ ಗ್ರಾಮಸ್ಥರಿಗೆ ಕೇಳಿದ್ದಾರೆ. ಈ ವೇಳೆ ಗ್ರಾಮಸ್ಥರು, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ, ನಾವು ಬಿಲ್ ಕಟ್ಟಲ್ಲ. ವಿದ್ಯುತ್ ಫ್ರೀ ಎಂದು ಕಾಂಗ್ರೆಸ್ ಮೊದಲೇ ಘೋಷಿಸಿದೆ. ಈಗ ಆ ಪಕ್ಷ ಅಧಿಕಾರಕ್ಕೆ ಬಂದಿದೆಯಲ್ಲ, ನಾವು ಬಿಲ್ ಕಟ್ಟೋದಿಲ್ಲ ಎಂದು ಹೇಳಿದ್ದಾರೆ.
ಈ ವೇಳೆ ಸರ್ಕಾರದ ಆದೇಶ ಬರುವವರೆಗೆ ಬಿಲ್ ಕಟ್ಟಬೇಕೆಂದು ಮೀಟರ್ ರೀಡರ್, ಜನರಿಗೆ ತಿಳಿಸಿದ್ದಾರೆ. ಆದೇಶದ ಬಗ್ಗೆ ಕಾಂಗ್ರೆಸ್‌ನವರಿಗೇ ಕೇಳಿ ಎಂದು ಹೇಳಿರುವ ಜನರು, ನಾವು ವಿದ್ಯುತ್ ಬಿಲ್ ಕಟ್ಟುವುದಿಲ್ಲ, ಏನು ಮಾಡುತ್ತೀರೋ ಮಾಡಿ ಎಂದು ಹೇಳಿರುವುದು ಕಂಡುಬಂದಿದೆ.