ಅನಿಲ್ ಕಾಜಗಾರ, ಬೆಳಗಾವಿ
ಹಾಲಿ ಮುಖ್ಯಮಂತ್ರಿ ಏಕನಾಥ ಶಿಂಧೆ ಸೇರಿ ಮಹಾರಾಷ್ಟ್ರದ ಹಲವು ನಾಯಕರ ರಾಜಕೀಯ ಪ್ರವೇಶಕ್ಕೆ ಹಾಗೂ ರಾಜಕೀಯವಾಗಿ ಉತ್ತುಂಗಕ್ಕೇರಲು ಕಾರಣವಾಗಿದ್ದ ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ ಅಂತಿಮ ಘಟ್ಟಕ್ಕೆ ತಲುಪಿದೆ. ನವೆಂಬರ್ 23ಕ್ಕೆ ಸುಪ್ರೀಂ ಕೋರ್ಟ್ ಈ ಸಂಬಂಧ ಅಂತಿಮ ತೀರ್ಪು ಪ್ರಕಟಿಸಲಿದ್ದು, ನವೆಂಬರ್ 21 ರಂದು (ಸೋಮವಾರ) ಮಹಾರಾಷ್ಟ್ರ ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲಿ ಹೈಪವರ್ ಮೀಟಿಂಗ್ ನಡೆಯಲಿದೆ. ಮಹಾರಾಷ್ಟ್ರದ ಖಾಸಗಿ ಹೋಟೆಲ್‍ನಲ್ಲಿ ಮಧ್ಯಾಹ್ನ ನಡೆಯಲಿರುವ ಸಭೆಯಲ್ಲಿ ಮಾಹಾರಾಷ್ಟ್ರ ಡಿಸಿಎಂ ದೇವೇಂದ್ರ ಫಡ್ನವೀಸ್, ಮಾಜಿ ಸಿಎಂ ಶರದ್ ಪವಾರ್ ಸೇರಿ ಬಿಜೆಪಿ, ಕಾಂಗ್ರೆಸ್, ಶಿವಸೇನೆ, ಎನ್‍ಸಿಪಿಯ ಘಟಾನುಘಟಿ ನಾಯಕರು ಭಾಗವಹಿಸಲಿದ್ದಾರೆ. ನವೆಂಬರ್ 23ಕ್ಕೆ ಸುಪ್ರೀಂ ಕೋರ್ಟ್ ನೀಡುವ ತೀರ್ಪು ಬಳಿಕ ಮಹಾರಾಷ್ಟ್ರದ ನಿಲುವು ಏನಿರಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ.
ಬೆಳಗಾವಿ, ಖಾನಾಪುರ, ನಿಪ್ಪಾಣಿ, ಬೀದರ್, ಬಾಲ್ಕಿ, ಕಾರವಾರ ಸೇರಿದಂತೆ ಕರ್ನಾಟಕ ಗಡಿಭಾಗದಲ್ಲಿರುವ 865 ಮರಾಠಿ ಭಾಷಿಕ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎನ್ನುವ ವಾದವನ್ನು ಮಹಾರಾಷ್ಟ್ರ ಏಕೀಕರಣ ಸಮಿತಿ ಹಲವು ವರ್ಷಗಳಿಂದ ಮಂಡಿಸುತ್ತ ಬಂದಿದೆ. ಮಹಾರಾಷ್ಟ್ರ ಸರ್ಕಾರ ಕೂಡ ಆರಂಭದಿಂದಲೂ ಎಂಇಎಸ್ ಬೆಂಬಲಕ್ಕೆ ನಿಂತಿದೆ. ಈ ಸಂಬಂಧ ಎಂಇಎಸ್, ಗಡಿಭಾಗದಲ್ಲಿ ಸಾಕಷ್ಟು ಹಿಂಸಾಚಾರಗಳನ್ನೂ ನಡೆಸಿದೆ. ನಂತರ ತಾನೇ ಒಪ್ಪಿಕೊಂಡ ಮಹಾಜನ ಆಯೋಗದ ವರದಿ ತಿರಸ್ಕರಿಸಿ 2004ರಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು.
