Site icon Vistara News

Karnataka Election: ಪೊಲೀಸರನ್ನು ಬಳಸಿಕೊಂಡು ಕಿರುಕುಳ; ಶೆಟ್ಟರ್ ವಿರುದ್ಧ ಕಾಂಗ್ರೆಸ್‌ ಆರೋಪ

Jagadish Shettar calls meeting of bjp supporters on April 16

Jagadish Shettar calls meeting of bjp supporters on April 16

ಹುಬ್ಬಳ್ಳಿ.: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಪೊಲೀಸರನ್ನು ಬಳಸಿಕೊಂಡು ಕಿರುಕುಳ ನೀಡುತ್ತಿದ್ದಾರೆ. ಚುನಾವಣಾ (Karnataka Election) ನೀತಿ ಸಂಹಿತೆ ಹೆಸರಲ್ಲಿ ಪೊಲೀಸರಿಂದ ದಾಳಿ ಮಾಡಿಸಿ ಕಾಂಗ್ರೆಸ್ ಕಾರ್ಯಕರ್ತರಿಗೆ ಮಾಜಿ ಸಿಎಂ ತೊಂದರೆ ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡರು ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿಮಠ, ಚುನಾವಣಾ ನೀತಿ ಸಂಹಿತೆ ಹೆಸರಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಮನೆ ಮೇಲೆ ದಾಳಿ ನಡೆಸಿರುವ ಪೊಲೀಸರು ಅಡುಗೆಮನೆಯಲ್ಲಿದ್ದ ಪಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಹಿಂದೆ ಕೊರೊನಾ ಸೇನಾನಿಗಳು, ಆಟೋ ಚಾಲಕರು, ಜೋಗತಿಯರಿಗೆ ಸನ್ಮಾನಿಸಿ ಕುಕ್ಕರ್ ವಿತರಣೆ ಮಾಡಲಾಗಿತ್ತು. ಆದರೆ ಈಗ ಪೊಲೀಸರು ದಾಳಿ ಮಾಡಿ ಕುಕ್ಕರ್ ಪರಿಶೀಲನೆ ಮಾಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Panchamasali: ಮೋದಿ, ಶಾ ಮಧ್ಯಪ್ರವೇಶದಿಂದ ಮೀಸಲಾತಿ ಸಿಕ್ಕಿದೆ; ಮುಂದೆ OBC ಹೋರಾಟ: ಬಸವ ಜಯಮೃತ್ಯುಂಜಯ ಸ್ವಾಮೀಜಿ

ಬುಧವಾರ ರಾತ್ರಿ ಕಾಂಗ್ರೆಸ್ ಮುಖಂಡ ಸುನೀಲ್ ಮಠಪತಿ ಅವರ ಗೋಪನಕೊಪ್ಪದ ನಿವಾಸ ಮತ್ತು ಕಾಂಗ್ರೆಸ್ ಕಚೇರಿ ಮೇಲೆ ಎಸಿಪಿ, ಕೇಶ್ವಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಮತ್ತು ಪಿಎಸ್ಐ ದಾಳಿ ಮಾಡಿ ತಪಾಸಣೆ ಹೆಸರಲ್ಲಿ ತಡರಾತ್ರಿ ಮಠಪತಿ ಅವರಿಗೆ ಕಿರುಕುಳ ನೀಡಿದ್ದಾರೆ ಎಂದವರು ಕಿಡಿಕಾರಿದ್ದಾರೆ.

ಅಡುಗೆಮನೆಯಲ್ಲಿ ದೈನಂದಿನ ಬಳಕೆಗೆ ಇಡಲಾಗಿದ್ದ 2 ಪಾತ್ರೆಗಳು, 4 ತಟ್ಟೆಗಳು, 1 ಇಡ್ಲಿ ಪಾತ್ರೆ ಮತ್ತು 2 ಕುಕ್ಕರ್‌ ಅನ್ನು ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದಾರೆ. ಈ ಬಾರಿ ಹಾಲಿ ಶಾಸಕ ಜಗದೀಶ್ ಶೆಟ್ಟರ್ ಸೋಲುವ ಭಯದಿಂದ ಪೊಲೀಸ್ ಬಲಪ್ರಯೋಗ ಬಳಸಿ ಕಾಂಗ್ರೇಸ್ ಕಾರ್ಯಕರ್ತರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಪೊಲೀಸರು ಶಾಸಕರ ಕೈಗೊಂಬೆ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಸುನಿಲ್ ಮಠಪತಿ ಆರೋಪಿಸಿದ್ದಾರೆ.

3 ಪಕ್ಷಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು, ಸುಳ್ಳುಗಾರರಿದ್ದಾರೆ: ಮುಖ್ಯಮಂತ್ರಿ ಚಂದ್ರು

ಹುಬ್ಬಳ್ಳಿ: ರಾಜ್ಯದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮೂರೂ ಪಕ್ಷಗಳಲ್ಲಿ 75 ವರ್ಷಗಳಿಂದ ಆಡಳಿತ ಮಾಡಿವೆ. ಮೂರೂ ಪಾರ್ಟಿಗಳಲ್ಲಿ ದರೋಡೆಕೋರರು, ಅತ್ಯಾಚಾರಿಗಳು, ಸುಳ್ಳುಗಾರರಿದ್ದಾರೆ ಎಂದು ಆಪ್ ಪಕ್ಷದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಟೀಕಿಸಿದ್ದಾರೆ.

