Site icon Vistara News

Husband kills wife | ಕಿಂಚಿತ್ತೂ ದಯವಿಲ್ಲದ ಹಂತಕ, ಮಕ್ಕಳ ಕಣ್ಣೆದುರೇ ಮಡದಿಗೆ ಇರಿತ

ಕೊಲೆ

ಬಳ್ಳಾರಿ: ತನ್ನ ಕಿರುಕುಳ ತಾಳದೇ ತವರಿಗೆ ಬಂದರೂ ಆತ ಬಿಡಲಿಲ್ಲ. ಮಕ್ಕಳು ಭಯದಿಂದ ನಡುಗುತ್ತ ಅಮ್ಮಾ ಎಂದು ಗೋಳಿಟ್ಟರೂ ಬಿಡಲಿಲ್ಲ. ಮಕ್ಕಳೆದುರೇ ಪತ್ನಿಯನ್ನು ಬರ್ಬರವಾಗಿ ಇರಿದು ಸಾಯಿಸಿದ್ದಾನೆ ವ್ಯಕ್ತಿಯೊಬ್ಬ.

ಶ್ವೇತಾ ಅಲಿಯಾಸ್ ರಾಜೇಶ್ವರಿ (32) ಕೊಲೆಯಾದ ಮಹಿಳೆ. ಕೊಪ್ಪಳ ಜಿಲ್ಲೆಯ ಬೇವಿನಹಳ್ಳಿ ಗ್ರಾಮದ ಮಾರುತಿ ಕೊಲೆ ಮಾಡಿದಾತ. ಮಹಿಳೆ ಮೇಲೆ ಹಲ್ಲೆ ಮಾಡುತ್ತಿದ್ದಾಗ ತಡೆಯಲು ಮುಂದಾದ ಆಕೆಯ ತಂದೆ ಪಾಂಡುರಂಗ ಎಂಬವರಿಗೂ ಮಾರುತಿ ಇರಿದಿದ್ದಾನೆ. ತಾಯಿಯನ್ನು ತಂದೆಯೇ ಚಾಕುವಿನಿಂದ ಇರಿಯುತ್ತಿರುವುದನ್ನು ಇಬ್ಬರು ಚಿಕ್ಕ ಮಕ್ಕಳು ಕಂಡು ʻಅಮ್ಮಾʼ…ಎಂದು ನಡುಗುತ್ತ ಕಣ್ಣೀರು ಹಾಕಿದರೂ ಆತನ ಮನ ಕರಗಲಿಲ್ಲ. ಈ ಮನಕಲುಕುವ ಘಟನೆ ಸಂಡೂರು ತಾಲೂಕಿನ ಹೊಸ‌ ಚಪ್ಪರದ ಹಳ್ಳಿಯಲ್ಲಿ ನಡೆದಿದೆ.

ಸೋಮವಾರ ಬೆಳಗ್ಗೆಯೇ ಮುಖಕ್ಕೆ ಮಾಸ್ಕ್ ಧರಿಸಿಕೊಂಡು ಹೆಂಡತಿ ಊರಿಗೆ ಆರೋಪಿ ಮಾರುತಿ ಬಂದಿದ್ದ. ಹೆಂಡತಿ ಮನೆ ಹೊರಗಡೆ ಕೆಲಸ ಮಾಡುತ್ತಿದ್ದಾಗ ತನ್ನ ಮಕ್ಕಳ ಎದುರೇ ಹೆಂಡತಿಯ ಬೆನ್ನು ಮತ್ತು ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ತಡೆಯಲು ಬಂದ ಮಾವ ಪಾಂಡುರಂಗ ಅವರ ತಲೆಗೆ ಹೊಡೆದು ಹೊಟ್ಟೆಗೆ ಚಾಕುವಿನಿಂದ ಇರಿದಿದ್ದಾನೆ. ಇಬ್ಬರನ್ನೂ ಸ್ಥಳೀಯರು ಕೂಡಲೇ ವಿಮ್ಸ್‌ಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶ್ವೇತಾ ಮೃತಪಟ್ಟಿದ್ದು, ಅವರ ತಂದೆ ಪಾಂಡುರಂಗ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣ ನಡೆದ ಕೂಡಲೇ ಸಂಡೂರು ಪೊಲೀಸರು ಸ್ಥಳಕ್ಕೆ ತೆರಳಿ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಈ ಕುರಿತಾಗಿ ಸಂಡೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಿರುಕುಳ ತಾಳದೆ ತವರಿಗೆ ಬಂದ ಶ್ವೇತಾ

ಕಳೆದ 11 ವರ್ಷದ ಹಿಂದೆ ಶ್ವೇತಾಳನ್ನು ಮಾರುತಿಗೆ ಕೊಟ್ಟು ವಿವಾಹ ಮಾಡಲಾಗಿತ್ತು. ದಂಪತಿಗೆ 10 ವರ್ಷದ ಶ್ರೇಹಾನ್ ಎನ್ನುವ ಮಗ, 8 ವರ್ಷದ ಶ್ರೇಯಾ ಎನ್ನುವ ಮಗಳಿದ್ದಾಳೆ. ಕಳೆದ ಕೆಲ ವರ್ಷಗಳಿಂದ ಶ್ವೇತಾಗೆ ಮಾರುತಿ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ್ದಾನೆ. ಇದರಿಂದಾಗಿ ಬೇಸತ್ತ ಶ್ವೇತಾ ತನ್ನ ಇಬ್ಬರು ಮಕ್ಕಳೊಂದಿಗೆ ತಂದೆಯ ಮನೆ ಹೊಸ ಚಪ್ಪರದಹಳ್ಳಿಗೆ ಕಳೆದ ಒಂದೂವರೆ ತಿಂಗಳ ಹಿಂದೆ ಮರಳಿದ್ದಳು ಎಂದು ಪೊಲೀಸರ ವಿಚಾರಣೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ | Accident | ಸಿದ್ದರಾಮೋತ್ಸವಕ್ಕೆ ಹೊರಟಿದ್ದ ಬಸ್‌- ಕಾರು ಡಿಕ್ಕಿ; ಚಾಲಕ ಸಾವು, ಆರು ಮಂದಿ ಗಂಭೀರ

Exit mobile version