Site icon Vistara News

Covid 19 Cases: ರಾಜ್ಯದಲ್ಲಿಂದು 78 ಕೊರೊನಾ ಕೇಸ್‌; ಮಂಗಳೂರಲ್ಲಿ ಒಂದು ಸಾವು

Covid 19

ಬೆಂಗಳೂರು: ರಾಜ್ಯದಲ್ಲಿ ಕಳೆದ 24 ಗಂಟೆಯಲ್ಲಿ 78 ಕೊರೊನಾ ಪಾಸಿಟಿವ್‌ ಪ್ರಕರಣಗಳು (Covid 19 Cases) ಪತ್ತೆಯಾಗಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಶುಕ್ರವಾರ ಕೂಡ ಬೆಂಗಳೂರಿನಲ್ಲೇ ಅತಿ ಹೆಚ್ಚು ಪ್ರಕರಣಗಳು ವರದಿಯಾಗಿವೆ, ಇದರಿಂದ ರಾಜ್ಯದಲ್ಲಿನ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 175ಕ್ಕೆ ಏರಿಕೆಯಾಗಿದೆ.

ಕಳೆದ 24 ಗಂಟೆಯಲ್ಲಿ ಒಟ್ಟು 2366 ಮಂದಿಗೆ (1947 RTCPR+ 419 RAT) ಕೋವಿಡ್‌ ಟೆಸ್ಟ್‌ ಮಾಡಲಾಗಿದ್ದು, ಈ ಪೈಕಿ 78 ಮಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಒಟ್ಟು 175 ಸಕ್ರಿಯ ಪ್ರಕರಣಗಳಲ್ಲಿ 162 ಮಂದಿಗೆ ಹೋಮ್ ಐಸೋಲೇಷನ್‌ನಲ್ಲಿ ಇರಲು ಸೂಚನೆ ನೀಡಲಾಗಿದ್ದು, 13 ರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರಲ್ಲಿ 6 ಮಂದಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 7 ಮಂದಿ ಗುಣಮುಖರಾಗಿ ಡಿಸ್ಚಾರ್ಜ್‌ ಆಗಿದ್ದಾರೆ. ರಾಜ್ಯದಲ್ಲಿ ಕೋವಿಡ್ ಪಾಸಿಟಿವಿಟಿ ದರ ಶೇ.3.29 ಇದ್ದು, ಮತ್ತು ಕೋವಿಡ್ ಮರಣ ಪ್ರಮಾಣ ದರ ಶೇ. 1.8 ದಾಖಲಾಗಿದೆ.

ಇದನ್ನೂ ಓದಿ | Covid 19: ಕೊರೊನಾ ವೈರಸ್‌ ಇನ್ನು ನಮ್ಮ ಜೀವನದ ಭಾಗ, ಅದರೊಂದಿಗೇ ಜೀವಿಸಬೇಕು ಎಂದ ತಜ್ಞರು!

ಕೋವಿಡ್‌ ಉಲ್ಬಣ; ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

Cabinet sub committee constituted under Dinesh Gundu Rao

ಬೆಂಗಳೂರು: ಕೊರೊನಾ ವೈರಸ್‌ (Corona Virus) ನೂತನ ರೂಪಾಂತರಿ (Covid Subvariant JN1) ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿ ಗುರುವಾರ (ಡಿ. 21) 6 ಮಂದಿ ಸತ್ತಿದ್ದರೆ, ಶುಕ್ರವಾರ 328 ಹೊಸ ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. ರಾಜ್ಯದಲ್ಲಿಯೂ ಸಹ ಪ್ರಕರಣಗಳು ಕಂಡು ಬರುತ್ತಲೇ ಇವೆ. ಅಲ್ಲದೆ, ಬರುವ 2024ರ ಜನವರಿಯಲ್ಲಿ ರೂಪಾಂತರಿ ವೈರಸ್‌ ಮಹಾಸ್ಫೋಟಗೊಳ್ಳಲಿದೆ ಎಂದು ತಜ್ಞರಿಂದ ಅಂದಾಜಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ. ಈಗ ಇದರ ಭಾಗವಾಗಿ ಕೋವಿಡ್ ನಿಯಂತ್ರಣ ಸಂಬಂಧ ಸಚಿವ ಸಂಪುಟ ಉಪ ಸಮಿತಿಯನ್ನು ರಚಿಸಿ ಸರ್ಕಾರದ ಆದೇಶ ಹೊರಡಿಸಿದೆ.

ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಸಂಪುಟ ಉಪ ಸಮಿತಿಯನ್ನು ರಚನೆ ಮಾಡಿದ್ದು, ಸಚಿವರಾದ ಎಚ್.ಸಿ. ಮಹದೇವಪ್ಪ, ಶರಣ ಪ್ರಕಾಶ್ ಪಾಟೀಲ್, ಎಂ.ಸಿ. ಸುಧಾಕರ್ ಅವರನ್ನು ಸದಸ್ಯರನ್ನಾಗಿ ನೇಮಿಸಲಾಗಿದೆ. ಕೋವಿಡ್ ಸೇರಿ ಸಾಂಕ್ರಾಮಿಕ ರೋಗಗಳ ಕುರಿತು ಈ ಸಮಿತಿಯು ಪರಾಮರ್ಶೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ.

ತಾಂತ್ರಿಕ ಸಮಿತಿ ಸೂಚಿಸಿದ್ರೆ ಮಾತ್ರ ವ್ಯಾಕ್ಸಿನೇಷನ್‌: ದಿನೇಶ್‌ ಗುಂಡೂರಾವ್

ಕೋವಿಡ್‌ಗೆ ಸಂಬಂಧಪಟ್ಟಂತೆ ತಾಂತ್ರಿಕ ಸಮಿತಿ ಸೂಚಿಸಿದರೆ ಮಾತ್ರ ವ್ಯಾಕ್ಸಿನೇಷನ್‌ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಗಳೂರಿನಲ್ಲಿ ಹೇಳಿದರು. ನಾವು ಯಾವುದೇ ಸಂದರ್ಭದಲ್ಲಿಯೂ ಈ ಬಗ್ಗೆ ಸಿದ್ಧರಿದ್ದೇವೆ ಎಂಬುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಕ್ಯಾಬಿನೆಟ್ ಉಪಸಮಿತಿಯು ಸೋಮವಾರ ಅಥವಾ ಮಂಗಳವಾರ ಈ ಬಗ್ಗೆ ಸಭೆ ನಡೆಸಲಿದೆ. ಕೇಂದ್ರ ಮತ್ತು ಬೇರೆ ರಾಜ್ಯಗಳ ಮಾಹಿತಿ ಪಡೆದು ಮುಂದಿನ ನಿರ್ಧಾರವನ್ನು ಅಂದು ಕೈಗೊಳ್ಳಲಾಗುತ್ತದೆ. ಯಾವುದೇ ಕಾರ್ಯಕ್ರಮ ನಿಲ್ಲಿಸುವ ನಿರ್ಧಾರ ಮಾಡಿಲ್ಲ. ಇಲ್ಲಿಯವರೆಗೆ ಎಲ್ಲವೂ ಸಹಜ ಸ್ಥಿತಿಯಲ್ಲಿ ‌ಇರಲಿದೆ ಎಂದು ಸ್ಪಷ್ಟಪಡಿಸಿದರು.

