ಮೈಸೂರು: ಲೋಕಸಭಾ ಚುನಾವಣೆ (Lok Sabha Election) ಹಿನ್ನೆಲೆಯಲ್ಲಿ ಪಕ್ಷ ಸಂಘಟನೆಗಾಗಿ ಆಗಸ್ಟ್ 15ರ ನಂತರ ರಾಜ್ಯ ಪ್ರವಾಸ ಕೈಗೊಳ್ಳಲು ದಳಪತಿಗಳು ನಿರ್ಧರಿಸಿದ್ದಾರೆ. ಈ ನಿಟ್ಟಿನಲ್ಲಿ ಸಂಘಟಿತ ಹೋರಾಟ ಮಾಡಲು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷರಾಗಿ ಜಿ.ಟಿ.ದೇವೇಗೌಡ, ಸಂಚಾಲಕರಾಗಿ ವೈ.ಎಸ್.ವಿ.ದತ್ತಾ ಅವರನ್ನು ಆಯ್ಕೆ ಮಾಡಲಾಗಿದೆ. ಕೋರ್ ಕಮಿಟಿ ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದಕ್ಕೆ ಪಕ್ಷದ ವರಿಷ್ಠ ಎಚ್.ಡಿ.ದೇವೇಗೌಡ ಅವರಿಗೆ ಜಿ.ಟಿ.ದೇವೇಗೌಡ ಧನ್ಯವಾದ ಸಲ್ಲಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ ಅವರು, ರಾಜ್ಯ ಪ್ರವಾಸ ಮಾಡಿ ಪಕ್ಷ ಕಟ್ಟಬೇಕಿದೆ. ಇದಕ್ಕಾಗಿ ರಾಷ್ಟ್ರೀಯ ಅಧ್ಯಕ್ಷರು 20 ಸದಸ್ಯರ ಕೋರ್ ಕಮಿಟಿ ರಚಿಸಿದ್ದಾರೆ. ನನ್ನ ಅಧ್ಯಕ್ಷತೆಯಲ್ಲೇ ಸಮಿತಿ ಆಗಬೇಕು ಎಂದು ದೇವೇಗೌಡರು ತೀರ್ಮಾನ ಮಾಡಿದ್ದಾರೆ. ನನ್ನ ಮೇಲೆ ಇಟ್ಟಿರುವ ಪ್ರೀತಿಗಾಗಿ ನಾನು ಅವರಿಗೆ ಧನ್ಯವಾದ ಸಲ್ಲಿಸುತ್ತೇನೆ. ನನ್ನೊಂದಿಗೆ ಮಾಜಿ ಸಚಿವರಾದ ವೈ.ಎಸ್.ವಿ.ದತ್ತ, ಬಂಡೆಪ್ಪ ಕಾಶಂಪೂರ್ ಕೂಡ ಇರುತ್ತಾರೆ ಎಂದು ತಿಳಿಸಿದರು.
ಇದನ್ನೂ ಓದಿ | Minister Chaluvarayaswamy : ಕೃಷಿ ಸಚಿವ ಚಲುವರಾಯಸ್ವಾಮಿ ಮೇಲೆ ಲಂಚ ಆರೋಪ; ಸಿಐಡಿ ತನಿಖೆಗೆ ನಿರ್ಧಾರ
ಜೆಡಿಎಸ್ ಪಕ್ಷಕ್ಕೆ ಸೋಲು- ಗೆಲುವು ಹೊಸದಲ್ಲ. ವಿಧಾನಸಭೆ ಚುನಾವಣೆಯಲ್ಲಿ ಸೋಲಾಗಿದೆ. ಹೀಗಾಗಿ ಎಚ್.ಡಿ.ದೇವೇಗೌಡ, ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಆಗಸ್ಟ್ 15ರಂದು ಸಭೆ ನಡೆಯಲಿದೆ. ಎಲ್ಲ 20 ಸದಸ್ಯರನ್ನೂ ಸೇರಿಸಿ ಸಭೆ ನಡೆಸಿ ಮುಂದಿನ ಯೋಜನೆ ರೂಪಿಸುತ್ತೇವೆ.
ಲೋಕಸಭಾ ಚುನಾವಣೆಗೆ ಇನ್ನು 7- 8 ತಿಂಗಳು ಬಾಕಿ ಇದೆ. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಬೇಕು. ಇದಕ್ಕಾಗಿ ಶೀಘ್ರದಲ್ಲೇ ರಾಜ್ಯ ಪ್ರವಾಸ ಮಾಡಲಾಗುವುದು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಪಂಚರತ್ನ ಯೋಜನೆಯ ಉದ್ದೇಶಗಳನ್ನು ಜನರಿಗೆ ತಿಳಿಸಬೇಕು. ಪಕ್ಷ ಸಂಘಟನೆ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುವುದು ಎಂದು ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡ ತಿಳಿಸಿದರು.
