ಬೆಳಗಾವಿ: ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಬೆಳಗಾವಿ ಮೂಲದ ಮೂವರು ಪ್ರಭಾವಿ ಭಾಜಪ ನಾಯಕರು ವಿಧಿವಶರಾಗಿದ್ದು, (Anand Mamani) ಈ ಭಾಗದದಲ್ಲಿ ಬಿಜೆಪಿಗೆ ಆಘಾತವಾದಂತಾಗಿದೆ.
ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದ ಮೂವರು ನಾಯಕರು ದಿಢೀರ್ ಅಗಲಿದ್ದಾರೆ. ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ, ಅರಣ್ಯ ಸಚಿವ ಉಮೇಶ್ ಕತ್ತಿ ಬಳಿಕ ಈಗ ಆನಂದ ಮಾಮನಿ ಸಾವಿಗೀಡಾಗಿದ್ದಾರೆ.
ಕೊರೊನಾ ಸೋಂಕಿಗೆ ತುತ್ತಾಗಿದ್ದ ಸುರೇಶ ಅಂಗಡಿ ಚಿಕಿತ್ಸೆ ಫಲಿಸದೇ ಏಮ್ಸ್‌ನಲ್ಲಿ ಕೊನೆಯುಸಿರೆಳೆದಿದ್ದರು.
ಒಂದೂವರೆ ತಿಂಗಳ ಹಿಂದೆಯಷ್ಟೇ ಬೆಂಗಳೂರು ಡಾಲರ್ಸ್ ಕಾಲನಿಯ ಮನೆಯಲ್ಲಿ ಕುಸಿದು ಬಿದ್ದು ಸಚಿವ ಉಮೇಶ ಕತ್ತಿ ಸಾವಿಗೀಡಾಗಿದ್ದರು. ಇದೀಗ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಕೂಡ ಚಿಕಿತ್ಸೆ ಫಲಿಸದೇ ಸಾವಿಗೀಡಾಗಿದ್ದಾರೆ.
ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ಅಂದು ತಂದೆ, ಇಂದು ಪುತ್ರ ಸಾವು: ಡೆಪ್ಯುಟಿ ಸ್ಪೀಕರ್ ಆನಂದ ಮಾಮನಿ ಅವರ ತಂದೆಯೂ ಡೆಪ್ಯುಟಿ ಸ್ಪೀಕರ್ ಆಗಿದ್ದಾಗಲೇ ಮೃತಪಟ್ಟಿರುವುದು ಆಕಸ್ಮಿಕ.
1995-1999 ಅವಧಿಯಲ್ಲಿ ಉಪಸಭಾಧ್ಯಕ್ಷ ಚಂದ್ರಶೇಖರ ಮಾಮನಿ ಅವರು ಡೆಪ್ಯುಟಿ ಸ್ಪೀಕರ್ ಆಗಿದ್ದರು. ಹಾಗೂ ಉಪಸಭಾಧ್ಯಕ್ಷರಾಗಿದ್ದಾಗಲೇ ಇಹಲೋಕ ತ್ಯಜಿಸಿದ್ದರು. ಇದೀಗ ಕಾಕತಾಳಿಯ ಎಂಬಂತೆ ಆನಂದ ಮಾಮನಿ ಸಹ ಅದೇ ಹುದ್ದೆಯಲ್ಲಿದ್ದಾಗ ಸಾವಿಗೀಡಾಗಿದ್ದಾರೆ.