Site icon Vistara News

ಭಿನ್ನಾಭಿಪ್ರಾಯದಿಂದ ದೂರವಾಗಿದ್ದ ದಂಪತಿ ಹತ್ತು ವರ್ಷಗಳ ನಂತರ ಒಂದಾದರು!

ದಂಪತಿ

ಧಾರವಾಡ: ಇಲ್ಲಿನ ಉಚ್ಚ ನ್ಯಾಯಾಲಯದ ಕಾನೂನು ಸೇವಾ ಸಮಿತಿಯು, ಹತ್ತು ವರ್ಷಗಳಿಂದ ದೂರವಾಗಿದ್ದ ದಂಪತಿಯನ್ನು ಮತ್ತೆ ಒಂದುಗೂಡಿಸಿದೆ. ಧಾರವಾಡದ ಸುಜಾತಾ ಹಾಗೂ ಶಿವಮೊಗ್ಗದ ದೀಪಕ ದಿನಕರ  ದಂಪತಿ ಭಿನ್ನಾಭಿಪ್ರಾಯಗಳಿಂದ ಪರಸ್ಪರ ದೂರವಾಗಿದ್ದರು.

ಪತಿ ದೀಪಕ್ ವಿಚ್ಛೇದನ ಕೋರಿ ಕೌಟುಂಬಿಕ ನ್ಯಾಯಾಲಯದಲ್ಲಿ‌ ಅರ್ಜಿ ಸಲ್ಲಿಸಿದ್ದರು. ನಿರಾ ಎಂಬ 11 ವರ್ಷದ ಹೆಣ್ಣು ಮಗಳಿರುವ ಈ ದಂಪತಿಯನ್ನು ನ್ಯಾಯಮೂರ್ತಿಗಳ ಸಲಹೆ ಮೇರೆಗೆ ಮಧ್ಯಸ್ಥಿಕೆಗಾರರ ಎದುರು ಹಾಜರು ಪಡಿಸಲಾಯಿತು.

ಸಂಬಂಧಿಕರು, ವಕೀಲರಾದ ಎಸ್.ಆರ್. ಹೆಗಡೆ, ಗಿರೀಶ ಹಿರೇಮಠ ಹಾಗೂ ಮಧ್ಯಸ್ಥರಾದ ಹನುಮಂತ ರೆಡ್ಡಿ ಸಾವ್ಕಾರ ಅವರ ಹಿತವಚನದ ಆಲಿಸಿದ ದಂಪತಿಯು ಮುಂದಿನ ದಾಂಪತ್ಯ ಜೀವನ, ಭವಿಷ್ಯ ಹಾಗೂ ಮಗಳ ಜೀವನದ ನಿರ್ವಹಣೆಯ ಸದುದ್ದೇಶವನ್ನು ಇಟ್ಟುಕೊಂಡು ರಾಜಿ ಮಾಡಿಕೊಂಡರು.  

ಒಂದಾದ ದಂಪತಿಯನ್ನು ನ್ಯಾಯಧೀಶರಾದ ಕೃಷ್ಣ ಎಸ್ ದೀಕ್ಷಿತ್ ಮತ್ತು ಪಿ . ಕೃಷ್ಣ ಭಟ್ ಅವರನ್ನು ಒಳಗೊಂಡ ದ್ವಿಸದಸ್ಯ ಪೀಠದ ಮುಂದೆ ಹಾಜರುಪಡಿಸಲಾಯಿತು. ದಂಪತಿ ಮತ್ತೆ ಒಂದಾಗಿರುವುದರ ಬಗ್ಗೆ ತಿಳಿದು ನ್ಯಾಯಾಧೀಶರು ಹರ್ಷ ವ್ಯಕ್ತಪಡಿಸಿದರು. ಬೇರೆ ಇದ್ದ ಮಹಿಳೆ ಸೋಮವಾರ ಶಿವಮೊಗ್ಗದಲ್ಲಿರುವ ಪತಿಯ ಮನೆಗೆ ತೆರಳಿದರು ಎಂದು ಹೈಕೋರ್ಟ್ ಪೀಠದ ಅಧಿಕ ವಿಲೇಖನಾಧಿಕಾರಿ ವೆಂಕಟೇಶ ಆರ್ ಹುಲಗಿ ತಿಳಿಸಿದ್ದಾರೆ.

ಇದನ್ನೂ ಓದಿ | 50 ವರ್ಷ ನಾನೊಂದು ತೀರ ನೀನೊಂದು ತೀರ: ವೃದ್ಧ ದಂಪತಿ ಈಗ ಹತ್ತಿರ ಹತ್ತಿರ!

Exit mobile version