ಕೊಪ್ಪಳ: ಜಿಲ್ಲೆಯ ಹುಲಗಿಯ ರಸ್ತೆ ಬದಿಯಲ್ಲಿ ರಾತ್ರಿ ಮಲಗಿದ್ದವರ ಮೇಲೆ ಮಿನಿಲಾರಿ ಹರಿದ ಪ್ರಕರಣದಲ್ಲಿ (Hit and Run Case) ಚಾಲಕನನ್ನು ಮುನಿರಾಬಾದ್ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ಯರಂಗಳಿಗೆ ಗ್ರಾಮದ ಶ್ರೀನಿವಾಸ ಬಂಧಿತ ಆರೋಪಿಯಾಗಿದ್ದಾನೆ.
ಹುಲಗೆಮ್ಮ ದೇವಿ ದೇಗುಲಕ್ಕೆ ಬಂದು ರಸ್ತೆ ಪಕ್ಕದ ಬಳೆ ಅಂಗಡಿ ಮುಂದೆ ಮಲಗಿದ್ದವರ ಮೇಲೆ ಭಾನುವಾರ ರಾತ್ರಿ ಚಾಲಕನ ನಿಯಂತ್ರಣ ತಪ್ಪಿ ಮಿನಿ ಲಾರಿ ಹರಿದಿದ್ದರಿಂದ ತಿಪ್ಪಣ್ಣ (75) ಎಂಬ ವೃದ್ಧ ಮೃತಪಟ್ಟಿದ್ದು, ಹನುಮವ್ವ, ಮಲ್ಲವ್ವ ಹಾಗೂ ತುಕಾರಾಂ ಎಂಬುವವರು ಗಂಭೀರವಾಗಿ ಗಾಯಗೊಂಡಿದ್ದರು. ಬಳಿಕ ಚಾಲಕ ಶ್ರೀನಿವಾಸ ಸ್ಥಳದಿಂದ ವಾಹನ ಸಮೇತ ಪರಾರಿಯಾಗಿದ್ದ. ಈ ಬಗ್ಗೆ ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮಲಗಿದ್ದವರ ಮೇಲೆ ಮಿನಿ ಲಾರಿ ಹರಿದಿದ್ದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಹೀಗಾಗಿ ಪೊಲೀಸರು ಕಾರ್ಯಾಚರಣೆ ನಡೆಸಿ ಚಾಲಕ ಹಾಗೂ ವಾಹನವನ್ನು ವಶಕ್ಕ ಪಡೆದಿದ್ದಾರೆ. ಒಂದಿಷ್ಟು ಜನರನ್ನು ದೇವಸ್ಥಾನದ ಬಳಿ ಇಳಿಸಿ, ಉಳಿದ ಜನರನ್ನು ವಾಹನದಲ್ಲಿ ಗ್ರಾಮಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಬ್ರೇಕ್ ಹಾಕುವ ಬದಲು ಎಕ್ಸಿಲರೇಟರ್ ಮೇಲೆ ಕಾಲಿಟ್ಟಿದ್ದರಿಂದ ಅವಘಡ ನಡೆದಿದೆ ಎಂದು ವಿಚಾರಣೆ ವೇಳೆ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ | Accident |ಕೊಪ್ಪಳದಲ್ಲಿ ಭೀಕರ ರಸ್ತೆ ಅಪಘಾತ: ಮೃತರ ಕುಟುಂಬಕ್ಕೆ ತಲಾ ₹5 ಲಕ್ಷ