ಇದನ್ನೂ ಓದಿ | CT Ravi : ಡಿಕೆಶಿ ಗುರಿ ಇರುವುದು ಬೆಂಗಳೂರು ಅಭಿವೃದ್ಧಿಯಲ್ಲ, ತಮ್ಮ ರಿಯಲ್ ಎಸ್ಟೇಟ್ ಅಭಿವೃದ್ಧಿ ಎಂದ ಸಿ.ಟಿ ರವಿ
ಪಕ್ಷ ಸೂಚಿಸಿದರೆ ಮೈಸೂರು-ಕೊಡಗು ಕ್ಷೇತ್ರದಿಂದ ನಾನೇ ಅಭ್ಯರ್ಥಿ?
ರಾಜ್ಯದ ಜನ ಬುದ್ಧಿವಂತರು, ರಾಜ್ಯದ ಅಧಿಕಾರವನ್ನು ಕಾಂಗ್ರೆಸ್‌ಗೆ ಕೊಟ್ಟಿದ್ದಾರೆ. ದೇಶದ ಅಧಿಕಾರವನ್ನು ಸಮರ್ಥ ನಾಯಕನ ಕೈಗೆ ಕೊಡಲಿದ್ದಾರೆ. ಮೈತ್ರಿ ಬಗ್ಗೆ ವರಿಷ್ಠರು ತೀರ್ಮಾನ ಮಾಡಲಿದ್ದಾರೆ. ಮೈಸೂರು-ಕೊಡಗು ಕ್ಷೇತ್ರದ ವಿಚಾರವೂ ಅಷ್ಟೆ. ಯಾರು ಅಭ್ಯರ್ಥಿ ಆಗಬೇಕು ಎಂದು ವರಿಷ್ಠರು ನಿರ್ಧಾರ ಮಾಡುತ್ತಾರೆ. ಪಕ್ಷ ಸೂಚನೆ ನೀಡಿದರೆ ನಾನೇ ಅಭ್ಯರ್ಥಿ ಆಗಬೇಕಾಗುತ್ತದೆ ಎಂದು ಜಿ.ಟಿ.ದೇವೇಗೌಡ ಹೇಳಿದರು.
ಎದೆಗುಂದದೆ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನ ನೀಡಬೇಕು: ಎಚ್.ಡಿ.ದೇವೇಗೌಡ ಕರೆ
ಮುಂಬರುವ ಲೋಕಸಭೆ ಚುನಾವಣೆಗೆ ಸಿದ್ಧತೆ, ಪಕ್ಷ ಸಂಘಟನೆ ಹಾಗೂ ನೂತನ ಕೋರ್ ಕಮಿಟಿ ರಚನೆ ಸೇರಿ ಹಲವು ವಿಷಯಗಳ ಚರ್ಚೆಗಾಗಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ, ಮಾಜಿ ಪ್ರಧಾನಮಂತ್ರಿಗಳೂ ಆಗಿರುವ ಎಚ್.ಡಿ.ದೇವೇಗೌಡರ ಅಧ್ಯಕ್ಷತೆಯಲ್ಲಿ ಸೋಮವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಉಪಸ್ಥಿತಿಯಲ್ಲಿ ನಡೆದ ಪಕ್ಷದ ಪ್ರಮುಖರ ಸಭೆಯಲ್ಲಿ ಮಹತ್ವದ ನಿರ್ಣಯ ಕೈಗೊಳ್ಳಲಾಯಿತು.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆಗಿರುವ ಹಿನ್ನಡೆಯ ಬಗ್ಗೆ ಎದೆಗುಂದದೆ ಪಕ್ಷದ ಸಂಘಟನೆ ಕಡೆ ಹೆಚ್ಚು ಗಮನ ನೀಡಬೇಕು ಎಂದು ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರ ಅವರು ಸಭೆಯಲ್ಲಿ ತಾಕೀತು ಮಾಡಿದರು. ಅವರ ಆದೇಶದಂತೆ ಪಕ್ಷ ಸಂಘಟನೆಗೆ ಬಹಳಷ್ಟು ಒತ್ತು ಕೊಟ್ಟು ಕೆಲಸ ಮಾಡಲು ನಾಯಕರು ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ | BBMP Bill Payment : ರಾಜ್ಯಪಾಲರ ಅಂಗಳಕ್ಕೆ ಬಿಬಿಎಂಪಿ ಬಿಲ್ ಗಲಾಟೆ; ಡಿಕೆಶಿ ವಿರುದ್ಧ ಕಮಿಷನ್ ದೂರು!
ಮಾಜಿ ಸಚಿವ ಜಿ.ಟಿ. ದೇವೇಗೌಡರ ಅಧ್ಯಕ್ಷತೆಯಲ್ಲಿ ನೂತನ ಕೋರ್ ಕಮಿಟಿ ರಚನೆಗೆ ಸಭೆಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. ಮಾಜಿ ಶಾಸಕರಾದ ವೈ.ಎಸ್.ವಿ ದತ್ತಾ ಅವರು ಈ ಕಮಿಟಿಗೆ ಸಂಚಾಲಕರಾಗಿರುತ್ತಾರೆ. ಒಟ್ಟು 20 ಸದಸ್ಯರು ಕಮಿಟಿಯಲ್ಲಿ ಇರುತ್ತಾರೆ.