ಈ ಕೋವಿಡ್ ಅಪಾಯಕಾರಿಯಾಗಿ ಇರುವುದಿಲ್ಲ. ಯಾರಿಗೂ ಹೆಚ್ಚು ಅಪಾಯ ಇಲ್ಲ. ಈ ಬಗ್ಗೆ ಮೆಡಿಕಲ್ ತಾಂತ್ರಿಕ ಸಮಿತಿಗಳು ಈಗಾಗಲೇ ಹೇಳಿದೆ. ಆದರೂ ನಮ್ಮ ಎಚ್ಚರಿಕೆಯಲ್ಲಿ ನಾವು ಇರೋದು ಒಳಿತು. ಸಂಪುಟ ಉಪಸಮಿತಿಯು ತಜ್ಞರ ವರದಿ ಪಡೆದು ನಿರ್ಧಾರ ಮಾಡಲಿದೆ. ರಾಜ್ಯದಲ್ಲಿ ಸದ್ಯ ಐದು ಸಾವಿರ ಟೆಸ್ಟಿಂಗ್ ಟಾರ್ಗೆಟ್ ನೀಡಲಾಗಿದೆ. ಗಡಿ ಜಿಲ್ಲೆಯಾದ ಮಂಗಳೂರು, ಮೈಸೂರಿನಲ್ಲಿ ಹೆಚ್ಚು ನಿಗಾ ನೀಡಲಾಗಿದೆ. ವೆಂಟಿಲೇಟರ್ ಕಾರ್ಯನಿರ್ವಹಣೆ ಪರೀಕ್ಷೆ ಬಗ್ಗೆ ಕ್ರಮ ವಹಿಸುತ್ತೇವೆ. ಸರ್ಕಾರಿ ಆಸ್ಪತ್ರೆಗಳಿಗೆ ಪಿಪಿಇ ಕಿಟ್ ಪೂರೈಕೆಯ ಕೆಲಸ ಆಗುತ್ತಿದೆ. ಕೆಲವು ಕಡೆ ಸ್ವಲ್ಪ ತಡ ಆಗಿದೆ. ಆದರೆ, ಎಲ್ಲವೂ ಶೀಘ್ರದಲ್ಲಿ ಆಗಲಿದೆ. ಹೆಚ್ಚು ಟೆಸ್ಟಿಂಗ್ ಮಾಡುವ ಅಗತ್ಯ ಇದೆಯಾ ಅಂತ ನಿರ್ಧಾರ ಮಾಡುತ್ತೇವೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಇದನ್ನೂ ಓದಿ | Covid 19: ಕೋವಿಡ್‌ನಿಂದ ನಿನ್ನೆ ದೇಶದಲ್ಲಿ 6 ಸಾವು; ಇಂದು 328 ಹೊಸ ಪ್ರಕರಣ

ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಮತ್ತು ಗೈಡ್‌ಲೈನ್ಸ್‌ಗಳ ಬಗ್ಗೆ ಮುಂದೆ ನಿರ್ಧಾರವನ್ನು ತೆಗೆದುಕೊಳ್ಳಲಾಗುತ್ತದೆ. ಕ್ರಿಸ್‌ಮಸ್, ಹೊಸ ವರ್ಷಕ್ಕೆ ಯಾವುದೇ ಹೊಸ ಗೈಡ್‌ಲೈನ್ಸ್ ಇಲ್ಲ. ಆದರೆ‌ ಜನ ಇರುವ ಪ್ರದೇಶಗಳಲ್ಲಿ ಮಾಸ್ಕ್ ಧರಿಸಲು ಸಲಹೆ ಕೊಡುತ್ತೇವೆ. ಯಾವುದೂ ಕಡ್ಡಾಯ ಅಲ್ಲ, ನಾವು ಯಾವುದೇ ನಿರ್ಬಂಧ ವಿಧಿಸಲ್ಲ. ಈ ಉಪತಳಿ ಬಗ್ಗೆ ಆತಂಕಪಡುವ ಯಾವುದೇ ಅವಶ್ಯಕತೆ ಇಲ್ಲ. ಹೆಚ್ಚು ಕಡಿಮೆ ಆಗದಂತೆ ಪೂರ್ವ ಸಿದ್ಧತೆಯನ್ನು ಕೈಗೊಳ್ಳುತ್ತಿದ್ದೇವೆ. ಈ ಮೂಲಕ ನಮ್ಮ ವ್ಯವಸ್ಥೆ ಕೂಡ ಒಮ್ಮೆ ಮತ್ತೆ ಪರೀಕ್ಷೆಗೆ ಒಳ ಪಡುತ್ತದೆ. ಇದರಿಂದ ನಾವು ಇನ್ನಷ್ಟು ಸುಸಜ್ಜಿತವಾಗಿ ಇರಲು ಸಾಧ್ಯವಾಗಲಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version