ಎರಡು ಆಯೋಗಗಳ ವರದಿಯೂ ಕರ್ನಾಟಕ ಪರ
ದೇಶ ಸ್ವತಂತ್ರಗೊಂಡ ಬಳಿಕ ಭಾಷೆಯ ಆಧಾರದ ಮೇಲೆ ರಚನೆಗೊಂಡ ಮೊದಲ ರಾಜ್ಯ ಆಂಧ್ರಪ್ರದೇಶ. ಇದು ಹಲವು ರಾಜ್ಯಗಳ ಭಾಷಾ ಪ್ರೇಮಿಗಳಿಗೆ ಪ್ರೇರಣೆಯೂ ಆಯಿತು. ಈ ಕಾರಣಕ್ಕೆ 8ಕ್ಕೂ ಅಧಿಕ ರಾಜ್ಯಗಳ ಜನರು ಭಾಷೆಯ ಆಧಾರದ ಮೇಲೆ ರಾಜ್ಯಗಳನ್ನು ವಿಂಗಡಿಸುವಂತೆ ಕೇಂದ್ರದ ಮೇಲೆ ಒತ್ತಡ ಹೇರಲು ಆರಂಭಿದರು. ಜನರ ಒತ್ತಡಕ್ಕೆ ಮಣಿದ ಅಂದಿನ ಪ್ರಧಾನಿ ಜವಾಹರಲಾಲ್ ನೆಹರು 1953ರಲ್ಲಿ ಫಜಲ್ ಅಲಿ ಅಧ್ಯಕ್ಷತೆಯಲ್ಲಿ ಮೂರು ಜನ ಸದಸ್ಯರ ಸಮಿತಿ ರಚಿಸಿತು. ಈ ಸಮಿತಿ ದೇಶಾದ್ಯಂತ ಸಂಚರಿಸಿ ಜನರ ಅಭಿಪ್ರಾಯ ಸಂಗ್ರಹಿಸಿ 1955ರಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಿತು. ಈ ವರದಿ ಅಂಗೀಕರಿಸಿದ ಕೇಂದ್ರ ಸರ್ಕಾರ ಭಾಷೆಯ ಆಧಾರದ ಮೇಲೆ ರಾಜ್ಯಗಳ ಮರುವಿಂಗಡನೆ ಮಾಡಿತು. ಆಗ ಮುಂಬೈ ಪ್ರಾಂತ್ಯದಲ್ಲಿದ್ದ ಬೆಳಗಾವಿ ಸೇರಿ ಗಡಿಭಾಗದ 865 ಗ್ರಾಮಗಳು ಮೈಸೂರು ರಾಜ್ಯಕ್ಕೆ ಸೇರಿದವು. (1973 ನವೆಂಬರ್ 1 ಕರ್ನಾಟಕ ಎಂದು ಪುನರ್ ನಾಮಕಾರಣ ಮಾಡಲಾಯಿತು) ಇದಕ್ಕೆ ಮಹಾರಾಷ್ಟ್ರ ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ದಶಕಗಳ ಕಾಲ ಹೋರಾಟ ನಡೆಸಿತು. ಬಳಿಕ ಸುಪ್ರೀಂ ಕೋರ್ಟ್ ಮೆಟ್ಟಿಲನ್ನೂ ಏರಿತ್ತು. ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೇಂದ್ರ ಸರ್ಕಾರ 1966ರಲ್ಲಿ ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯನ್ಯಾಯಮೂರ್ತಿ ಮೆಹರ್‍ಚೆಂದ್ ಮಹಾಜನ್ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತು. ಮಹಾಜನ್ ನೇತೃತ್ವದ ಸಮಿತಿ ಕೂಡ 1967ರಲ್ಲಿ ಕೇಂದ್ರಕ್ಕೆ ಸಲ್ಲಿಸಿದ ವರದಿಯಲ್ಲಿ ಬೆಳಗಾವಿ ಸೇರಿ 865 ಪ್ರದೇಶಗಳು ಕರ್ನಾಟಕಕ್ಕೆ ಸೇರಿದ್ದು ಎಂದು ಉಲ್ಲೇಖಿಸಲಾಗಿತ್ತು. ಮಹಾಜನ್ ವರದಿಯನ್ನೂ ತಿರಸ್ಕರಿಸಿದ್ದ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ.
ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುತ್ತೋ? ಇಲ್ವೋ?
