ದಾವಣಗೆರೆ: ಪ್ರತ್ಯೇಕ ಲಿಂಗಾಯತ ಧರ್ಮ (separate Lingayat religion) ಹೋರಾಟಕ್ಕೆ ಬೆಂಬಲಿಸಿದ ಆರೋಪಕ್ಕೆ ಗುರಿಯಾಗಿದ್ದ ಕಾಂಗ್ರೆಸ್‌ಗೆ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಗಿತ್ತು. ಇದೀಗ ಜಾತಿಗಣತಿ ವರದಿ ಸ್ವೀಕಾರಕ್ಕೆ ಮುಂದಾಗಿರುವ ರಾಜ್ಯ ಸರ್ಕಾರದ ನಿರ್ಧಾರ ವಿರೋಧಿಸಿ ವೀರಶೈವ-ಲಿಂಗಾಯತ ಸಮುದಾಯದ ನಾಯಕರು ಒಗ್ಗಟ್ಟಾಗಿದ್ದಾರೆ. ಈ ನಡುವೆ ಮತ್ತೊಮ್ಮೆ ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ಮುನ್ನೆಲೆಗೆ ಬಂದಿದ್ದು, ವೀರಶೈವ ಲಿಂಗಾಯತ ಅಧಿವೇಶನದಲ್ಲಿ ಮಾಜಿ ಸಿಎಂ, ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ಅವರು ಪ್ರತ್ಯೇಕ ಧರ್ಮ ಹೋರಾಟಕ್ಕೆ ಕರೆ ನೀಡಿದ್ದಾರೆ.
ನಗರದಲ್ಲಿ ಆಯೋಜಿಸಿರುವ ವೀರಶೈವ ಲಿಂಗಾಯತ ಮಹಾಸಭಾ ಅಧಿವೇಶನದಲ್ಲಿ ಜಗದೀಶ್ ಶೆಟ್ಟರ್ ಅವರು ಮಾತನಾಡಿ, ಪ್ರತ್ಯೇಕ ಲಿಂಗಾಯತ ಸ್ವತಂತ್ರ ಧರ್ಮಕ್ಕೆ ನಾವೆಲ್ಲರೂ ಹೋರಾಟ ಮಾಡೋಣ. ಸ್ವಾಮೀಜಿಗಳು ಈ ಹೋರಾಟದ ನೇತೃತ್ವವನ್ನು ವಹಿಸಿಕೊಳ್ಳಲಿ ಎಂದು ಹೇಳಿದರು.
ವೀರಶೈವ- ಲಿಂಗಾಯತ ಸ್ವತಂತ್ರ್ಯ ಧರ್ಮ ಆಗಲಿ. ವೀರಶೈವ- ಲಿಂಗಾಯತ ಬೇರೆ ಬೇರೆ ಅನ್ನೋದು ಬಿಡಿ. ಎಲ್ಲಾ ಸಮಾಜ ಕೂಡಿ, ಗಟ್ಟಿಯಾಗಿ ನಿರ್ಧಾರ ಮಾಡಿ. ಗುರು ವಿರಕ್ತರನ್ನ ಒಂದೆಡೆ ಸೇರಿಸಿ, ಗಟ್ಟಿಯಾಗಿ ಹೋರಾಟ ಮಾಡಿದರೆ ಪ್ರತ್ಯೇಕ ಧರ್ಮ ಆಗೇ ಆಗುತ್ತದೆ ಎಂದ ಜಗದೀಶ್ ಶೆಟ್ಟರ್ ತಿಳಿಸಿದರು.
ಇದನ್ನೂ ಓದಿ | PM Modi: ಮುಸ್ಲಿಂ ಹೆಣ್ಣು ಮಕ್ಕಳಿಗೆ ಪರ್ಮನೆಂಟ್ ಗಂಡ ಸಿಕ್ಕಿದ್ದು ಮೋದಿಯಿಂದಾಗಿ: ಕಲ್ಲಡ್ಕ ಪ್ರಭಾಕರ್ ಭಟ್
ಈ ಹಿಂದೆ ಸ್ವತಂತ್ರ ಧರ್ಮದ ಹೆಸರಲ್ಲಿ ಸಮಾಜ ಒಡೆದು ಹೋಗುತ್ತದೆ ಎಂಬ ಭಯ ಉಂಟಾಗಿತ್ತು. ವೀರಶೈವ, ಲಿಂಗಾಯತ ಬೇರೆ ಮಾಡಲು ಹೊರಟಿದ್ದರು. ಯಾವುದೇ ಕಾರಣಕ್ಕೂ ಸಮುದಾಯ ಒಡೆಯಲು ಬಿಡುವುದಿಲ್ಲ ಎಂದು ಆಗ ಮಹಾಸಭಾ ಗಟ್ಟಿ ನಿರ್ಧಾರ ಮಾಡಿತ್ತು. ಹೀಗಾಗಿಯೇ ಇಂದು ಸಮಾಜ ಒಂದಾಗಿದೆ ಎಂದು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹೇಳಿದರು.
