Site icon Vistara News

ಮಳಲಿ ಮಸೀದಿ-ಮಂದಿರ ವಿವಾದ: ಕೇಶವ ಕೃಪಾದ ನಿರ್ಧಾರವೇ ಅಂತಿಮ ಎಂದು ಗೇಲಿ ಮಾಡಿದ ಕುಮಾರಸ್ವಾಮಿ

H D KUMARASWAMY

ಮೈಸೂರು: ಮಂಗಳೂರಿನ ಮಳಲಿ ಮಸೀದಿ-ಮಂದಿರ ವಿವಾದಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿರುವ ಆರ್‌ಎಸ್‌ಎಸ್‌ ಕೇಂದ್ರ ಕಚೇರಿ ʼಕೇಶವ ಕೃಪಾʼದ ತೀರ್ಮಾನಗಳೇ ಅಂತಿಮವಾಗಿರುತ್ತವೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಬುಧವಾರ ಮೈಸೂರಿನಲ್ಲಿ ಮಾತನಾಡಿದ ಅವರು, ಮಳಲಿ ಮಸೀದಿಯ ಕುರಿತ ತಾಂಬೂಲ ಪ್ರಶ್ನೆಯಿಂದ ದೊರೆತ ಉತ್ತರಕ್ಕಿಂತ ಆರ್‌ಎಸ್‌ಎಸ್‌ ನಾಯಕರಿಂದ ಬರುವ ಸಂದೇಶಗಳೇ ಮುಖ್ಯ. ಅದನ್ನೇ ಸರ್ಕಾರ ಪಾಲಿಸುತ್ತದೆ. ಈ ರೀತಿಯ ಬೆಳವಣಿಗೆಯಿಂದ ದೇಶಕ್ಕೆ ಉತ್ತಮ ಭವಿಷ್ಯ ಖಂಡಿತಾ ಇಲ್ಲ. ಇನ್ನೂ ಒಂದು ವರ್ಷ ಈ ತರಹದ ಬೆಳವಣಿಗೆಗಳು ನಡೆಯುತ್ತಲೇ ಇರುತ್ತವೆ. ಇದರಿಂದ ದೇಶದ ಶಾಂತಿ, ಸಾಮರಸ್ಯ ಮತ್ತಷ್ಟು ಹದಗೆಡುವ ಆತಂಕ ಎದುರಾಗಿದೆ ಎಂದರು.

ʼʼಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ವಿವಾದದ ಬಗ್ಗೆ ಪ್ರತಿಕ್ರಿಯಿಸಿದ ಅವರು, ದೇವರು ಕನಸಿನಲ್ಲೇನಾದ್ರೂ ಬಂದು ತನ್ನ ಮೂಲ ಸ್ಥಾನ ಇಲ್ಲಿದೆ ಅಂತ ಹೇಳಿದ್ದಾನೆಯೆ? ಇದನ್ನು ನೋಡಿದ್ರೆ ಮತ್ತೊಂದು ವಿವಾದ ಶುರು ಆಗುವ ಲಕ್ಷಣ ಕಾಣಿಸುತ್ತಿದೆ. ಟಿಪ್ಪು ತನ್ನ ಕಾಲದಲ್ಲಿ ಹಲವು ಹಿಂದೂ ದೇವಾಲಯಗಳಿಗೆ ಭೂಮಿ ದಾನ ಮಾಡಿದ್ದ, ಈ ಕುರಿತು ಆ ಸಮಾಜದವರು ಕೇಳಿದರೆ ಅವರಿಗೆ ದೇಗುಲ ಬಿಟ್ಟುಕೊಡ್ತಿರಾʼʼ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.