2004ರಲ್ಲಿ ಮಹಾರಾಷ್ಟ್ರ ಸರ್ಕಾರ ಗಡಿ ವಿವಾದ ವಿಚಾರವಾಗಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಒಂದಲ್ಲ, ಎರಡಲ್ಲ ಬರೊಬ್ಬರಿ 19 ವರ್ಷಗಳ ನಡೆದಿದೆ. ನವೆಂಬರ್ 23ಕ್ಕೆ ಸುಪ್ರೀಂ ಕೋರ್ಟ್ ಅಂತಿಮ ತೀರ್ಪು ನೀಡಲಿದೆ. ಗಡಿ ವಿವಾದ ಸುಪ್ರೀಂ ಕೋರ್ಟ್ ವ್ಯಾಪ್ತಿಗೆ ಬರುತ್ತೋ? ಇಲ್ವೋ? ಎಂಬ ಬಗ್ಗೆ ತನ್ನ ಅಭಿಪ್ರಾಯವನ್ನು ಸುಪ್ರೀಂಕೋರ್ಟ್ ತಿಳಿಸಲಿದೆ. ಮಹಾರಾಷ್ಟ್ರದಲ್ಲಿರುವ ಎಲ್ಲ ರಾಜಕೀಯ ಪಕ್ಷಗಳಿಗೆ ಗಡಿವಿವಾದವೇ ಪ್ರಮುಖ ಅಸ್ತ್ರ. ಇದೆ ವಿಚಾರದಲ್ಲಿ ರಾಜಕೀಯ ಮಾಡುವ ಹಲವು ಶಾಸಕರು ಆಯ್ಕೆ ಆಗುವ ಈ ಕಾರಣಕ್ಕೆ ದೇವೇಂದ್ರ ಫಡ್ನವೀಸ್ ಗಡಿವಿವಾದ ನೋಡಿಕೊಳ್ಳಲೆಂದೇ ಪ್ರತ್ಯೇಕ ಸಚಿವರನ್ನು ನೇಮಿಸಿತ್ತು. ಇತ್ತೀಚೆಗಷ್ಟೇ ಪತನವಾದ ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವೂ ಇಬ್ಬರನ್ನು ಗಡಿ ಸಚಿವರನ್ನಾಗಿ ನೇಮಿಸಿತ್ತು. ಉದ್ಧವ್ ಸಂಪುಟದಲ್ಲಿದ್ದ ಹಾಲಿ ಸಿಎಂ ಏಕನಾಥ್ ಶಿಂಧೆ ಕೂಡ ಗಡಿ ಉಸ್ತುವಾರಿ ಸಚಿವರಾಗಿದ್ದರು. ಗಡಿ ಹೋರಾಟದಲ್ಲಿ ಭಾಗಿಯಾಗಿ ಜೈಲುವಾಸವನ್ನೂ ಅನುಭವಿಸಿ ಬಳಿಕ ರಾಜಕೀಯ ಪ್ರವೇಶ ಪಡೆದಿದ್ದ ಏಕನಾಥ ಶಿಂಧೆ ಈಗ ಮಹಾರಾಷ್ಟ್ರ ಸಿಎಂ ಆಗಿದ್ದಾರೆ. ಗಡಿವಿವಾದದ ಬಗ್ಗೆಯೂ ಏಕನಾಥ್ ಶಿಂಧೆ ಆಸಕ್ತಿ ಹೊಂದಿದ್ದು, ನಾಳೆ ಅವರ ನೇತೃತ್ವದಲ್ಲೇ ಸಭೆ ನಡೆಯಲಿದೆ.
ಬುದ್ಧಿಕಲಿಯದ ಕರ್ನಾಟಕ ಸರ್ಕಾರ
ಗಡಿ ಬಗ್ಗೆ ಮಹಾರಾಷ್ಟ್ರ ರಾಜಕೀಯ ಪಕ್ಷಗಳಿಗೆ ಇರುವ ಆಸಕ್ತಿ ಕರ್ನಾಟಕದ ರಾಜಕೀಯ ನಾಯಕರಿಗೆ ಇಲ್ಲ. ಈ ಹಿಂದೆ ಸಿದ್ದರಾಮಯ್ಯ ಸರ್ಕಾರದಲ್ಲಿ ಎಚ್.ಕೆ. ಪಾಟೀಲ ಅವರನ್ನು ಗಡಿ ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿತ್ತು. ಆದರೆ ನಂತರ ಬಂದ ಎಚ್‍ಡಿಕೆ, ಬಿಎಸ್‍ವೈ ಹಾಗೂ ಹಾಲಿ ಸಿಎಂ ಬಸವರಾಜ್ ಬೊಮ್ಮಾಯಿ ಗಡಿ ವಿಚಾರದಲ್ಲಿ ಅಷ್ಟೊಂದು ಆಸಕ್ತಿ ಹೊಂದಿಲ್ಲ ಎನ್ನುವುದಕ್ಕೆ ಅವರ ವರ್ತನೆಗಳೇ ಕಾರಣ. ಗಡಿ ಉಸ್ತುವಾರಿ ಸಚಿವರ ನೇಮಕ ಮಾಡಿಲ್ಲ. ಗಡಿ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗಡಿ ಸಂರಕ್ಷಣಾ ಆಯೋಗಕ್ಕೆ ಪದಾಧಿಕಾರಿಗಳ ನೇಮಕ ಮಾಡಿಲ್ಲ. ನಮ್ಮ ಸರ್ಕಾರದ ಈ ವರ್ತನೆ ಗಡಿ ಭಾಗದ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.
ಇದನ್ನೂ ಓದಿ | ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡನೆಗೆ ಕಾನೂನು ತಜ್ಞರ ನೇಮಕ ಎಂದ ಬೊಮ್ಮಾಯಿ