ಸಮಾಜ, ಗುರು- ವೀರಕ್ತರು ಒಂದಾದರೆ ಇಡೀ ಸಮುದಾಯವೇ ನಿಮ್ಮ ಹಿಂದೆ ಇರುತ್ತದೆ. ನಿಮ್ಮ ಮಾರ್ಗದರ್ಶನದಲ್ಲಿ ಎಂತಹ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಹಲವು ರಾಜ್ಯಗಳಲ್ಲಿ ಸಮುದಾಯದ ಜನರಿದ್ದಾರೆ. ಆದರೆ ಕರ್ನಾಟಕದಲ್ಲಿ ನಮ್ಮ ಸಮಾಜ ಬಹಳ ಬಲಾಢ್ಯವಾಗಿದೆ. ಹೀಗಾಗಿ ಸಮುದಾಯಕ್ಕೆ ಕೇಂದ್ರ OBC ಮೀಸಲಾತಿ ಪಟ್ಟಿಯಲ್ಲಿ ಸ್ಥಾನ ಸಿಗಬೇಕು. ಈ ಒತ್ತಾಯ ಇದೆ ಬಹಳ ವರ್ಷಗಳಿಂದ ಇದೆ. ಇದು ನೆರವೇರಿದರೆ ಸಮುದಾಯದ ಯುವಕರಿಗೆ ಭವಿಷ್ಯದಲ್ಲಿ ಸಾಕಷ್ಟು ಅನುಕೂಲವಾಗಲಿದೆ ಎಂದು ತಿಳಿಸಿದರು.
ಜಾತಿಗಣತಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಲೋಪ ಇರುವ ವರದಿಯನ್ನು ರದ್ದು ಮಾಡಿ, ಹೊಸದಾಗಿ ವೈಜ್ಞಾನಿಕವಾಗಿ ಜಾತಿಗಣತಿಯಾಗಲಿ. ಈ ವಿಚಾರವಾಗಿ ಸರ್ಕಾರಕ್ಕೆ ನಾವು ಒತ್ತಾಯ ಮಾಡಬೇಕಾಗಿದೆ. ಸಮುದಾಯ ಮತ್ತಷ್ಟು ಬೆಳೆಯಬೇಕೆಂದರೆ ಒಳಪಂಗಡಗಳ ನಡುವಿನ ಸಂಬಂಧ ವೃದ್ಧಿಸಬೇಕು ಎಂದು ಹೇಳಿದರು.
ಜಾತಿಗಣತಿ ಹೆಸರಲ್ಲಿ ನಮ್ಮನ್ನು ಬೇರ್ಪಡಿಸೋಕೆ ಪ್ರಯತ್ನ: ಬೊಮ್ಮಾಯಿ
ಬೆಂಗಳೂರು: ಪ್ರಸ್ತುತ ಸಮಾಜವು ಜಾತಿಗಣತಿ ಸವಾಲನ್ನು ಎದುರಿಸುತ್ತಿದ್ದು, ಜಾತಿಗಣತಿ ಹೆಸರಲ್ಲಿ ರಾಜಕೀಯ ನಡೆಯುತ್ತಿದೆ. ರಾಜಕೀಯ ಮಾಡಲು ಹಲವು ವಿಷಯಗಳು ಇವೆ. ಆತ್ಮಸಾಕ್ಷಿಗೆ ನಡೆದುಕೊಳ್ಳುವ ಸಮಾಜ ಎಂದರೆ ಅದು ವೀರಶೈವ ಸಮಾಜ. ಆದರೆ, ಸಮುದಾಯ ಒಡೆಯಲು ಯಾರು ಎಷ್ಟೇ ಪ್ರಯತ್ನ ಮಾಡಿದರೂ ಚಿಂತೆ ಮಾಡಬೇಡಿ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದರು.
ನಮ್ಮಲ್ಲಿನ ಆತ್ಮಸಾಕ್ಷಿ ನಮ್ಮನ್ನ ಒಗ್ಗೂಡಿಸುವ ಕೆಲಸ ಮಾಡಿಯೇ ಮಾಡುತ್ತೆ. ನಮ್ಮ ಸಮುದಾಯವನ್ನು ಬೇರ್ಪಡಿಸಿ ರಾಜ್ಯ ಹಾಳೋಕೆ, ಕಾರ್ಯಕ್ರಮ ರೂಪಿಸೋಕೇ ಸಾಧ್ಯವಿಲ್ಲ. ಜಾತಿಗಣತಿ ಹೆಸರಲ್ಲಿ ನಮ್ಮನ್ನ ಬೇರ್ಪಡಿಸೋಕೆ ಪ್ರಯತ್ನ ನಡೆಯುತ್ತಿದೆ.
ಇದನ್ನೂ ಓದಿ | ನನ್ನನ್ನು ದೇಶದ್ರೋಹಿಯಂತೆ ಕಾಂಗ್ರೆಸ್ ಚಿತ್ರಿಸಿದೆ; ಎಲೆಕ್ಷನ್‌ನಲ್ಲಿ ಜನ ಉತ್ತರ ಕೊಡ್ತಾರೆ: ಪ್ರತಾಪ್ ಸಿಂಹ
ಜಾತಿಗಣತಿ ಹೆಸರಲ್ಲಿ ಮಾಡಿರುವುದು ಜಾತಿ ಗಣತಿಯಲ್ಲ. ಅದು ಶೈಕ್ಷಣಿಕ ಗಣತಿ. ರಾಜ್ಯ ಸರ್ಕಾರಕ್ಕೆ ಜಾತಿಗಣತಿ ಮಾಡಲು ಅಧಿಕಾರ ಇಲ್ಲ. ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರ ಇದೆ. ಹೀಗಾಗಿ ವೈಜ್ಞಾನಿಕ ಜಾತಿ ಗಣತಿ ನಡೆದು ಎಲ್ಲರಿಗೂ ನ್ಯಾಯಸಿಗಲಿ. ಮಹಾಸಭಾ ತೆಗೆದುಕೊಳ್ಳುವ ನಿರ್ಣಯಗಳಿಗೆ ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