ಮಂಡ್ಯಕ್ಕೆ ಸಿದ್ದರಾಮಯ್ಯ ಕೊಡುಗೆ ಏನು?
ʼʼವಿಧಾನಪರಿಷತ್ ಚುನಾವಣೆಯಲ್ಲಿ ಜೆಡಿಎಸ್ ಹಿತ ಶತ್ರುಗಳಿಂದ ತಮಗೆ ಲಾಭ ಆಗುತ್ತದೆ ಎಂದು ಕಾಂಗ್ರೆಸ್ ನಂಬಿಕೊಂಡಿದೆ. ಅದ್ಯಾವುದೂ ನಡೆಯುವುದಿಲ್ಲ. ಪಕ್ಷದಲ್ಲಿರುವ ಹಿತಶತ್ರುಗಳು ಈಗ ನೇರ ಶತ್ರುಗಳಾಗಿದ್ದಾರೆ. ಅವರ ಬಗ್ಗೆ ನಮ್ಮ ಕಾರ್ಯಕರ್ತರಿಗೆ ಅರಿವಾಗಿದೆ‌ʼʼ ಎಂದು ಕುಮಾಸ್ವಾಮಿ ಹೇಳಿದರು.

ʼʼಮಂಡ್ಯಕ್ಕೆ ಕುಮಾರಸ್ವಾಮಿ ಕೊಡುಗೆ ಏನು ಎಂದು ಕಾಂಗ್ರೆಸ್‌ ನಾಯಕ ಸಿದ್ದರಾಮಯ್ಯ ಕೇಳಿದ್ದಾರೆ. ತಮ್ಮ ಕೊಡುಗೆ ಏನು‌ ಎಂದು ಸಿದ್ದರಾಮಯ್ಯ ಮೊದಲು ಹೇಳಲಿ. ನಿಮ್ಮ ಅಧಿಕಾರಾವಧಿಯಲ್ಲಿ ರೈತರು ಆತ್ಮಹತ್ಯೆ ಮಾಡಿಕೊಂಡರು. ಅದು ನಿಮ್ಮ‌ ಕೊಡುಗೆಯೇ? 200 ಕುಟುಂಬಗಳನ್ನು ಅನಾಥ ಮಾಡಿದ್ದು ನಿಮ್ಮ ಕೊಡುಗೆಯೇ? ನಮ್ಮ ಕೊಡುಗೆ ಏನು ಎಂಬುದು ಮಂಡ್ಯ ಜನರಿಗೆ ಗೊತ್ತಿದೆʼʼ ಎಂದು ಕುಮಾರಸ್ವಾಮಿ ಪ್ರತ್ಯುತ್ತರ ನೀಡಿದರು.

ಇದನ್ನೂ ಓದಿ | ಪಠ್ಯಪುಸ್ತಕ ಪರಿಷ್ಕರಣೆ | ನಾಡಗೀತೆಯನ್ನು ಅಪಮಾನಿಸಿದರೆ ಸುಮ್ಮನಿರುವುದಿಲ್ಲ: HDK

ʼʼಬಿಎಸ್‌ವೈ ಪುತ್ರ ವಿಜಯೇಂದ್ರಗೆ ಮೇಲ್ಮನೆ ಟಿಕೆಟ್ ತಪ್ಪಿದ ವಿಚಾರ ಪ್ರಸ್ತಾಪಿಸಿದ ಅವರು ʼʼಯಾವುದೋ ಸಿದ್ಧಾಂತದ ಕಥೆ ಹೇಳಿ‌ ಅವರಿಗೆ ಟಿಕೆಟ್ ಕೊಟ್ಟಿಲ್ಲ. ಇದು ಬಿಜೆಪಿಗೆ ತಿರುಗುಬಾಣವಾಗುವ ಲಕ್ಷಣ ಕಾಣಿಸುತ್ತಿದೆ. ಇದರಿಂದ ಬೇರೆ ಪಕ್ಷಕ್ಕೆ ಲಾಭ-ನಷ್ಟದ ಪ್ರಶ್ನೆ ಇಲ್ಲ‌. ಆದರೆ ಸರ್ಕಾರದ ಮೇಲೆ ಇದು ಗಂಭೀರ ಪರಿಣಾಮ ಬೀರಬಹುದು. ಆಡಳಿತದ ಮೇಲೂ ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ. ಹಾಗೆಯೇ ಬಿಜೆಪಿಯಲ್ಲಿ ಗುಂಪುಗಾರಿಗೆ ಹೆಚ್ಚಬಹುದುʼʼ ಎಂದು ಕುಮಾರಸ್ವಾಮಿ ವಿಶ್ಲೇಷಿಸಿದರು.

Exit mobile version