ಹುಬ್ಬಳಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿದ ಅವರು, ಇವರೆಲ್ಲರು ತೊಲಗಬೇಕಿದೆ. ರಾಜ್ಯದಲ್ಲಿ ಸ್ವಚ್ಛ ಭ್ರಷ್ಟಾಚಾರ ರಹಿತ ಆಡಳಿತಕ್ಕಾಗಿ ಆಮ್ ಆದ್ಮಿ ಪಕ್ಷ ಗೆಲ್ಲಬೇಕಿದೆ. ಜೆಡಿಎಸ್, ಬಿಜೆಪಿ, ಕಾಂಗ್ರೆಸ್ ರಾಜ್ಯದಲ್ಲಿ ಭ್ರಷ್ಟಾಚಾರವನ್ನು ಕರಗತ ಮಾಡಿಕೊಂಡಿವೆ. ಒಂದು ಕಡೆ ಜೆಡಿಎಸ್ ಅನೈತಿಕವಾಗಿ ಅಧಿಕಾರ ಹಿಡಿಯುತ್ತಿದೆ. ಮತ್ತೊಂದು ಕಡೆ ಸರ್ವಾಧಿಕಾರಿ ಧೋರಣೆ, ಭ್ರಷ್ಟಾಚಾರ, ದುರಾಡಳಿತ ಜತೆಗೆ ಅಘೋಷಿತ ತುರ್ತು ಪರಿಸ್ಥಿತಿಯನ್ನು ಬಿಜೆಪಿ ಹುಟ್ಟುಹಾಕಿದೆ ಎಂದು ಟೀಕಿಸಿದರು.

ಇಷ್ಟು ವರ್ಷ ದೇಶದ ಆಳಿದ ಕಾಂಗ್ರೆಸ್ ಈಗ ಗ್ಯಾರಂಟಿ ಕಾರ್ಡ್ ಕೊಡುತ್ತಿದೆ. ಇದು ಸಹ ನಮ್ಮ ಯೋಜನೆಗಳ ಕಾಪಿ ಎಂದು ಆರೋಪಿಸಿದ ಅವರು, ಚುನಾವಣೆ ದೃಷ್ಟಿಯಿಂದ ಬಿಜೆಪಿ ಒಳಮೀಸಲಾತಿ ಘೋಷಣೆ ಮಾಡಿದೆ, ಇದು ಖಂಡನೀಯ. ಜನಗಣತಿ ಆಧಾರದ ಮೇಲೆ ಮತ್ತು ಕಾಂತರಾಜ ಆಯೋಗದ ವರದಿ ಆಧಾರದ ಮೇಲೆ‌ ಮೀಸಲಾತಿ ನೀಡಬೇಕು. ಇದಕ್ಕೂ ಮೊದಲು ಜಯಪ್ರಕಾಶ ಹೆಗ್ಡೆ ಅವರು ನೀಡಿದ ಮಧ್ಯಂತರ ವರದಿ ಅನುಷ್ಠಾನ ಮಾಡಬೇಕೆಂದು ಆಗ್ರಹಿಸಿದರು.

ಇದನ್ನೂ ಓದಿ | Muslim Reservation: ಕ್ರೈಸ್ತ, ಜೈನರಿಗೆ ಮೀಸಲಾತಿ ಮುಂದುವರಿಕೆ; ಮುಸ್ಲಿಮರು ಮಾತ್ರ ಹೊರಕ್ಕೆ: ವರ್ಗೀಕರಣದ ಕುರಿತು ಚರ್ಚೆ

ದೇಶವನ್ನು ಭ್ರಷ್ಟಾಚಾರ ಮುಕ್ತಮಾಡುವುದೇ ಆಪ್ ಗುರಿ. ರಾಜ್ಯದ ವಿಧಾನ ಸಭಾ ಚುನಾವಣೆಗೆ ಸಂಬಂಧಿಸಿದಂತೆ, ಶ್ಯೂನ್ಯ ಭ್ರಷ್ಟಾಚಾರ ಗ್ಯಾರಂಟಿ, ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ, ಪ್ರತಿ ಮನೆಗೆ 300 ಯೂನಿಟ್ ಉಚಿತ ವಿದ್ಯುತ್, ಉಚಿತ ಉತ್ತಮ ಶಿಕ್ಷಣ, ಉಚಿತ ಬಸ್ ಸೌಲಭ್ಯ, ಉಚಿತ ಉನ್ನತ ಶಿಕ್ಷಣ, ಮೊಹಲ್ಲಾ ಕ್ಲಿನಿಕ್, ಯುವಕರಿಗೆ 3000 ನಿರುದ್ಯೋಗ ಭತ್ಯೆ, ಮಹಿಳೆಯರಿಗೆ ಗ್ಯಾರಂಟಿ ಉದ್ಯೋಗ ಮೀಸಲು, ಕೇಂದ್ರದ ವಿವಾದಿತ ಮೂರು ಕೃಷಿ ಕಾನೂನು ರದ್ದುಗೊಳಿಸುವುದು, ಬೆಂಬಲ ಬೆಲೆ, ಸಣ್ಣ ರೈತರಿಗೆ ಒಂದು ಬಾರಿ‌ ಸಾಲ ಮನ್ನಾ, ಸರ್ಕಾರಿ ಉದ್ಯೋಗಕ್ಕೆ ಕನ್ನಡ ಕಡ್ಡಾಯ ಎಂಬ ಅಂಶಗಳನ್ನು ನಮ್ಮ ಪಕ್ಷದ ಪ್ರಣಾಳಿಕೆ ಹೊಂದಿದೆ ಎಂದು ತಿಳಿಸಿದರು.

Exit mobile version